ಮಂಗಳೂರ: ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ 6ನೇ ಬ್ಲಾಕ್ ನಲ್ಲಿ ಮದ್ರಸ ವಿದ್ಯಾರ್ಥಿಯ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಸುನ್ನೀ ಮೆನೇಜ್ ಮೆಂಟ್ ಅಸೋಸಿಯೇಶನ್ (ಎಸ್.ಎಂ.ಎ) ಮತ್ತು ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್.ಜೆ.ಎಂ) ರಾಜ್ಯ ಸಮಿತಿಗಳು ತೀವ್ರವಾಗಿ ಖಂಡಿಸಿದೆ.
ಕೃಷ್ಣಾಪುರ 6ನೇ ಬ್ಲಾಕ್ ಅಲ್-ಬದ್ರಿಯಾ ಮದ್ರಸದ ಆರನೇ ತರಗತಿಯ ಶಯಾನ್ ಎಂಬ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ಮದ್ರಸ ಬಿಟ್ಟು ಮನೆಗೆ ತೆರಳುವ ಸಂದರ್ಭದಲ್ಲಿ ಸಮಾಜ ಘಾತುಕ ಶಕ್ತಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿಯ ಮನೆಗೆ ರಾಜ್ಯ ನಾಯಕರು ಭೇಟಿ ನೀಡಿ ವಿದ್ಯಾರ್ಥಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿದ ಎಸ್.ಎಂ.ಎ. ರಾಜ್ಯ ಉಪಾಧ್ಯಕ್ಷರಾದ ಹಾಜಿ ಅಬ್ದುಲ್ ಹಮೀದ್, ದ.ಕ ಜಿಲ್ಲೆಯಲ್ಲಿ ಪದೇಪದೇ ಮಸೀದಿಯನ್ನು ಮತ್ತು ಮದ್ರಸ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ದುಷ್ಟಕೃತ್ಯಗಳು ನಡೆಯುತ್ತಲೇ ಇದೆ. ಈ ಬಗ್ಗೆ ಮಾನ್ಯ ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಾನೂನಿನ ಅಡಿಯಲ್ಲಿ ಬಂಧಿಸಿ ಸೂಕ್ತ ಶಿಕ್ಷೆಗೆ ಒಳಪಡಿಸುವ ಮೂಲಕ ವಿದ್ಯಾರ್ಥಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಸಮಿತಿ ವತಿಯಿಂದ ಕಾನೂನಿನ ಚೌಕಟ್ಟಿನಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯಾಧ್ಯಕ್ಷರಾದ ಜೆಪ್ಪು ಅಬ್ದುಲ್ ರಹ್ಮಾನ್ ಮದನಿಯವರು ಮಾತನಾಡಿ, ಮದ್ರಸಾ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭಯ ಹುಟ್ಟಿಸುವ ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಪೊಲೀಸ್ ಇಲಾಖೆಯ ಮೂಲಕ ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯ ಉಪಾಧ್ಯಕ್ಷರಾದ ಕೆ.ಕೆ.ಎಂ.ಕಾಮಿಲ್ ಸಖಾಫಿ ಸುರಿಬೈಲು, ಕಾರ್ಯದರ್ಶಿ ಅಬ್ದುಲ್ ಅಝೀಝ್ ನೂರಾನಿ ಬೆಟ್ಟಂಪಾಡಿ, ಎಸ್.ಎಂ.ಎ. ದ.ಕ. ವೆಸ್ಟ್ ಜಿಲ್ಲಾಧ್ಯಕ್ಷರಾದ ಎ.ಪಿ.ಇಸ್ಮಾಯೀಲ್ ಅಡ್ಯಾರ್ ಪದವು, ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ಕೊಳಕೆ, ಜಿಲ್ಲಾ ಉಪಾಧ್ಯಕ್ಷ ಮೂಸಾ ಹಾಜಿ ಮುಡಿಪು, ಶಾಫೀ ಮದನಿ ಕುಪ್ಪೆಪದವು, ಬಿ.ಎ.ಇಕ್ಬಾಲ್ ಕೃಷ್ಣಾಪುರ, ಇಸ್ಮಾಯೀಲ್ ಕಿನ್ಯ, ಅಬ್ದುಲ್ ಲತೀಫ್ ಸುಬ್ಬಗುಳಿ ಮುಂತಾದವರು ಉಪಸ್ಥಿತರಿದ್ದರು.