janadhvani

Kannada Online News Paper

ಹಾರಾಟ ಮಧ್ಯೆ ಎಮಿರೇಟ್ಸ್ ವಿಮಾನ ವಾಯು ಪ್ರಕ್ಷುಬ್ಧತೆಗೆ ಬಲಿ- ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಗಾಯ

ಪರ್ತ್‌ನಿಂದ ದುಬೈಗೆ ತೆರಳುತ್ತಿದ್ದ ಎಮಿರೇಟ್ಸ್ ಏರ್‌ಲೈನ್ಸ್ ಇಕೆ421 ವಿಮಾನವನ್ನು ಆಕಾಶ ಸುಳಿ ಹಿಡಿದು ಅಲ್ಲಾಡಿಸಿದೆ.

ದುಬೈ: ಪರ್ತ್‌ನಿಂದ ದುಬೈಗೆ ಹೊರಟಿದ್ದ ವಿಮಾನವು ಅನಿರೀಕ್ಷಿತವಾಗಿ ಆಕಾಶ ಸುಳಿಗೆ (ಟರ್ಬುಲೆನ್ಸ್) ಬಡಿದು ಪ್ರಯಾಣಿಕರು ಮತ್ತು ಸಿಬ್ಬಂದಿ ಗಾಯಗೊಂಡಿದ್ದಾರೆ. ಎಮಿರೇಟ್ಸ್ ಏರ್‌ಲೈನ್ಸ್ ವಿಮಾನ ಪರ್ತ್‌ನಿಂದ ದುಬೈಗೆ ಪ್ರಯಾಣ ಬೆಳೆಸಿತ್ತು. ವಿಮಾನವು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ.

ಡಿಸೆಂಬರ್ 4 ಸೋಮವಾರದಂದು ಈ ಘಟನೆ ನಡೆದಿದೆ. ಪರ್ತ್‌ನಿಂದ ದುಬೈಗೆ ತೆರಳುತ್ತಿದ್ದ ಎಮಿರೇಟ್ಸ್ ಏರ್‌ಲೈನ್ಸ್ ಇಕೆ421 ವಿಮಾನವನ್ನು ಆಕಾಶ ಸುಳಿ ಹಿಡಿದು ಅಲ್ಲಾಡಿಸಿದೆ. ವಿಮಾನದಲ್ಲಿದ್ದ ಕೆಲವು ಪ್ರಯಾಣಿಕರು ಮತ್ತು ಸಿಬ್ಬಂದಿ ಗಾಯಗೊಂಡಿದ್ದಾರೆ ಮತ್ತು ವಿಮಾನವು ತನ್ನ ಪ್ರಯಾಣವನ್ನು ಮುಂದುವರೆಸಿ ಸ್ಥಳೀಯ ಕಾಲಮಾನ 4:45 ಕ್ಕೆ ದುಬೈ ತಲುಪಿದೆ ಎಂದು ಎಮಿರೇಟ್ಸ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ತರಬೇತಿ ಪಡೆದ ಸಿಬ್ಬಂದಿ ಮತ್ತು ಸ್ವಯಂಸೇವಕರು ವಿಮಾನದಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ನೆರವು ನೀಡಿದ್ದಾರೆ ಎಂದು ಎಮಿರೇಟ್ಸ್ ವಕ್ತಾರರು ತಿಳಿಸಿದ್ದಾರೆ.

ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಪ್ರಯಾಣಿಕರಿಗೆ ಹೆಚ್ಚುವರಿ ವೈದ್ಯಕೀಯ ನೆರವನ್ನು ಸಹ ಖಾತ್ರಿಪಡಿಸಲಾಗಿತ್ತು.Turbulence (ಪ್ರಕ್ಷುಬ್ಧತೆ) ಎಂಬುದು ವಾಯುಯಾನದಲ್ಲಿ ಸಾಮಾನ್ಯವಾಗಿ ಬಳಸುವ ಪದವಾಗಿದೆ. ಪ್ರಕ್ಷುಬ್ಧತೆಯು ಗಾಳಿಯ ಒತ್ತಡ ಮತ್ತು ವೇಗದಲ್ಲಿನ ಹಠಾತ್ ಬದಲಾವಣೆಯಾಗಿದ್ದು ಅದು ವಿಮಾನವನ್ನು ಎಳೆದು, ತಳ್ಳುತ್ತದೆ. ಇಂತಹಾ ಸಂದರ್ಭಗಳಲ್ಲಿ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸದಿರುವುದು ಹೆಚ್ಚು ಅಪಾಯಕ್ಕೆ ಕಾರಣವಾಗಲಿದೆ.

error: Content is protected !! Not allowed copy content from janadhvani.com