ಬೆಂಗಳೂರು: ನಗರದ ಲುಲು ಮಾಲ್ನಲ್ಲಿ ಯುವತಿಯ ಹಿಂಭಾಗ ಮುಟ್ಟಿ ವಿಕೃತಿ ಮೆರೆದ ವಿಡಿಯೋ ಇತ್ತೀಚೆಗಷ್ಟೇ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಇದೀಗ ವೀಡಿಯೊ ದೃಶ್ಯ ಆಧರಿಸಿ ಆರೋಪಿಯ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಸವೇಶ್ವರನಗರ ನಿವಾಸಿ ಅಶ್ವಥ್ ನಾರಾಯಣ್ (60) ಆರೋಪಿ. ಮೂರು ದಿನಗಳ ಹಿಂದೆ ಲುಲು ಮಾಲ್ ನಲ್ಲಿ ಯವತಿಯರ ಜೊತೆ ಅಸಭ್ಯವಾಗಿ ಅಶ್ವಥ್ ನಾರಾಯಣ್ ವರ್ತಿಸಿದ್ದ. ಈ ವೇಳೆ ಯುವಕ ಯಶವಂತ್ ವೀಡಿಯೊ ಚಿತ್ರೀಕರಿಸಿದ್ದ.
ವೀಡಿಯೊ ವೈರಲ್ ಬಳಿಕ ಲುಲು ಮ್ಯಾನೇಜರ್ ಕೇಸ್ ದಾಖಲಿಸಿದ್ರು. ವೀಡಿಯೊ ಆಧರಿಸಿ ಸದ್ಯ ಆರೋಪಿಯ ಗುರುತನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿ ಪ್ರತಿಷ್ಠಿತ ಮಠಕ್ಕೆ ಸೇರಿದ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ನಿವೃತ್ತನಾಗಿದ್ದ. ಕಳೆದ ಎಂಟು ತಿಂಗಳ ಹಿಂದೆ ಅಶ್ವಥ್ ನಾರಾಯಣ್ ನಿವೃತ್ತನಾಗಿದ್ದ. ಸದ್ಯ ಅಶ್ವಥ್ ನಾರಾಯಣ್ ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದು, ಆತನ ಪತ್ತೆಗೆ ಮಾಗಡಿ ರೋಡ್ ಪೊಲೀಸ್ರು ಹುಡುಕಾಟ ಮುಂದುವರೆಸಿದ್ದಾರೆ.
ಘಟನೆ?:
ಅಕ್ಟೋಬರ್ 29ರಂದು ಸಂಜೆ ಆರುವರೆ ಸುಮಾರಿಗೆ ಮಾಲ್‌ನ ಎರಡನೇ ಮಹಡಿಯ ಫಂಚುರ್ ಗೇಮ್ ಫ್ಲೋರ್‌ನಲ್ಲಿ ವ್ಯಕ್ತಿಯೋರ್ವ ಯುವತಿ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಆಕೆಯ ದೇಹವನ್ನು ಮುಟ್ಟಿದ್ದಾನೆ. ಲೈಂಗಿಕವಾಗಿ ಪ್ರಸ್ತಾಪಿಸುವ ಸಲುವಾಗಿಯೇ ಮಹಿಳೆಯ ಹಿಂಬದಿಯಲ್ಲಿ ಆಕೆಯನ್ನು ಅಶ್ಲೀಲವಾಗಿ ಮುಟ್ಟಿದ್ದಾನೆ. ಬಳಿಕ ತನಗೇನೂ ತಿಳಿದಿಲ್ಲ ಎಂಬಂತೆ ಆಲ್ಲಿಂದ ಪರಾರಿಯಾಗಿದ್ದಾನೆ. ಈ ವಿಡಿಯೋ ಗ್ರಾಹಕರೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿದ್ದು, yesh_fitspiration ಎನ್ನುವ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋ ಅಪ್ಲೋಡ್ ಆಗಿತ್ತು. ಲುಲು ಮಾಲ್ ಅಧಿಕಾರಿ ಇದೀಗ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಮಾಗಡಿ ರಸ್ತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ವಿಡಿಯೋ ಆಧಾರದ ಮೇಲೆ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.