janadhvani

Kannada Online News Paper

ಚು.ಆಯೋಗವನ್ನು ನೇಮಿಸುವ ಸಮಿತಿಯಲ್ಲಿ ಸು.ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಸ್ಥಾನವಿಲ್ಲ

143 ಸಂಸದರನ್ನು ಆಮಾನತುಗೊಳಿಸಿ, ಸಂಸತ್ತಿನಲ್ಲಿ ನಿರ್ಣಾಯಕ ಮಸೂದೆಗಳನ್ನು ಅಂಗೀಕರಿಸಲಾಗಿದೆ

ನವದೆಹಲಿ: ಪ್ರತಿಪಕ್ಷಗಳ ಮೂರನೇ ಎರಡರಷ್ಟು ಸಂಸದರು ಅಮಾನತುಗೊಂಡಿರುವ ಸಮಯದಲ್ಲೇ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ವಿವಾದಾತ್ಮಕ ಮಸೂದೆಗಳನ್ನು ಅಂಗೀಕರಿಸಿದೆ. ಕೇಂದ್ರ ಮುಖ್ಯ ಚುನಾವಣಾ ಆಯೋಗ ಮತ್ತು ಆಯುಕ್ತರನ್ನು ಆಯ್ಕೆ ಮಾಡುವ ಮಾರ್ಗಸೂಚಿಗಳನ್ನು ಒಳಗೊಂಡಿರುವ ಮಹತ್ವದ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದರೆ, ರಾಜ್ಯಸಭೆಯಲ್ಲಿ ಟೆಲಿಕಾಂ ಮಸೂದೆಯನ್ನು ಅಂಗೀಕರಿಸಲಾಯಿತು.

ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವ ಉದ್ದೇಶ ಹೊಂದಿರುವ ಮೂರು ಮಸೂದೆಗಳಿಗೆ ಲೋಕಸಭೆಯು ಬುಧವಾರ ಅಂಗೀಕಾರ ನೀಡಿತ್ತು.

ಅತ್ಯಂತ ವಿವಾದಾತ್ಮಕವಾದ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ, 2023 ಅನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.ಈ ತಿಂಗಳ ಆರಂಭದಲ್ಲಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ ನಂತರವೂ ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿತ್ತು.

ಈ ಮಸೂದೆಯು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮೂವರು ಸದಸ್ಯರ ನೇಮಕಕ್ಕೆ ಕಾರ್ಯವಿಧಾನಗಳನ್ನು ರೂಪಿಸುವ ಉದ್ದೇಶ ಹೊಂದಿದೆ. ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ಒಳಗೊಂಡ ಸಮಿತಿಯು ಚುನಾವಣಾ ಆಯೋಗವನ್ನು ಆಯ್ಕೆ ಮಾಡಬೇಕೆಂಬ ಸುಪ್ರೀಂ ಕೋರ್ಟ್‌ನ ಸೂಚನೆಗೆ ಈ ಮಸೂದೆಯು ವಿರುದ್ಧವಾಗಿದೆ.

ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಬೇಕು ಎಂದು ಈ ವರ್ಷದ ಮಾರ್ಚ್‌ನಲ್ಲಿ, ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ತೀರ್ಪು ನೀಡಿತ್ತು. ಅಲ್ಲದೆ, ಚುನಾವಣೆ ಆಯುಕ್ತರ ಆಯ್ಕೆ ಪ್ರಕ್ರಿಯೆ ಕುರಿತು ಸಂಸತ್ತು ಹೊಸ ಕಾನೂನನ್ನು ರೂಪಿಸುವವರೆಗೂ ಈ ತೀರ್ಪು ಜಾರಿಯಲ್ಲಿರುತ್ತದೆ ಎಂದೂ ಹೇಳಿತ್ತು.

ಚುನಾವಣಾ ಆಯುಕ್ತರ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ಈ ನಿರ್ದೇಶನವನ್ನು ನೀಡಿದೆ. ಆದರೂ, ಸುಪ್ರೀಂ ಕೋರ್ಟ್ ಅನ್ನು ಚುನಾವಣೆ ಆಯುಕ್ತರ ಆಯ್ಕೆ ಪ್ರಕ್ರಿಯೆಯಿಂದ ದೂರವಿಡುವ ಪ್ರಯತ್ನ ಹೊಸ ಮಸೂದೆಯಲ್ಲಿ ಸ್ಪಷ್ಟವಾಗಿದೆ. ಹೊಸ ಮಸೂದೆಯು ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಆಯ್ಕೆ ಸಮಿತಿಯಿಂದ ಕೈಬಿಟ್ಟಿದೆ.

ಅಲ್ಲದೆ, ನಿವೃತ್ತ ಅಥವಾ ಹಾಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರುಗಳು ತಮ್ಮ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಅಥವಾ ಸಿವಿಲ್ ಮೊಕದ್ದಮೆಗಳನ್ನು ನ್ಯಾಯಾಲಯ ನಡೆಸುವುದನ್ನು ಕೂಡ ಹೊಸ ಮಸೂದೆಯು ನಿಷೇಧಿಸುತ್ತದೆ.

ಅಮಾನತುಗಳ ಭರಾಟೆಯ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರತಿಪಕ್ಷಗಳ ಸದಸ್ಯರು ಸದನದ ಹೊರಗೆ ಇರುವ ಸಂದರ್ಭದಲ್ಲಿ ಈ ಮಹತ್ವದ ಹಾಗೂ ವಿವಾದಾತ್ಮಕ ಮಸೂದೆಯನ್ನು ಅಂಗೀಕರಿಸಲಾಗಿದೆ.

ಗುರುವಾರ ಲೋಕಸಭೆಯಲ್ಲಿ ಮಸೂದೆ ಮೇಲಿನ ಚರ್ಚೆಯ ಸಂದರ್ಭದಲ್ಲಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು, ಉನ್ನತ ಚುನಾವಣಾ ಅಧಿಕಾರಿಗಳ ಸೇವಾ ಷರತ್ತುಗಳ ಮೇಲಿನ 1991 ರ ಕಾಯ್ದೆಯ ಅರೆಬೆಂದ ವಿಷಯವಾಗಿದೆ. ಅಲ್ಲದೆ, ಪ್ರಸ್ತುತ ಮಸೂದೆಯು ಹಿಂದಿನ ಶಾಸನದಿಂದ ಕೈಬಿಟ್ಟ ಕ್ಷೇತ್ರಗಳನ್ನು ಒಳಗೊಂಡಿದೆ ಎಂದರು. ನಂತರ ಮಸೂದೆಯನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು.

error: Content is protected !! Not allowed copy content from janadhvani.com