ಬೆಂಗಳೂರು: ಮುಸ್ಲಿಂ ವಿದ್ವಾಂಸರ ಬಗ್ಗೆ ಸುಳ್ಳು ಆರೋಪ ಹೊರಿಸಿ ಸಮಾಜದಲ್ಲಿ ಅಶಾಂತಿಗೆ ಪ್ರಯತ್ನಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಲ್ ರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ಆಗ್ರಹಿಸಿದೆ.
ಡಿಸೆಂಬರ್ 4 ರಂದು ಹುಬ್ಬಳ್ಳಿ ತಾಲೂಕಿನ ಪಾಳೆ ಗ್ರಾಮದಲ್ಲಿ ಮುಖ್ಯಮಂತ್ರಿಗಳು ಪಾಳ್ಗೊಂಡಿದ್ದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಐಸಿಸ್ ಬೆಂಬಲಿತ ವ್ಯಕ್ತಿಗಳು ಪಾಳ್ಗೊಂಡಿದ್ದರೆಂಬ ಯತ್ನಾಳರ ಆರೋಪ ಸತ್ಯಕ್ಕೆ ದೂರವಾಗಿದ್ದು ಕಪೋಕಲ್ಪಿತ ಹೇಳಿಕೆಯೆಂದು ಮುಸ್ಲಿಂ ಜಮಾಅತ್ ತಿಳಿಸಿದೆ. ಯತ್ನಾಳರು ತಮ್ಮ ಆರೋಪವನ್ನು ಕೂಡಲೇ ಸಾಬೀತುಗೊಳಿಸಬೇಕು ಅದಿಲ್ಲದಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದೂ ಕರ್ನಾಟಕ ಮುಸ್ಲಿಂ ಜಮಾಅತ್ ಆಗ್ರಹಿಸಿದೆ.
ಯತ್ನಾಳರು ಆರೋಪ ಮಾಡಿರುವ ಸಮಾರಂಭದ ವೇದಿಕೆಯಲ್ಲಿದ್ದ ಎಲ್ಲರ ವಿವರ ಪೋಲೀಸ್, ಗುಪ್ತಚರ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ತಿಳಿದಿದ್ದರೂ ಅವರು ಯಾರಿಗೂ ತಿಳಿಯದ ವಿವರ ಯತ್ನಾಳರಿಗೆ ತಿಳಿದದ್ದು ವಿಪರ್ಯಾಸವೇ ಸರಿ, ಯತ್ನಾಳರು ಈ ಹಿಂದೆಯೂ ಮುಸ್ಲಿಮರ ಬಗ್ಗೆ ಇಲ್ಲಸಲ್ಲದ ಆರೋಪ ಹೊರಿಸುತ್ತಲೇ ಬಂದಿದ್ದಾರೆ, ಸಮಾಜದಲ್ಲಿ ಕೋಮು ವೈಷಮ್ಯ ಸೃಷ್ಟಿಸಲು ಯತ್ನಿಸುತ್ತಿರುವ ಇಂತಹ ಸಮಾಜಫಾತಕ ಶಕ್ತಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಜಮಾಅತ್ ಒತ್ತಾಯಿಸಿದೆ.
ಈ ಬಗ್ಗೆ ರಾಜ್ಯದ ರಾಜ್ಯಪಾಲರಿಗೆ ಮುಖ್ಯಮಂತ್ರಿ, ಗ್ರಹಮಂತ್ರಿ ಮತ್ತು ವಿಧಾನ ಸಭಾಧ್ಯಕ್ಷರಿಗೆ ಪತ್ರ ಬರೆದಿರುವ ಕರ್ನಾಟಕ ಮುಸ್ಲಿಂ ಜಮಾಅತ್ ಶಾಸಕರ ವಿರುಧ್ಧ ಸೂಕ್ತ ಕ್ರಮಕ್ಕಾಗಿ ಮನವಿ ನೀಡಿದೆ.