ದುಬೈ: ಯುಎಇಯಾದ್ಯಂತ 2311 ಖೈದಿಗಳನ್ನು ರಮಝಾನ್ ಪ್ರಯುಕ್ತ ಜೈಲುಗಳಿಂದ ಮುಕ್ತಿಗೊಳಿಸಲಾಗುತ್ತಿದೆ.
ವಿವಿಧ ಜೈಲುಗಳಲ್ಲಿ ಬಂಧಿಗಳಾದ ವಿದೇಶೀ ಖೈದಿಗಳೂ ಈ ಅನುಕೂಲದ ಪ್ರಯೋಜನ ಪಡೆದಿದ್ದಾರೆ.ದುಬೈ ಜೈಲಿಂದ ಮಾತ್ರ 700 ಖೈದಿಗಳನ್ನು ಬಂಧಮುಕ್ತಿಗೊಳಿಸಲು ಯುಎಇ ಪ್ರಧಾನಿ, ದುಬೈ ಆಡಳಿತಾಧಿಕಾರಿ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಂ ಆದೇಶಿಸಿದ್ದಾರೆ.
ಹೊಸ ಬಾಳು ನಡೆಸುವವರಿಗೆ ಇದೊಂದು ಸುವರ್ಣಾವಸರವಾಗಿದೆ.ಕ್ಷಮೆ ನೀಡಲಾದ ಬಂಧಿತರನ್ನು ಬಿಟ್ಟು ಬಿಡುವ ಕ್ರಮ ಪ್ರಾರಂಭಿಸಲಾಗಿದೆ ಎಂದು ದುಬೈ ಅಟಾರ್ನಿ ಜನರಲ್ ಇಸ್ಸಾಂ ಇಸ್ಸ ಅಲ್ ಹುಮೈದಾನ್ ತಿಳಿಸಿದ್ದಾರೆ.
ರಾಸಲ್‌ಖೈಮಾದಿಂದ 302 ಖೈದಿಗಳನ್ನು ಬಂಧಮುಕ್ತಿಗೊಳಿಸಲು ಸುಪ್ರಿಂ ಕೌನ್ಸಿಲ್ ನ ಸದಸ್ಯ, ಎಮಿರೇಟ್ಸ್ ನ ಅಡಳಿತಾಧಿಕಾರಿ ಶೈಖ್ ಸೌದ್ ಬಿನ್ ಸಖರ್ ಅಲ್ ಖಾಸಿಮಿ ಆದೇಶ ನೀಡಿದ್ದು, ಅವರ ಆರ್ಥಿಕ ಬಾಧ್ಯತೆಯನ್ನು ಆಡಳಿತಾಧಿಕಾರಿ ವಹಿಸಿಕೊಂಡಿದ್ದಾರೆ.
ಅಜ್ಮಾನ್‌ನಿಂದ 70 ಖೈದಿಗಳಿಗೆ ಕ್ಷಮಾಪಣೆ ಲಭಿಸಿರುವುದಾಗಿ ಸುಪ್ರೀಂ ಕೌನ್ಸಿಲ್ ಸದಸ್ಯ, ಎಮಿರೇಟ್‌ನ ಆಡಳಿತಾಧಿಕಾರಿ ಶೈಖ್ ಹುಮೈದ್ ಬಿನ್ ರಾಶಿದ್ ಅಲ್ ನುಐಮಿ ಆದೇಶ ನೀಡಿದ್ದಾರೆ.
ಈ ಹಿಂದೆ ಅಬುಧಾಬಿಯಿಂದ 935 ಬಂಧಿಗಳನ್ನು ಬಿಡುಗಡೆಗೊಳಿಸಲು ಆಡಳಿತಾಧಿಕಾರಿ ಶೈಖ್ ಖಲೀಫಾ ಬಿನ್ ಝಾಯಿದ್ ಆಲ್ ನಹ್ಯಾನ್ ಆದೇಶ ನೀಡಿದ್ದರು.
ವಿವಿಧ ದೇಶಗಳ 304 ಖೈದಿಗಳಿಗೆ ಕ್ಷಮಾಪಣೆ ನೀಡಲು ಶಾರ್ಜಾ ಆಡಳಿತಾಧಿಕಾರಿ ಶೈಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಆದೇಶಿಸಿದ್ದಾರೆ. ಖೈದಿಗಳಲ್ಲಿ ಉಂಟಾದ ಮಾನಸ ಪರಿವರ್ತನೆ ಯನ್ನು ಮನಗಂಡು ಅಂತಹವರನ್ನು ಈ ಕ್ಷಮಾದಾನಕ್ಕೆ ಪರಿಗಣಿಸಲಾಗಿದೆ ಎಂದು ವರದಿಯಾಗಿದೆ.