janadhvani

Kannada Online News Paper

ಯುಎಇ ಅಧ್ಯಕ್ಷ ಶೈಖ್ ಖಲೀಫಾ ನಿಧನ- ಭಾರತಾದ್ಯಂತ ಒಂದು ದಿನ ಶೋಕಾಚರಣೆ

ಶನಿವಾರ ಇಡೀ ದಿನ ರಾಜ್ಯದಾದ್ಯಂತ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.

ನವದೆಹಲಿ,ಮೇ.14: ಶುಕ್ರವಾರ ನಿಧನರಾಗಿರುವ ಅರಬ್‌ ಸಂಯುಕ್ತ ಸಂಸ್ಥಾನಗಳ (ಯುಎಇ) ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಶೈಖ್‌ ಖಲೀಫಾ ಬಿನ್‌ ಝಾಯಿದ್‌ ಆಲ್‌ ನಹ್ಯಾನ್‌ ಗೌರವಾರ್ಥ ದೇಶಾದ್ಯಂತ ಶನಿವಾರ ಒಂದು ದಿನದ ಮಟ್ಟಿಗೆ ಶೋಕಾಚರಣೆ ಘೋಷಿಸಲಾಗಿದೆ.ಈ ಬಗ್ಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಮತ್ತು ಎಲ್ಲಾ ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳಿಗೆ ಸುತ್ತೋಲೆಯನ್ನು ಹೊರಡಿಸಿದೆ.

ಶೈಖ್ ಖಲೀಫಾ ಅಬುಧಾಬಿನಲ್ಲಿ ನಿಧನರಾಗಿದ್ದರು. ಅವರ ಗೌರವಾರ್ಥ ರಾಜ್ಯದಲ್ಲೂ ಒಂದು ದಿನ ಶೋಕಾಚರಣೆ ಘೋಷಿಸಲಾಗಿದೆ. ಶನಿವಾರ ಇಡೀ ದಿನ ರಾಜ್ಯದಾದ್ಯಂತ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ನಿಯಮಿತವಾಗಿ ರಾಷ್ಟ್ರಧ್ವಜವನ್ನು ಹಾರಿಸುವ ಸರ್ಕಾರದ ಎಲ್ಲ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಶಿಷ್ಟಾಚಾರ ವಿಭಾಗ ಆದೇಶ ಹೊರಡಿಸಿದೆ.

2004ರ ನವೆಂಬರ್‌ 3ರಿಂದ ಶೇಖ್‌ ಖಲೀಫಾ ಯುಎಇ ಅಧ್ಯಕ್ಷರಾಗಿದ್ದರು.ಯುಎಇಯ ಎರಡನೇ ಅಧ್ಯಕ್ಷ ಮತ್ತು ಅಬುಧಾಬಿ ಎಮಿರೇಟ್‌ನ 16 ನೇ ಆಡಳಿತಗಾರ ಶೈಖ್ ಖಲೀಫಾ ಅವರು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶೈಖ್ ಖಲೀಫಾ ಅವರ ಆಳ್ವಿಕೆಯಲ್ಲಿ ಯುಎಇ ತ್ವರಿತ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ತನ್ನ ತಂದೆ ಶೈಖ್ ಝಾಯಿದ್ ಸ್ಥಾಪಿಸಿದ ಮಾರ್ಗವನ್ನು ಮುಂದುವರಿಸುವುದು ಅವರ ಗುರಿಯಾಗಿತ್ತು.

ಯುಎಇ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು, ಶೈಖ್‌ ಖಲೀಫಾ ಅವರ ನಿಧನಕ್ಕೆ ಸಂತಾಪ ಸೂಚಿಸಿ 40 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಸಂತಾಪ ಸೂಚಕವಾಗಿ ಬಾವುಟಗಳನ್ನು ಅರ್ಧಕ್ಕೆ ಇಳಿಸಲಾಗುತ್ತದೆ. ಸಚಿವಾಲಯದ ಕಚೇರಿಗಳು, ಸರ್ಕಾರಿ ಇಲಾಖೆಗಳು, ಬ್ಯಾಂಕ್‌ಗಳು ಮತ್ತು ಸ್ಥಳೀಯ ಸಂಸ್ಥೆಗಳು ಶುಕ್ರವಾರದಿಂದ 40 ದಿನಗಳ ಕಾಲ ಸೇವೆ ಸ್ಥಗಿತ ಮಾಡಲಿವೆ.

error: Content is protected !! Not allowed copy content from janadhvani.com