ಖಾಸಗಿ ಎಂಜಿನಿಯರ್ ಕಾಲೇಜುಗಳಿಗೆ ಶೇ. 50ರಷ್ಟು ಶುಲ್ಕ ಹೆಚ್ಚಿಸಲು ಒತ್ತಾಯ

ಬೆಂಗಳೂರು,ಏ.16-ರಾಜ್ಯದ ಖಾಸಗಿ ಎಂಜಿನಿಯರ್ ಕಾಲೇಜುಗಳು ಪದವಿ ಪೂರ್ವ ಕೋರ್ಸ್‍ಗಳಿಗೆ ಶೇ. 50ರಷ್ಟು ಶುಲ್ಕ ಏರಿಸಬೇಕೆಂದು ಒತ್ತಾಯಿಸಿದ್ದು, ಈ ಬಾರಿ ರಚನೆಯಾಗುವ ನೂತನ ಸರ್ಕಾರ ಶುಲ್ಕ ಏರಿಕೆಗೆ ಅನುಮತಿ ನೀಡಬೇಕು, ಇಲ್ಲದಿದ್ದರೇ ನಾವು ಒಮ್ಮತದ ಒಪ್ಪಂದಕ್ಕೆ ಸಹಿ ಮಾಡುವುದಿಲ್ಲ ಎಂದು ರಾಜ್ಯ ಅನುದಾನ ರಹಿತ ಖಾಸಗಿ ಎಂಜನಿಯರಿಂಗ್ ಕಾಲೇಜುಗಳ ಒಕ್ಕೂಟದ ಕಾರ್ಯದರ್ಶಿ ಎಂ.ಕೆ ಪಾಂಡುರಂಗ ಶೆಟ್ಟಿ ಹೇಳಿದ್ದಾರೆ.

2018 ಮತ್ತು 2019ನೇ ಸಾಲಿನ ಶೈಕ್ಷಣಿಕ ವರ್ಷದ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪದವಿ ಪೂರ್ವ ಕೋರ್ಸ್ ಗಳಿಗೆ ಶೇ. 10ರಷ್ಟ ಶುಲ್ಕ ಏರಿಕೆಯಾಗಲಿದೆ. ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ 77 ಸಾವಿರ ಹಾಗೂ ಕಾಮೆಡ್ ಕೆ ಕೋಟಾದಡಿಯ ಸೀಟುಗಳಿಗೆ 6.32 ಲಕ್ಷ ರೂ. ಪಾವತಿಸಬೇಕಾಗಿದೆ. ಹಾಗೆಯೇ ದಂತ ವೈದ್ಯಕೀಯ ಕೋರ್ಸ್‍ಗಳಿಗೆ 49 ಸಾವಿರದಿಂದ 4.29 ಲಕ್ಷ ರೂ.ಗೆ ಏರಿಕೆಯಾಗಲಿದೆ. ಚುನಾವಣೆ ಘೋಷಣೆಯಾಗಿರುವುದರ ಹಿನ್ನೆಲೆಯಲ್ಲಿ ಇನ್ನೂ ಶುಲ್ಕ ರಚನೆ ಬಗ್ಗೆ ಚರ್ಚಿಸಿಲ್ಲ, ಹೊಸ ಸರ್ಕಾರ ರಚನೆಯಾಗಿ ಅಧಿಕಾರಕ್ಕೆ ಬರುವವರೆಗೂ ಚರ್ಚಿಸದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

2017-18ನೇ ಸಾಲಿನಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ ಶುಲ್ಕ ನಿಗದಿ ಮಾಡುವಾಗ ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗುವಂತೆ ಶೇ, 10 ರಷ್ಚು ಶುಲ್ಕ ಏರಿಕೆ ಮಾಡಲಾಗಿತ್ತು, ಹೀಗಾಗಿ ಕರಾರಿನ ಪ್ರಕಾರ ಈ ವರ್ಷದಿಂದ ಶೇ.10 ಶುಲ್ಕ ಏರಿಕೆ ಅನ್ವಯವಾಗಲಿದೆ, ಹಾಗೂ 2019 ಮತ್ತು 20ನೇ ಸಾಲಿನಲ್ಲೂ ಶೇ.10 ರಷ್ಟು ಶುಲ್ಕ ಏರಿಕೆಯಾಗಲಿದೆ ಎಂದು ಕರ್ನಾಟಕ ವೃತ್ತಿಪರ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಎಂ,ಆರ ಜಯರಾಮ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!