janadhvani

Kannada Online News Paper

ಅರಬ್ ರಾಷ್ಟ್ರಗಳ ಪ್ರತಿಭಟನೆಯ ಫಲ: ದ್ವೇಷ ಭಾಷಣಕ್ಕೆ ತಡೆಯೊಡ್ಡಿದ ಬಿಜೆಪಿ

ಮಸೀದಿ ಸೇರಿ ಇತರೆ ಧರ್ಮ ಸೂಕ್ಷ್ಮ ವಿಚಾರಗಳ ಕುರಿತು ಮಾತಾಡದಂತೆ ಹೈಕಮಾಂಡ್‌ ನಿರ್ದೇಶನ ನೀಡಿದೆ.

ಬೆಂಗಳೂರು: ಅರಬ್ ರಾಷ್ಟ್ರಗಳ ಪ್ರತಿಭಟನೆಗಳು ಫಲ ಕಂಡಿದೆ. ಇತ್ತೀಚಿನ ವರದಿಗಳ ಪ್ರಕಾರ, ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಮಾಡಿದ ಧರ್ಮನಿಂದೆಯ ಹೇಳಿಕೆಗಳ ವಿವಾದದ ನಂತರ ಪಕ್ಷದಲ್ಲಿ ದ್ವೇಷದ ಭಾಷಣವನ್ನು ತಡೆಯಲು ಬಿಜೆಪಿ ಕ್ರಮ ಕೈಗೊಂಡಿದೆ.

ರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಬಿಜೆಪಿ ನಾಯಕತ್ವವು ನಿಯಮಿತವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ನಾಯಕರ ಪಟ್ಟಿಯನ್ನು ಸಂಗ್ರಹಿಸಿದೆ. ಕಳೆದ ಎಂಟು ವರ್ಷಗಳಲ್ಲಿ 38 ನಾಯಕರು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ ಎಂದು ಪಕ್ಷವು ಕಂಡುಹಿಡಿದಿದೆ. ಇವುಗಳಲ್ಲಿ 27 ಭಾಷಣಕಾರರಿಗೆ ಅಂತಹ ಭಾಷಣಗಳನ್ನು ಮರುಕಳಿಸದಂತೆ ಪಕ್ಷದ ನಾಯಕತ್ವ ಎಚ್ಚರಿಕೆ ನೀಡಿದೆ ಎಂದು ವರದಿ ತಿಳಿಸಿದೆ.

ಏತನ್ಮಧ್ಯೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತಲೆದೋರಿರುವ ಧರ್ಮ ದಂಗಲ್‌ಗೂ ತೆರೆ ಎಳೆಯಲು ಹೈಕಮಾಂಡ್‌ ಮುಂದಾಗಿದೆ. ಈ ಸಂಬಂಧ ಎಲ್ಲಾ ರಾಜ್ಯಗಳ ಬಿಜೆಪಿ ಘಟಕಗಳಿಗೆ ಬಿಜೆಪಿ ಹೈಕಮಾಂಡ್‌ ವಾರ್ನಿಂಗ್‌ ನೀಡಿದೆ.

ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ಬಳಿಕ ರಾಷ್ಟ್ರೀಯ ಬಿಜೆಪಿ ಅಲರ್ಟ್ ಆಗಿದೆ. ಧರ್ಮ ದಂಗಲ್‌ಗೆ ತೆರೆ ಎಳೆಯಲು ಬಿಜೆಪಿಯಲ್ಲಿ ಪ್ರಯತ್ನ ನಡೆದಿದೆ. ನೂಪುರ್ ಶರ್ಮಾ ಉಚ್ಚಾಟನೆ ಮೂಲಕ ರಾಜ್ಯಗಳ ಬಿಜೆಪಿ ಘಟಕಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಆ ಮೂಲಕ ಎಲ್ಲ ರಾಜ್ಯಗಳ ಬಿಜೆಪಿ ಘಟಕಗಳಿಗೆ ಹೈಕಮಾಂಡ್ ವಾರ್ನಿಂಗ್ ನೀಡಿದೆ.

ಧರ್ಮ ದಂಗಲ್ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸದಂತೆ ತಾಕೀತು ಮಾಡಿದೆ. ಮಸೀದಿ ಸೇರಿ ಇತರೆ ಧರ್ಮ ಸೂಕ್ಷ್ಮ ವಿಚಾರಗಳ ಕುರಿತು ಮಾತಾಡದಂತೆ ಹೈಕಮಾಂಡ್‌ ನಿರ್ದೇಶನ ನೀಡಿದೆ.

ಸಬ್ ಕಾ ಸಾತ್ ಸಬ್ ಕಾ ವಿಕಾಸ್ ನಿಲುವಿಗೆ ಧರ್ಮ‌ ದಂಗಲ್ ಅಡ್ಡಿಯಾಗಿದೆ. ಇನ್ಮುಂದೆ ಧರ್ಮ ಸೂಕ್ಷ್ಮ ವಿಚಾರಗಳ ಬಗ್ಗೆ ಪಕ್ಷದ ಮುಖಂಡರು, ವಕ್ತಾರರು ಹೇಳಿಕೆಗಳನ್ನು ಕೊಡಬಾರದು. ಕೆಲವು ಪ್ರಕರಣಗಳಲ್ಲಿ ಹೇಳಿಕೆ, ಅಭಿಪ್ರಾಯ ಕೊಡಲೇಬೇಕಾದ ಅನಿವಾರ್ಯತೆ ಇದ್ದರೆ ಅದರ ಬಗ್ಗೆ ಮೊದಲೇ ಗಮನಕ್ಕೆ ತಂದು ಅನುಮತಿ ಪಡೆಯಬೇಕು ಎಂದು ಖಡಕ್‌ ಸೂಚನೆ ನೀಡಿದೆ.

ಹಿಜಾಬ್‌, ಹಿಂದೂ ದೇವಾಲಯ, ಮಸೀದಿ ಸೇರಿದಂತೆ ಅನೇಕ ವಿಚಾರಗಳಿಗಾಗಿ ಬಿಜೆಪಿ ಆಡಳಿತವಿರುವ ಅನೇಕ ರಾಜ್ಯಗಳಲ್ಲಿ ಧಾರ್ಮಿಕ ಸಂಘರ್ಷ ನಡೆಯುತ್ತಿದೆ. ಇದು ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಸಮರಕ್ಕೂ ಕಾರಣವಾಗಿದೆ.

error: Content is protected !! Not allowed copy content from janadhvani.com