22 ವರ್ಷಗಳ ಹಿಂದಿನ ಸೇಡು ತೀರಿಸಿ ಕೊಂಡರೇ ವಜುಭಾಯ್ ವಾಲಾ?

ಬೆಂಗಳೂರು,ಮೇ.17-ಕರ್ನಾಟಕ ವಿಧಾನಸಭೆಯ ಅತಂತ್ರ ಪರಿಸ್ಥಿತಿಯಲ್ಲಿ ಬಹುಮತವಿಲ್ಲದಿದ್ದರೂ ಅತಿ ಹೆಚ್ಚು ಶಾಸಕರನ್ನು ಹೋಂದಿರುವ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಿದ ರಾಜ್ಯಪಾಲ ವಜುಭಾಯ್ ವಾಲಾ ಮಾಜಿ ಪ್ರಧಾನಿ ದೇವೇಗೌಡ ಅವರ ಜೊತೆಗಿನ 22 ವರ್ಷಗಳ ಸೇಡನ್ನು ತೀರಿಸಿಕೊಂಡಿದ್ದಾರೆ.!

ಸುಮಾರು ೨೨ ವರ್ಷಗಳ ಹಿಂದೆ ಹೆಚ್.ಡಿ.ದೇವೇಗೌಡ ಅವರು ಪ್ರಧಾನಿ ಆಗಿದ್ದಾಗ ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ ಪತನವಾಗಿತ್ತು. ಆಗ ಅಲ್ಲಿನ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿದ್ದವರು ಇಂದಿನ ಕರ್ನಾಟಕದ ರಾಜ್ಯಪಾಲ ವಜುಭಾಯ್ ವಾಲಾ.

ಕರ್ನಾಟಕದ ದೇವೇಗೌಡ ಹಾಗೂ ಗುಜರಾತ್‌ನ ವಜುಭಾಯ್ ವಾಲಾಗೂ ಎಲ್ಲಿನ ಸಂಬಂಧ ಎನ್ನುವ ಪ್ರಶ್ನೆ ಸಹಜ. ಆದರೆ, ಇವರಿಬ್ಬರರ ನಡುವೆ ಹಳೆಯ ಕಹಿ ಘಟನೆ ಈಗ ರಾಜ್ಯದೆಲ್ಲಡೆ ಚರ್ಚೆಗೆ ಗ್ರಾಸವಾಗಿದೆ.

ಅದು ದೇವೇಗೌಡ ಪ್ರಧಾನಿಯಾಗಿದ್ದ ಸಮಯ. 1996 ರಲ್ಲಿ ಗುಜರಾತ್‌ನಲ್ಲಿ ಇದ್ದ ಬಿಜೆಪಿ ಸರ್ಕಾರ ರಾಜಕೀಯ ಬಿಕ್ಕಟ್ಟಿನಿಂದ ಪತನಗೊಂಡಿತ್ತು. ಸರ್ಕಾರದ ವಿರುದ್ಧ ಅವಿಸ್ವಾಸ ನಿರ್ಣಯ ಮಂಡನೆಯಾಗಿ ವಿಶ್ವಾಸಮತ ಯಾಚನೆ ವೇಳೆ ಸದನದಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾಗಿತ್ತು. ಗದ್ದಲದ ನಡುವೆ ಬಿಜೆಪಿ ಸರ್ಕಾರ ವಿಶ್ವಾಸ ಮತ ಗೆದ್ದಿತ್ತು.

ಆದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಕಾಂಗ್ರೆಸ್ ನಾಯಕರು ಅಂದಿನ ಗುಜರಾತ್ ರಾಜ್ಯಪಾಲ ಕೃಷ್ಣಪಾಲ್ ಸಿಂಗ್‌ಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಕಾಂಗ್ರೆಸ್‌ನವರೇ ಆಗಿದ್ದ ರಾಜ್ಯಪಾಲರು ನೇರವಾಗಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದ್ದರು.

ಪ್ರಧಾನಿ ದೇವೇಗೌಡ ಕೂಡ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ರಾಷ್ಟ್ರಪತಿ ಅವರಿಗೆ ಶಿಫಾರಸ್ಸು ಮಾಡಿದ್ದರು. ಆಗ ಗುಜರಾತ್‌ನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದದ್ದು ಇಂದು ಕರ್ನಾಟಕ ರಾಜ್ಯಪಾಲರಾಗಿರುವ ಇದೇ ವಾಜುಭಾಯ್ ವಾಲಾ.

ಸದ್ಯ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ದೇವೇಗೌಡ ನೇತೃತ್ವದ ಜೆಡಿಎಸ್ ಸರ್ಕಾರ ರಚಿಸಲು ಮುಂದಾಗಿತ್ತು. ಆದರೆ, ರಾಜ್ಯಪಾಲ ವಾಲಾ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಕೊಟ್ಟಿರುವುದು ರಾಜಕೀಯ ವಲಯದಲ್ಲಿ ಹಳೆ ನೆನೆಪನ್ನು ತೆರೆದಿಟ್ಟಿದೆ.

Leave a Reply

Your email address will not be published. Required fields are marked *

error: Content is protected !!