janadhvani

Kannada Online News Paper

ಲುಲು ಗ್ರೂಪ್‌ನೊಂದಿಗೆ ಒಪ್ಪಂದ: ಯೂಸುಫ್ ಅಲಿ ಬದಲು ‘ಎ.ವಿ.ಅನಂತ ರಾಮನ್’ ಎಂದು ಪೋಸ್ಟ್ ಹಾಕಿದ ಸಿಎಂ

ಮುಸ್ಲಿಂ ದ್ವೇಷಿಗಳಾದ ಸಂಘಪರಿವಾರದ ಬೆಂಬಲಿಗರಿಂದ ಬಚಾವಾಗಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ಈ ರೀತಿ ತಪ್ಪಾಗಿ ಬರೆದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಸ್ವಿಟ್ಸರ್ಲೆಂಡಿನ ದಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ನಿರತರಾಗಿದ್ದಾರೆ. ಈ ವೇಳೆ ಅವರು ಕೇರಳ ಮೂಲದ ಮುಸ್ಲಿಂ ಉದ್ಯಮಿ ಯೂಸುಫ್‌ಅಲಿ ಎಂ.ಎ. ಅವರೊಂದಿಗೆ ಹೂಡಿಕೆಯ ಬಗ್ಗೆ ಚರ್ಚೆ ನಡೆಸಿದ್ದು, ಎರಡು ಸಾವಿರ ಕೋಟಿ ರೂ. ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಕೇರಳ ಮೂಲದ ಮುಸ್ಲಿಂ ಉದ್ಯಮಿ ‘ಯೂಸುಫ್‌ಅಲಿ ಎಂ.ಎ.’ ಅವರ ಹೆಸರನ್ನು ಫೇಸ್‌ಬುಕ್‌ನಲ್ಲಿ ‘ಎ.ವಿ.ಅನಂತ ರಾಮನ್’ ಎಂದು ಹೆಸರಿಸಿ ಮುಖ್ಯಮಂತ್ರಿಯ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ. ಮುಸ್ಲಿಂ ದ್ವೇಷಿಗಳಾದ ಸಂಘಪರಿವಾರದ ಬೆಂಬಲಿಗರಿಂದ ಬಚಾವಾಗಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ಈ ರೀತಿ ತಪ್ಪಾಗಿ ಬರೆದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಎಂ.ಎ. ಯೂಸುಫ್ ಅಲಿ ಅವರು, ‘ಲುಲು ಗ್ರೂಪ್‌ ಇಂಟರ್‌ನ್ಯಾಷನಲ್‌’ ಕಂಪೆನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಲುಲು ಗ್ರೂಪ್ ಇಂಟರ್‌ನ್ಯಾಶನಲ್‌‌ನ ಪ್ರಧಾನ ಕಚೇರಿ ಯುಎಇಯ ಅಬುಧಾಬಿಯಲ್ಲಿದೆ. ಕಂಪೆನಿಯು ಹಲವಾರು ಹೈಪರ್‌ಮಾರ್ಕೆಟ್‌ಗಳು ಮತ್ತು ಮಾಲ್‌ಗಳನ್ನು ಹೊಂದಿದೆ. ತಿರುವನಂದಪುರಂನಲ್ಲಿರುವ ಲುಲು ಮಾಲ್‌ ಭಾರತದ 2 ನೇ ಅತೀ ದೊಡ್ಡ ಮಾಲ್‌ ಆಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕೂಡಾ ಲುಲು ಮಾಲ್ ಪ್ರಾರಂಭವಾಗಿದೆ.

—ಮುಖ್ಯಮಂತ್ರಿಯ ಪೋಸ್ಟ್ – – –

ಆದರೆ ಮುಖ್ಯಮಂತ್ರಿ ಅವರು ಫೇಸ್‌ಬುಕ್‌ನಲ್ಲಿ ಯೂಸುಫ್‌ಅಲಿ ಎಂ.ಎ. ಅವರ ಚಿತ್ರವನ್ನು ಹಾಕಿ ‘ಎ.ವಿ. ಅನಂತ ರಾಮನ್’ ಎಂದು ಹೆಸರು ಬರೆದಿದ್ದಾರೆ. ಮುಖ್ಯಮಂತ್ರಿ ತನ್ನ ಪೋಸ್ಟ್‌ನಲ್ಲಿ, “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಇಂದು ಸ್ವಿಟ್ಸರ್ಲೆಂಡಿನ ದಾವೋಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಮೆ: ಲುಲು ಗ್ರೂಪ್ ಇಂಟರ್ ನ್ಯಾಷನಲ್ ನ ನಿರ್ದೇಶಕ ಎ.ವಿ.ಅನಂತ ರಾಮನ್ ಅವರೊಂದಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಕುರಿತು ಒಪ್ಪಂದಕ್ಕೆ ಸಹಿ ಮಾಡಲಾಯಿತು” ಎಂದು ಹೆಸರಿಸಿದ್ದಾರೆ.

“ರಾಜ್ಯದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಲುಲು ಗ್ರೂಪ್ ರಾಜ್ಯದಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದ್ದು, 4 ಶಾಪಿಂಗ್ ಮಾಲ್ ಮತ್ತು ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಮೂಲಕ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ” ಎಂದು ಸಿಎಂ ಬರೆದಿದ್ದಾರೆ.
ಇಷ್ಟೇ ಅಲ್ಲದೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ತನ್ನ ಪೋಸ್ಟ್‌ ಅನ್ನು ಇಂಗ್ಲಿಷ್‌ನಲ್ಲಿ ಕೂಡಾ ಬರೆದಿದ್ದು, ಆದರೆ ಅದರಲ್ಲಿ ಉದ್ಯಮಿಯ ಹೆಸರನ್ನು ಉಲ್ಲೇಖಿಸಿಲ್ಲ.

ಇಂ‌ಗ್ಲಿಷ್‌ನಲ್ಲಿ, “LuLu Group and Govt of Karnataka signed MoU for setting up of 4 Shopping Malls and Hypermarkets and 100% export oriented food stores for agricultural products processing. These malls are being targeted in Tier 2 cities in Karnataka. Rs 2000 Cr will be invested by Lulu Group in Karnataka and will generate 10,000+ employment opportunities” ಎಂದು ಬರೆದಿದ್ದಾರೆ.

ಇದರ ಅರ್ಥ ಸಂಕ್ಷಿಪ್ತವಾಗಿ ಹೀಗಿದೆ; “ಲುಲು ಗ್ರೂಪ್ ಮತ್ತು ಕರ್ನಾಟಕ ಸರ್ಕಾರವು ಕೃಷಿ ಉತ್ಪನ್ನಗಳ ಸಂಸ್ಕರಣೆಗಾಗಿ 100% ರಫ್ತು ಆಧಾರಿತ ಆಹಾರ ಮಳಿಗೆಗಳು 4 ಶಾಪಿಂಗ್ ಮಾಲ್‌ಗಳು ಮತ್ತು ಹೈಪರ್‌ಮಾರ್ಕೆಟ್‌ಗಳನ್ನು ಸ್ಥಾಪಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಕರ್ನಾಟಕದ ಎರಡನೇ ಹಂತದ ನಗರಗಳಲ್ಲಿ ಈ ಮಾಲ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಕರ್ನಾಟಕದಲ್ಲಿ ಲುಲು ಗ್ರೂಪ್‌ನಿಂದ ರೂ 2000 ಕೋಟಿ ಹೂಡಿಕೆ ಮಾಡಲಾಗುವುದು ಮತ್ತು ಇದು 10,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ”

ಇದು ಮಾತ್ರವಲ್ಲದೆ ಮುಖ್ಯಮಂತ್ರಿ ಅವರು ತಮ್ಮ ಫೇಸ್ಬುಕ್ ಪೇಜ್‌ನಲ್ಲಿ ಕೂಡಾ ಈ ಬಗ್ಗೆ ಬರೆದ್ದಾರೆ. ಆದರೆ ಅದರಲ್ಲಿ ಕೂಡಾ ಉದ್ಯಮಿಯ ಹೆಸರನ್ನು ಬರೆದಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತ ವಿನಯ್ ಕಸ್ವೆ ಅವರು, “ಮುಖ್ಯಮಂತ್ರಿಗಳ ಅಧಿಕೃತ ಹ್ಯಾಂಡಲ್ ನಲ್ಲಿ ಒಂದು ಸೂಕ್ಷ್ಮ ಗಮನಿಸಿ. ಮುಸ್ಲಿಂ ಉದ್ಯಮಿ ಯೂಸುಫ್ ಅಲಿ ಮಾಲೀಕತ್ವದ ಲುಲು ಗ್ರೂಪ್ ನೊಂದಿಗೆ ರಾಜ್ಯದಲ್ಲಿ 2000 ಕೋಟಿ ಹೂಡಿಕೆಯ ಒಪ್ಪಂದಕ್ಕೆ ಸಹಿ ಹಾಕಿದ್ದಾರಂತೆ. ಸಿಎಂ ಅವರು ಯೂಸುಫ್ ಅಲಿಯವರನ್ನು ಭೇಟಿಯಾಗಿದ್ದಾರೆ, ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ, ಫೋಟೋದಲ್ಲೂ ಯೂಸುಫ್ ಅಲಿ ಇದ್ದಾರೆ.

ಆದರೆ ಕನ್ನಡದಲ್ಲಿ ನಿರ್ದೇಶಕ ಅನಂತ್ ರಾಮನ್ ಹೆಸರನ್ನು ಮಾತ್ರ ಹಾಕಿದ್ದಾರೆ. ಯೂಸುಫ್ ಅಲಿ ಹೆಸರು ಹಾಕಲು ಹಿಂದೇಟು ಹಾಕಿದ್ದಾರೆ… ಯಾಕೆ ನಾಚಿಕೆಯೇ? ಸಂಘಪರಿವಾರದ ಬೆಂಬಲಿಗರು ಬೇಸರಿಕೊಂಡಾರು ಎಂಬ ಹಿಂಜರಿಕೆಯೇ? ಮುಗಿಬಿದ್ದಾರು ಎಂಬ ಭಯವೇ” ಎಂದು ಪ್ರಶ್ನಿಸಿದ್ದಾರೆ.
“ಇಂಗ್ಲಿಷ್ ಅನುವಾದದಲ್ಲಿ ಯಾರ ಹೆಸರನ್ನೂ ಹಾಕಿಲ್ಲ…ಮಾಲೀಕನ ಹೆಸರು ಬಿಟ್ಟು ನಿರ್ದೇಶಕನ ಹೆಸರು ಹಾಕಿದ್ದಾರೆ ಎಂಬ ವಿವಾದ ಆಗದಿರಲಿ ಎಂದೇ? ಅಲ್ಲಿಯವರು ಇಂಗ್ಲಿಷ್ ನಲ್ಲಿ ಓದಿಕೊಂಡು ತರಾಟೆಗೆ ತೆಗೆದುಕೊಳ್ಳದಿರಲಿ ಎಂದೇ?” ಎಂದು ಅವರು ಪ್ರಶ್ನಿಸಿದ್ದಾರೆ.

error: Content is protected !! Not allowed copy content from janadhvani.com