janadhvani

Kannada Online News Paper

ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಿ ಪಡೆದ ದಿನ- ಸರ್ವರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಸ್ವಾತಂತ್ರ್ಯದ 76 ವರ್ಷಗಳನ್ನು ಪೂರೈಸಿರುವ ಭಾರತವು 2023ರ ಆಗಸ್ಟ್ 15ರಂದು 77ನೇ ಸ್ವಾತಂತ್ರ್ಯ ದಿನದ ಉತ್ಸವದ ಆಚರಣೆ ಮಾಡುತ್ತಿದೆ.

ಮಂಗಳೂರು: ಭಾರತವು ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ.ಆದರೆ, 2023ರಲ್ಲಿ ನಾವು ಆಚರಿಸುತ್ತಿರುವ ಸ್ವಾತಂತ್ರ್ಯೋತ್ಸವವು 76ನೇಯದೋ ಅಥವಾ 77ನೇ ಸ್ವಾತಂತ್ರ್ಯೋತ್ಸವವೋ ಎಂಬ ಬಗ್ಗೆ ಹಲವರಲ್ಲಿ ಗೊಂದಲವಿದೆ.

ಬ್ರಿಟಿಷ್ ಆಡಳಿತದಿಂದ ಮುಕ್ತಿ ಪಡೆದ ದಿನವನ್ನು ದೇಶಾದ್ಯಂತ ಹಬ್ಬದಂತೆ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಆಗಸ್ಟ್ 15 ರಂದು, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ದೇಶದ ಸ್ವಾತಂತ್ರ್ಯವನ್ನು ಸ್ಮರಿಸಲು ಭಾರತದಾದ್ಯಂತ ಜನರು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾರೆ. ನಮ್ಮ ಹೆಮ್ಮೆ ಹಾಗೂ ದೇಶಭಕ್ತಿಯ ಪ್ರತೀಕವಾಗಿ ಇಡೀ ದೇಶವೇ ತ್ರಿವರ್ಣದಿಂದ ಕಂಗೊಳಿಸುತ್ತದೆ. 1947ರ ಆಗಸ್ಟ್ 14ರ ಮಧ್ಯರಾತ್ರಿ ಕಳೆದ ಬಳಿಕ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಕಾರಣ ಆಗಸ್ಟ್ 15ನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿತ್ತು.

ಎರಡು ಶತಮಾನಗಳ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಿ ಪಡೆದ ದಿನವಾಗಿ, ಭಾರತದ ಏಕತೆಯ, ಸಾರ್ವಭೌಮತೆಯ ಪ್ರತೀಕವಾಗಿ ಈ ದಿನ ಎಲ್ಲೆಲ್ಲೂ ತ್ರಿವರ್ಣ ಧ್ವಜವು ಪಟಪಟನೆ ಹಾರುತ್ತಿರುತ್ತದೆ, ರಾಷ್ಟ್ರಗೀತೆ, ದೇಶಭಕ್ತಿಗೀತೆಗಳ ಮೊಳಗುವಿಕೆಯೊಂದಿಗೆ, ಭಾರತವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಳಿಸಲು ತಮ್ಮ ಬೆವರು, ನೆತ್ತರು ಹರಿಸಿದ ಮಹಾನ್ ನಾಯಕರನ್ನು ಸ್ಮರಿಸಿ, ಅವರ ತ್ಯಾಗ, ಬಲಿದಾನ ಹಾಗೂ ದೇಶಭಕ್ತಿಯನ್ನು ಕೊಂಡಾಡುವ ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತವೆ.

ಆದರೆ, ಇಷ್ಟೆಲ್ಲ ಸಡಗರದ ಮಧ್ಯೆ ನಮ್ಮದು 76ನೇ ಸ್ವಾತಂತ್ರ್ಯೋತ್ಸವವೇ ಅಥವಾ 77ನೇ ಸ್ವತಂತ್ರ ದಿವಸವೇ? ಯಾವುದು ಸರಿ ಎಂಬ ಗೊಂದಲ ಹಲವರಲ್ಲಿ ಇರುತ್ತದೆ. ಈ ಬಗ್ಗೆ ಇಲ್ಲಿದೆ ಸ್ಪಷ್ಟ ಮಾಹಿತಿ.

1947ರ ಆಗಸ್ಟ್ 15ರಂದು ಬ್ರಿಟಿಷರ ಕಪಿಮುಷ್ಟಿಯಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಅದು ಐತಿಹಾಸಿಕ ದಿನವಾಗಿದ್ದು, ಮೊದಲ ಸ್ವಾತಂತ್ರ್ಯ ಉತ್ಸವವನ್ನು ಆ ದಿನ ಆಚರಿಸಲಾಗಿದೆ ಮತ್ತು ಅದರ ಸ್ಮರಣೆಗಾಗಿ ಪ್ರತೀ ವರ್ಷ ಆಗಸ್ಟ್ 15ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆ ನಡೆಸಲಾಗುತ್ತದೆ.

1948ರ ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯದ ಮೊದಲ ವರ್ಷದ ಆಚರಣೆ ನಡೆಯಿತು. ಅಂದರೆ ಅದು ಎರಡನೇ ಸ್ವಾತಂತ್ರ್ಯ ದಿನಾಚರಣೆ. ಇದರ ಪ್ರಕಾರ, 2023ರ ಆಗಸ್ಟ್ 15ರಂದು ನಾವು ಆಚರಿಸುತ್ತಿರುವುದು 77ನೇ ಸ್ವಾತಂತ್ರ್ಯ ದಿನಾಚರಣೆ ಅಥವಾ ಸ್ವಾತಂತ್ರ್ಯೋತ್ಸವ. ಮತ್ತು ಇದು ಭಾರತ ಸ್ವಾತಂತ್ರ್ಯದ 76ನೇ ವರ್ಷಾಚರಣೆಯೂ ಹೌದು.

1947ರ ಆಗಸ್ಟ್ 15 ಮೊದಲ ಸ್ವಾತಂತ್ರ್ಯೋತ್ಸವದ ದಿನ ಅಥವಾ ಮೊದಲ ಸ್ವಾತಂತ್ರ್ಯ ದಿನಾಚರಣೆ. 1948ನೇ ಇಸವಿಯ ಆಗಸ್ಟ್ 15 ಭಾರತ ಸ್ವಾತಂತ್ರ್ಯದ ಮೊದಲ ವರ್ಷ ಪೂರ್ಣಗೊಂಡ ದಿನ. ಅಂದರೆ ಸ್ವಾತಂತ್ರ್ಯದ ಮೊದಲ ವರ್ಷಾಚರಣೆ ದಿನ.

ಹೀಗಾಗಿ, ಸ್ವಾತಂತ್ರ್ಯದ 76 ವರ್ಷಗಳನ್ನು ಪೂರೈಸಿರುವ ಭಾರತವು 2023ರ ಆಗಸ್ಟ್ 15ರಂದು 77ನೇ ಸ್ವಾತಂತ್ರ್ಯ ದಿನದ ಉತ್ಸವದ ಆಚರಣೆ ಮಾಡುತ್ತಿದೆ.

ಈ ವರ್ಷದ ಸ್ವಾತಂತ್ರ್ಯ ದಿನದ ಥೀಮ್ ‘ಆಜಾದಿ ಕಾ ಅಮೃತ್ ಮಹೋತ್ಸವ’ ಉಪಕ್ರಮದೊಂದಿಗೆ ಹೊಂದಿಕೆಯಾಗುವ ‘ರಾಷ್ಟ್ರ ಮೊದಲು, ಯಾವಾಗಲೂ ಮೊದಲು’. ಈ ವಿಶೇಷ ಸಂದರ್ಭದ ಆಚರಣೆಯನ್ನು ಗುರುತಿಸಲು ಕೇಂದ್ರ ಸರ್ಕಾರವು ಹರ್ ಘರ್ ತಿರಂಗ ಅಭಿಯಾನದ ಎರಡನೇ ಆವೃತ್ತಿಯನ್ನು ಪ್ರಾರಂಭಿಸಿದೆ. ಈ ಅಭಿಯಾನವು ಜನರನ್ನು ತಮ್ಮ ಮನೆಗಳು, ಕಚೇರಿಗಳು ಮತ್ತು ಕೆಲಸದ ಸ್ಥಳಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಪ್ರೇರೇಪಿಸುತ್ತದೆ.

ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ಇಂದು ಮತೀಯ ಭಯೋತ್ಪಾದಕರ ಅಟ್ಟಹಾಸದಲ್ಲಿ ನಲುಗುತ್ತಿದೆ.ದೇಶವು ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ಆಚರಿಸುವ ಈ ವೇಳೆಯಲ್ಲಿ ಮಣಿಪುರ, ಹರ್ಯಾಣದಂತ ರಾಜ್ಯಗಳಲ್ಲಿ ಮತೀಯ ದುಷ್ಕರ್ಮಿಗಳಿಂದ, ತಮ್ಮ ಕುಟುಂಬ ಸದಸ್ಯರನ್ನೂ, ಮನೆ, ಮಠಗಳನ್ನೂ ಕಳಕೊಂಡಿರುವ ನಿರಾಶ್ರಿತರ ಅಳಲು, ಗೋಳುಗಳನ್ನು ಕಂಡು ಕೇಳರಿಯದಂತೆ ನಟಿಸಿ ಭಾರತದಲ್ಲಿ ಸ್ವಾತಂತ್ರೋತ್ಸವವನ್ನು ಆಚರಿಸಲು ಸಾಧ್ಯವೇ?

ಭಾರತವು ಶಾಂತಿಯ, ಸೌಹಾರ್ದತೆಯ ನೆಲೆಬೀಡಾಗಲಿ ಎಂಬ ಹಾರೈಕೆಯೊಂದಿಗೆ, ಸಮಸ್ತ ಬಾಂಧವರಿಗೆ 77 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

error: Content is protected !! Not allowed copy content from janadhvani.com