ದುಬೈ: ಯುಎಇಯ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ದುಬೈ ಮತ್ತು ಶಾರ್ಜಾದಲ್ಲಿ ಮಳೆಯ ಜೊತೆಗೆ ಜೋರಾದ ಗುಡುಗು ಸಹಿತ ಭಾರೀ ಮಳೆಯಾಯಿತು. ಶುಕ್ರವಾರ ಬೆಳಗ್ಗೆ ಆರಂಭವಾದ ಮಳೆ ಹಲವು ಗಂಟೆಗಳ ಕಾಲ ಸುರಿಯಿತು. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಹಲವೆಡೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ದುಬೈನ ಕರಾಮಾ, ಸಿಲಿಕಾನ್ ಓಯಸಿಸ್, ಮುಹೈಸಿನಾ ಮತ್ತು ಶಾರ್ಜಾದ ಅಲ್ ನಹ್ದಾದಲ್ಲಿ ರಸ್ತೆಗಳು ಜಲಾವೃತವಾಗಿವೆ. ಪ್ರತಿಕೂಲ ಹವಾಮಾನವು ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರಿದೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಮತ್ತು ಆಗಮಿಸುವ ಸುಮಾರು 20 ವಿಮಾನಗಳ ಸೇವೆಗಳ ಮೇಲೆ ಹವಾಮಾನ ಪರಣಾಮ ಬೀರಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹವಾಮಾನ ಇಲಾಖೆಯು ಹಳದಿ ಎಚ್ಚರಿಕೆ ನೀಡಿದೆ. ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಶುಕ್ರವಾರ ಯುಎಇಯ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ರಾಷ್ಟ್ರೀಯ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿತ್ತು. ಅಜ್ಮಾನ್, ರಾಸ್ ಅಲ್-ಖೈಮಾ ಮತ್ತು ಉಮ್ ಅಲ್-ಖುವೈನ್‌ನಲ್ಲಿ ದೂರಶಿಕ್ಷಣವನ್ನು ಪ್ರಸ್ತಾಪಿಸಲಾಗಿತ್ತು. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಮಾನವ ಸಂಪನ್ಮೂಲ ಸಚಿವಾಲಯವು ಖಾಸಗಿ ವಲಯದ ಉದ್ಯೋಗಿಗಳಿಗೆ ಸೂಚಿಸಿದೆ.