janadhvani

Kannada Online News Paper

ಏಕರೂಪ ನಾಗರಿಕ ಸಂಹಿತೆ ಕೇವಲ ರಾಜಕೀಯ ಲಾಭಕ್ಕಾಗಿ- ರಜ್ವೀ

ಕೇಂದ್ರ ಸರ್ಕಾರವು ಹೊಸ ಹೊಸ ಕಾನೂನುಗಳನ್ನು ಜಾರಿಗೆ ತಂದಲ್ಲಿ ದೇಶದ ಸಂಸ್ಕೃತಿಗೆ ಧಕ್ಕೆ ಬರುವಲ್ಲಿ ಯಾವುದೇ ಸಂಶಯವಿಲ್ಲ

ಚಿಕ್ಕಮಗಳೂರು :ದೇಶದಲ್ಲಿ ಸಮಾನ ನಾಗರೀಕ ಸಂಹಿತೆ UCC ಜಾರಿ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ಧೋರಣೆ ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿ ಮುಂದಿನ ಲೋಕಸಭೆ ಚುನಾವಣೆಯ ಅಸ್ತ್ರವನ್ನಾಗಿ ಬಳಸುವ ಹುನ್ನಾರ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಕರ್ನಾಟಕ ಮುಸ್ಲಿಂ ಜಮಾತ್ ಜಿಲ್ಲಾ ಕಾರ್ಯದರ್ಶಿಯಾದ ಆಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ದೇಶದಲ್ಲಿ ಯಾವುದೇ ಒಂದು ಕಾನೂನನ್ನು ರೂಪಿಸಲು ಸಂಬಂಧಪಟ್ಟ ಇಲಾಖೆಯಿಂದ ಮೊದಲು ಕರಡು ಪ್ರತಿಯನ್ನು ತಯಾರು ಮಾಡಿಸಿ, ದೇಶಾದ್ಯಂತ ಬಿಡುಗಡೆಗೊಳಿಸಿ ಅದರ ಸಾಧಕ ಬಾಧಕಗಳನ್ನು ಚರ್ಚೆ ಮಾಡಿದ ನಂತರ ಸಲಹೆಗಳನ್ನು ಪಡೆದು ಕ್ರಮ ಕೊಳ್ಳಬಹುದಾಗಿರುತ್ತದೆ.

ಇದೀಗ ಈ ರೀತಿಯ ಯಾವುದೇ ಕರಡು ಪ್ರತಿಯನ್ನು ತಯಾರು ಮಾಡದೆ ಕಾನೂನು ಕಮೀಷನ್ ಮೂಲಕ ಸಾರ್ವಜನಿಕವಾಗಿ ತಕರಾರು ಸಲ್ಲಿಸಲು ಪ್ರಕಟಣೆ ಹೊರಡಿಸಲಾಗಿದ್ದು, ಅಲ್ಪಸಂಖ್ಯಾತರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿರುತ್ತದೆ.

ನಮ್ಮ ದೇಶದಲ್ಲಿ ಸುಮಾರು 4635 ಜಾತಿ ಧರ್ಮಗಳನ್ನು ಹೊಂದಿದ್ದು ಆಯಾ ಧರ್ಮದ ವಿಶೇಷವಾದ ಆಚಾರ ವಿಚಾರಗಳು ವೈವಿಧ್ಯತೆ ಯಿಂದ ಕೂಡಿದ್ದು ದೇಶದ ಸಂಸ್ಕೃತಿಯ ಸೌಂದರ್ಯತೆ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಇದೀಗ ಕೇಂದ್ರ ಸರ್ಕಾರವು ಹೊಸ ಹೊಸ ಕಾನೂನುಗಳನ್ನು ಜಾರಿಗೆ ತಂದಲ್ಲಿ ದೇಶದ ಸಂಸ್ಕೃತಿಗೆ ಧಕ್ಕೆ ಬರುವಲ್ಲಿ ಯಾವುದೇ ಸಂಶಯವಿಲ್ಲ.

ನಮ್ಮ ದೇಶದಲ್ಲಿ ಪ್ರತ್ಯೇಕ ಧರ್ಮದ ವೈಯುಕ್ತಿಕ ಕಾನೂನುಗಳು ತಮ್ಮ ತಮ್ಮ ಆಚಾರ ವಿಚಾರಗಳು ಸಂಪ್ರದಾಯಗಳನ್ನು ನೆರವೇರಿಸಲು ಸಂವಿಧಾನದ 25 ರಿಂದ 28 ಪರಿಚ್ಛೇದದಲ್ಲಿ ಅವಕಾಶವಿರುತ್ತದೆ. ಅದಾಗಿ ಇಸ್ಲಾಂ ಧರ್ಮದಲ್ಲಿ ಶರಿಯತ್ ಕಾನೂನನ್ನು ಅನುಸರಿಸಿ ಜೀವನ ಸಾಗಿಸಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ ಇದನ್ನು
ಮೊಟುಕು ಗೊಳಿಸಲು ಪ್ರಯತ್ನ ಮಾಡುತ್ತಿರುವುದು ರಾಜಕೀಯ ಲಾಭಕ್ಕಾಗಿ ಎಂಬುದು ಗೋಚರಿಸುತ್ತಿದೆ.

ಈ ಹಿಂದೆ CAA ಮತ್ತು NRC ಕಾನೂನನ್ನು ಜಾರಿಗೊಳಿಸಿ ದೇಶಾದ್ಯಂತ ಗೊಂದಲಕ್ಕೀಡಾಗಿ ಪ್ರತಿಭಟನೆ ನಡೆಸಿದ ಕಾರಣ ಇಡೀ ದೇಶವೇ ಬೆಚ್ಚಿ ಬೀಳಿಸಿದ್ದ ನೆನಪು ಇಂದಿನವರೆಗೂ ಮರೆಯಲಾಗದ ಪರಿಸ್ಥಿತಿ ಎದುರಾಗಿದೆ.

ಅದಾಗಿ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡದೆ ಸಾರ್ವಭೌಮತ್ವವನ್ನು ಕಾಪಾಡಿಕೊಂಡು ಬರಬೇಕಾದದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಆದ್ದರಿಂದ ಹೊಸ ಕಾನೂನು ರೂಪಿಸಲು ದೇಶಾದ್ಯಂತ ವಿರೋಧಗಳು ಬರುತ್ತಿವೆ ಈ ಸರ್ವ ಜನರ ಶಾಂತಿಯ ತೋಟದಲ್ಲಿ ಎಲ್ಲರಿಗೂ ತಮ್ಮ ತಮ್ಮ ಧರ್ಮಾನುಸಾರ ಬದುಕಲು ಅಡ್ಡಿಯಾಗುವ ಹೊಸ ಕಾನೂನುಗಳನ್ನು ಜಾರಿಗೆ ತರುವಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ವಿರೋಧ ವ್ಯಕ್ತ ಪಡಿಸುತ್ತದೆ ಎಂದು ಜಿಲ್ಲಾ ಕರ್ಣಾಟಕ ಮುಸ್ಲಿಂ ಜಮಾತ್ ಕಾರ್ಯದರ್ಶಿಯಾದ ಆಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com