janadhvani

Kannada Online News Paper

ಕೇರಳದ ಮಾಜಿ ಸಿಎಂ, ಹಿರಿಯ ಕಾಂಗ್ರೆಸ್ ಮುಖಂಡ ಉಮ್ಮನ್ ಚಾಂಡಿ ಇನ್ನಿಲ್ಲ

ಅವರು ಮುಖ್ಯಮಂತ್ರಿಯಾಗಿದ್ದಾಗ ಜನರ ಅಹವಾಲು ಆಲಿಸಲು ಆರಂಭಿಸಿದ 'ಜನಸಂಪರ್ಕ ಪರಿಪಾಡಿ' ಜನಪ್ರಿಯವಾಗಿತ್ತು.

ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಉಮ್ಮನ್ (79)ನಿಧನ ಹೊಂದಿದ್ದಾರೆ. ಬೆಂಗಳೂರಿನ ಚಿನ್ಮಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಂಗಳವಾರ ಮುಂಜಾನೆ 4.25ಕ್ಕೆ ಕೊನೆಯುಸಿರೆಳೆದಿದ್ದಾರೆ.

ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು, ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಬೆಂಗಳೂರಿಗೆ ಅವರನ್ನು ವರ್ಗಾಯಿಸಲಾಗಿತ್ತು.

ಉಮ್ಮನ್ ಚಾಂಡಿ ಅವರು ಕಳೆದ 50 ವರ್ಷಗಳಿಗೂ ಹೆಚ್ಚು ಕಾಲ ಕೋಟ್ಟಯಂ ಜಿಲ್ಲೆಯ ಪುತ್ತುಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅವರು ಸದ್ಯ ಪುತ್ತುಪಲ್ಲಿ ಶಾಸಕರಾಗಿದ್ದರು.

ಚಾಂಡಿ ಅವರು 1970 ರಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಪುತ್ತುಪಲ್ಲಿಯನ್ನು ಮೊದಲ ಬಾರಿಗೆ ಪ್ರತಿನಿಧಿಸಿದ್ದರು. ಅವರು 1977 ರಲ್ಲಿ ಕೆ ಕರುಣಾಕರನ್ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾಗಿದ್ದರು. ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದರು. ಅಲ್ಲದೆ, ರಾಜ್ಯದಲ್ಲಿ ಹಣಕಾಸು ಖಾತೆಯನ್ನು ನಿಭಾಯಿಸಿದ್ದರು ಮತ್ತು ವಿರೋಧ ಪಕ್ಷದ ನಾಯಕರೂ ಆಗಿದ್ದರು.

ಚಾಂಡಿ ಜನರೊಂದಿಗೆ ಉತ್ತಮ ಸಂಪರ್ಕ ಸಾಧಿಸುತ್ತಿದ್ದರು. ಅವರು ಮುಖ್ಯಮಂತ್ರಿಯಾಗಿದ್ದಾಗ ಜನರ ಅಹವಾಲು ಆಲಿಸಲು ಆರಂಭಿಸಿದ ‘ಜನಸಂಪರ್ಕ ಪರಿಪಾಡಿ’ ಜನಪ್ರಿಯವಾಗಿತ್ತು.

ಚಾಂಡಿ ಅವರ ನಿಧನಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಕೇರಳದ ಮಾಜಿ ಮುಖ್ಯಮಂತ್ರಿ ನಿಧನಕ್ಕೆ ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್ ಸಂತಾಪ ಸೂಚಿಸಿದ್ದಾರೆ.

‘ಪ್ರೀತಿಯಿಂದ ಜಗತ್ತನ್ನು ಗೆದ್ದ ರಾಜನ ಕಥೆಯು ಇದೀಗ ಅಂತ್ಯ ಕಂಡಿದೆ. ಇಂದು, ನಾವು ದಂತಕಥೆಯಾದ ಉಮ್ಮನ್ ಚಾಂಡಿ ಅವರನ್ನು ಕಳೆದುಕೊಂಡಿದ್ದೇವೆ. ಇದರಿಂದ ನನಗೆ ತುಂಬಾ ದುಃಖವಾಗಿದೆ. ಅವರು ಅಸಂಖ್ಯಾತ ವ್ಯಕ್ತಿಗಳ ಜೀವನವನ್ನು ಮತ್ತು ಅವರ ಪರಂಪರೆಯನ್ನು ಬೆಳಗಿಸಿದ್ದರು. ನಮ್ಮ ಆತ್ಮಗಳಲ್ಲಿ ಎಂದೆಂದಿಗೂ ಅವರು ಪ್ರತಿಧ್ವನಿಸುತ್ತಾರೆ’ ಎಂದು ಸುಧಾಕರನ್ ಟ್ವೀಟ್ ಮಾಡಿದ್ದಾರೆ.

ಉಮ್ಮನ್ ಚಾಂಡಿ ಅವರು ಪತ್ನಿ ಮರಿಯಮ್ಮ ಮತ್ತು ಮಕ್ಕಳಾದ ಮರಿಯಾ ಉಮ್ಮನ್, ಚಾಂಡಿ ಉಮ್ಮನ್ ಮತ್ತು ಅಚ್ಚು ಉಮ್ಮನ್ ಅವರನ್ನು ಅಗಲಿದ್ದಾರೆ.

error: Content is protected !! Not allowed copy content from janadhvani.com