ಲಾತೂರ್: ಮುಸ್ಲಿಂ ರಾಷ್ಟ್ರಗಳ ಮಾತು ಕೇಳುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದಲ್ಲಿರುವ ಮುಸ್ಲಿಮರ ಮಾತು ಕೇಳುವುದಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಬುಧವಾರ ಹೇಳಿದ್ದಾರೆ.
ಪ್ರವಾದಿ ವಿರುದ್ಧ ನೂಪುರ್ ಶರ್ಮಾ ನೀಡಿರುವ ನಿಂದನೆಯ ಹೇಳಿಕೆ ಕುರಿತು ಮಾತನಾಡಿರುವ ಉವೈಸಿ, ಕತಾರ್,ಕುವೈತ್, ಸೌದಿ ಅರೇಬಿಯಾ, ಬಹ್ರೇನ್‌ನಲ್ಲಿ ವಿರೋಧಗಳು ವ್ಯಕ್ತವಾದ ಬಳಿಕ ಬಿಜೆಪಿ ನೂಪುರ್ ಶರ್ಮಾ ವಿರುದ್ಧ ಕ್ರಮ ಕೈಗೊಂಡಿತು ಎಂದು ಹೇಳಿದ್ದಾರೆ.
ಪ್ರವಾದಿ ವಿರುದ್ಧ ನೂಪುರ್ ಮಾತನಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ಆಗ್ರಹಿಸಿದ್ದೆವು. ಆದರೆ, ಈ ವೇಳೆ ಪ್ರಧಾನಿ ಮೋದಿ ಕಿವಿಕೊಟ್ಟಿರಲಿಲ್ಲ. ಇದೀಗ ಮುಸ್ಲಿಂ ರಾಷ್ಟ್ರಗಳಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆಂದು ಹೇಳಿದ್ದಾರೆ.
ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮುಹಮ್ಮದ್ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ನೂಪುರ್ ಶರ್ಮಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮತ್ತು ಬಿಜೆಪಿ ರಾಷ್ಟ್ರೀಯ ವಕ್ತಾರೆ ಹುದ್ದೆಯಿಂದ ಭಾನುವಾರ ಅಮಾನತುಗೊಳಿಸಲಾಗಿದೆ.
ಹೇಳಿಕೆಗೆ ದೇಶ ಹಾಗೂ ವಿದೇಶಗಳಿಂದ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ನೂಪುರ್ ಶರ್ಮಾ ಅವರು ಈಗಾಗಲೇ ಕ್ಷಮೆಯಾಚಿಸಿದ್ದಾರೆ. ಆದರೂ, ವಿದೇಶಗಳಲ್ಲಿ ಹೇಳಿಕೆಗೆ ವಿರೋಧಗಳು ವ್ಯಕ್ತವಾಗುತ್ತಲೇ ಇವೆ.
ಈ ನಡುವೆ ಭಾರತ ಸರಕಾರ ತನ್ನ ಸಮರ್ಥನೆಗೆ ಸರ್ವ ಪ್ರಯತ್ನ ಮುಂದುವರಿಸಿದ್ದು ತಾನು ಎಲ್ಲಾ ಧರ್ಮಗಳನ್ನೂ ಗೌರವಿಸುತ್ತಿರುವುದಾಗಿ ಹಾಗೂ ಅಲ್ಪಸಂಖ್ಯಾತರ ವಿರುದ್ಧ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವುದಾಗಿ ಹೇಳಿದೆ.