janadhvani

Kannada Online News Paper

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ವಜಾ- ಹೆಚ್‌ಡಿಕೆ ನೂತನ ಅಧ್ಯಕ್ಷ

‘ಜೆಡಿಎಸ್‌ ರಾಜ್ಯ ಘಟಕಕ್ಕೆ ನಾನೇ ಅಧ್ಯಕ್ಷ. ನನ್ನನ್ನು ಕೆಳಗಿಳಿಸುವ ಅಧಿಕಾರ ರಾಜ್ಯ ಉನ್ನತ ನಾಯಕರ ಸಭೆಗೆ ಇಲ್ಲ'-ಸಿಎಂ

ಬೆಂಗಳೂರು: ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ ಘೋಷಣೆಯ ಬಳಿಕ ಪಕ್ಷದ ವರಿಷ್ಠರ ವಿರುದ್ಧ ಮುನಿಸಿಕೊಂಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರನ್ನು ಇದೀಗ ಪಕ್ಷದಿಂದಲೇ ಉಚ್ಛಾಟಿಸಲಾಗಿದೆ. ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಅವರು ಈ ಬಗ್ಗೆ ಹೇಳಿದ್ದಾರೆ.

ಜೆಡಿಎಸ್- ಬಿಜೆಪಿ ಮೈತ್ರಿ ಬಳಿಕ ಇತ್ತೀಚೆಗೆ ಇಬ್ರಾಹಿಂ ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ನಮ್ಮದೇ ಒರಿಜಿನಲ್ ಜೆಡಿಎಸ್, ಕುಮಾರಸ್ವಾಮಿ ಮಾಡಿದ ಮೈತ್ರಿಗೆ ಒಪ್ಪಿಗೆಯಿಲ್ಲ ಎಂದಿದ್ದರು.

ನಗರದ ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಹಿಂದಿನ ಅಧ್ಯಕ್ಷರ ಹೇಳಿಕೆಯನ್ನು ನಾನು ಪ್ರಸ್ತಾಪ ಮಾಡುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ, ಜೆಡಿಎಸ್ ಕೋರ್ ಕಮಿಟಿ ಸದಸ್ಯರ ಸಭೆ ಕರೆದು ಚರ್ಚೆ ನಡೆಸಿದ್ದೇವೆ, ಎಲ್ಲರ ಅಭಿಪ್ರಾಯ ಪಡೆದು ಸಿ.ಎಂ.ಇಬ್ರಾಹಿಂ ಉಚ್ಚಾಟಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.ಸಿಎಂ ಇಬ್ರಾಹಿಂರಿಂದ ತೆರವಾದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್ ಡಿ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.

ಜೆಡಿಎಸ್ ರಾಜ್ಯ ಘಟಕಕ್ಕೆ ನಾನೇ ಅಧ್ಯಕ್ಷ- ಸಿಎಂ

ಬೆಂಗಳೂರು: ‘ಜೆಡಿಎಸ್‌ ರಾಜ್ಯ ಘಟಕಕ್ಕೆ ನಾನೇ ಅಧ್ಯಕ್ಷ. ನನ್ನನ್ನು ಕೆಳಗಿಳಿಸುವ ಅಧಿಕಾರ ರಾಜ್ಯ ಉನ್ನತ ನಾಯಕರ ಸಭೆಗೆ ಇಲ್ಲ. ಅವರ ನಿರ್ಧಾರವನ್ನು ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇನೆ. ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತೇನೆ’ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು. ಪಕ್ಷದ ರಾಜ್ಯ ಘಟಕ ವಿಸರ್ಜನೆ ಕುರಿತು ಗುರುವಾರ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

‘ನನ್ನ ಪುತ್ರನನ್ನು ಕಳೆದುಕೊಂಡು ಹುಬ್ಬಳ್ಳಿ ಈದ್ಗಾ ಸಮಸ್ಯೆ ಬಗೆಹರಿಸಿದ್ದೆ. ಜೆಡಿಎಸ್‌ ಸರ್ಕಾರ ಗಟ್ಟಿ ಮಾಡಿದ್ದೆ. ಈಗ ತಮ್ಮ ಪುತ್ರನ ಸಲುವಾಗಿ ಅನ್ಯರ ಮಕ್ಕಳನ್ನು ದೇವೇಗೌಡರು ಬಲಿ ಕೊಡುತ್ತಿದ್ದಾರೆ. ಮಹಾಭಾರತದಲ್ಲಿ ಧೃತರಾಷ್ಟ್ರನಿಗಾದ ಸ್ಥಿತಿಯೇ ದೇವೇಗೌಡರಿಗೂ ಬರಲಿದೆ’ ಎಂದರು.

‘ಪಕ್ಷದ ಕಾರ್ಯಕಾರಿ ಸಮಿತಿ ವಿಸರ್ಜಿಸಿದ ನಂತರ ಕುಮಾರಸ್ವಾಮಿಗೇ ಏಕೆ ಪಟ್ಟ ನೀಡಿದರು. ಜಿ.ಟಿ.ದೇವೇಗೌಡಗೆ ನೀಡಬಹುದಿತ್ತಲ್ಲ. ನಾನು ನಾಲ್ಕು ವರ್ಷಗಳ ಅವಧಿ ಇದ್ದ ವಿಧಾನ ಪರಿಷತ್ ಸ್ಥಾನ ತೊರೆದು ಪಕ್ಷಕ್ಕೆ ಬಂದೆ. ಇನ್ನೂ ಎಷ್ಟು ಮನೆ ಹಾಳು ಮಾಡಿದ್ದೀರಿ. 90 ವರ್ಷವಾಗಿದೆ. ಇನ್ನಾದರೂ ನಿಲ್ಲಿಸಿ. ನನ್ನನ್ನು ಕೆಣಕಿದರೆ ನೆಟ್ಟಗಿರುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

error: Content is protected !! Not allowed copy content from janadhvani.com