janadhvani

Kannada Online News Paper

ಹಳೆಯ ದತ್ತಾಂಶ ಅಳಿಸದ ಇವಿಎಮ್ ಬಳಕೆ- ವಿವಿಪ್ಯಾಟ್‌ಗಳ ಎಣಿಕೆ ಮಾಡಲು ಮುಂದಾದ ಚುನಾವಣಾಧಿಕಾರಿ

ಬೆಂಗಳೂರು (ಮೇ 15) : ರಾಜ್ಯದ ವಿವಿಧೆಡೆ 44 ಮತಯಂತ್ರದಲ್ಲಿ ಹಳೆಯ ದತ್ತಾಂಶ ಅಳಿಸದ ಕಾರಣ ಅಲ್ಲಿ ಬಳಕೆಯಾದ ವಿವಿಪ್ಯಾಟ್‌ಗಳ ಮೂಲಕ ಎಣಿಕೆ ಮಾಡಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗಾಗಿ ಹೊರ ರಾಜ್ಯದಿಂದ ತರಲಾದ ಇವಿಎಂಗಳಲ್ಲಿ ಹಳೆಯ ದತ್ತಾಂಶಗಳನ್ನು ಅಳಿಸಬೇಕು. ಆದರೆ, 44 ಮತಯಂತ್ರಗಳಲ್ಲಿನ ದತ್ತಾಂಶ ಅಳಿಸದಿರುವ ಬಗ್ಗೆ ಗೊತ್ತಾಗಿದೆ. ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡಿರುವುದರಿಂದ ಅಲ್ಲಿನ ಮಾಹಿತಿಯ ಆಧಾರದ ಮೇಲೆ ಎಣಿಕೆ ಕಾರ್ಯ ನಡೆಸಲಾಗುವುದು. ಅಲ್ಲದೇ, ಇವಿಎಂನಲ್ಲಿನ ಹಳೆಯ ದತ್ತಾಂಶಗಳನ್ನು ಬಿಟ್ಟು ಉಳಿದ ದತ್ತಾಂಶಗಳನ್ನು ಲೆಕ್ಕ ಹಾಕಲಾಗುವುದು ಎಂದು ಹೇಳಿದರು.

ದೇಶದಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗಿದೆ. ಮತ ಎಣಿಕ ನಡೆಯುವಾಗ ಪ್ರತಿ ವಿಧಾನಸಭಾ ಕ್ಷೇತ್ರದ ಒಂದರಂತೆ ವಿವಿಪ್ಯಾಟ್ ಯಂತ್ರಗಳನ್ನು ತೆರೆದು ಅಲ್ಲಿರುವ ಮುದ್ರಿತ ಪ್ರತಿಗಳನ್ನು ಲೆಕ್ಕ ಹಾಕಿ ಮತಯಂತ್ರದಲ್ಲಿ ಬರುವ ಫಲಿತಾಂಶವನ್ನು ತಾಳೆ ಮಾಡಲಾಗುವುದು.

ಮತಯಂತ್ರವನ್ನು ಯಾವುದೇ ರೀತಿಯಲ್ಲಿಯೂ ತಿರುಚಲು ಸಾಧ್ಯವಿಲ್ಲ. ಹೆಚ್ಚು ಖಚಿತತೆಯಿಂದ ಕೂಡಿರುತ್ತದೆ ಎನ್ನುವುದನ್ನು ವಿವಿಪ್ಯಾಟ್‌ನ ಮುದ್ರಿತ ಪ್ರತಿಗಳು ಮತ್ತು ಮತಯಂತ್ರಗಳು ಖಚಿತ ಪಡಿಸುತ್ತವೆ ಎಂದರು. ವಿವಿಪ್ಯಾಟ್‌ಗಳಲ್ಲಿನ ಮುದ್ರಿತ ಪ್ರತಿಗಳನ್ನು ಲೆಕ್ಕ ಹಾಕಲು ಅನುವಾಗುವಂತೆ ಪಾರದರ್ಶಕ ಪೆಟ್ಟಿಗೆಯಲ್ಲಿ ಸಣ್ಣ ಸಣ್ಣ ಬಾಕ್ಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.

ಮತಗಟ್ಟೆಯಲ್ಲಿ ಹಾಜರಿರುವ ರಾಜಕೀಯ ಪಕ್ಷಗಳ ನಾಯಕರ ಸಮ್ಮುಖದಲ್ಲಿ ತೆಗೆದು ಅವರ ಮುಂದೆ ವಿಂಗಡಿಸಿ ಬಳಿಕ ಲೆಕ್ಕ ಹಾಕಲಾಗುವುದು ಎಂದು ತಿಳಿಸಿದರು.

error: Content is protected !! Not allowed copy content from janadhvani.com