ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಲಭೆಕೋರರೆಂದು ಆರೋಪಿಸಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ನಡೆಸುತ್ತಿರುವ ಮನೆ ತೆರವು ಕಾರ್ಯ ವಿಚಾರವಾಗಿ ಇಂದು ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಜಹಾಂಗೀರ್‌ಪುರಿ ಬುಲ್ಡೋಜರ್ (ಡೆಮಾಲಿಷನ್) ಕಾರ್ಯಾಚರಣೆಗೆ ಎರಡು ವಾರಗಳವರೆಗೆ ತಡೆಯಾಜ್ಞೆ ನೀಡಿದೆ.
ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಅಕ್ರಮ ಒತ್ತುವರಿ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದರೂ ಸುಮಾರು 2 ಗಂಟೆಗಳ ಕಾಲ ಜೆಸಿಬಿಗಳ ಮೂಲಕ ಕಾರ್ಯಾಚರಣೆ ಮುಂದುವರೆಸಲಾಗಿತ್ತು. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ ನಂತರವೂ ಬುಧವಾರ ಕಾರ್ಯಾಚರಣೆ ಮುಂದುವರೆಸಲಾಗಿತ್ತು. ಇದೀಗ ಮತ್ತೆ ಅದೇ ರೀತಿ ಮುಂದುವರೆದರೆ ಅದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಬಿಆರ್ ಗವಾಯಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಜಹಾಂಗೀರ್ಪುರಿಯಲ್ಲಿನ ಧ್ವಂಸ ಅಭಿಯಾನದ ವಿರುದ್ಧದ ಅರ್ಜಿಯ ವಿಚಾರಣೆ ನಡೆಸಿದೆ. ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಮನೆಗಳನ್ನು ನೆಲಸಮ ಮಾಡುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದು, “ನಮ್ಮ ಆದೇಶದ ನಂತರ ನಡೆಸಲಾದ ಎಲ್ಲಾ ನೆಲಸಮಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಶನಿವಾರ ಕೋಮುಗಲಭೆ ಭುಗಿಲೆದ್ದ ದೆಹಲಿಯ ಜಹಾಂಗೀರ್ಪುರಿಗೆ ಬುಲ್ಡೋಜರ್‌ಗಳನ್ನು ಕಳುಹಿಸಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ವಿರಾಮಗೊಳಿಸಿದ ನಂತರ ನಡೆದ ಧ್ವಂಸಗಳ ಬಗ್ಗೆ “ಗಂಭೀರ ನೋಟ” ತೆಗೆದುಕೊಳ್ಳುವುದಾಗಿ ಹೇಳಿತ್ತು. ಮುಂದಿನ ಆದೇಶದವರೆಗೆ ಜಹಾಂಗೀರ್‌ಪುರಿಯಲ್ಲಿ ಯಾವುದೇ ನೆಲಸಮವಾಗುವುದಿಲ್ಲ ಎಂದು ನ್ಯಾಯಾಲಯವು ದೆಹಲಿಯ ನಾಗರಿಕ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.
“ಸುಪ್ರೀಂಕೋರ್ಟ್ ತೀರ್ಪನ್ನು ಮೇಯರ್‌ಗೆ ತಿಳಿಸಿದ ನಂತರ ನಡೆದ ಎಲ್ಲಾ ಡೆಮಾಲಿಷನ್ಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ” ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಎರಡು ವಾರಗಳ ನಂತರ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.
ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಪಾಡಲು ಆದೇಶ ಕೊಟ್ಟ ಬಳಿಕವೂ ನಿನ್ನೆ ಬೆಳಗ್ಗೆ 9 ಗಂಟೆಯಿಂದ ಡೆಮಾಲಿಷನ್ ಮುಂದುವರಿದಿತ್ತು. ಜಹಾಂಗೀರ್‌ಪುರಿ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ದೆಹಲಿ ಬಿಜೆಪಿ ಮುಖ್ಯಸ್ಥರು ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಮೇಯರ್‌ಗೆ ದೂರು ನೀಡಿದ ನಂತರ ಹಿಂಸಾಚಾರ ಪೀಡಿತ ಪ್ರದೇಶದಿಂದ ಅತಿಕ್ರಮಣಗಳನ್ನು ತೆಗೆದುಹಾಕಲು ರಾತ್ರೋರಾತ್ರಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಹಿಂಸಾಚಾರವನ್ನು ಪ್ರಾರಂಭಿಸಲಾಯಿತು ಎಂದಿದ್ದಾರೆ.
ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದೆಹಲಿಯಂತಹ ರಾಜ್ಯಗಳಲ್ಲಿ ಗಲಭೆ ಆರೋಪಿಗಳೆಂದು ಆರೋಪಿಸಿ ಮುಸ್ಲಿಮರ ಕಟ್ಟಡಗಳನ್ನು ಮಾತ್ರ ನೆಲಸಮಗೊಳಿಸಲಾಗುತ್ತಿದೆ ಎಂದು ಜಮಿಯತ್ ಉಲಾಮಾ-ಇ-ಹಿಂದ್ ಸಲ್ಲಿಸಿದ ಮನವಿಯನ್ನು ಗಮನಿಸಿದ ನಂತರ ಸುಪ್ರೀಂ ಕೋರ್ಟ್ ಬುಧವಾರ ಅತಿಕ್ರಮಣ ವಿರೋಧಿ ಅಭಿಯಾನವನ್ನು ಸ್ಥಗಿತಗೊಳಿಸಲು ಸೂಚಿಸಿತ್ತು. ಆದರೆ ಬುಲ್ಡೋಜರ್‌ಗಳು ನಿಲ್ಲಲಿಲ್ಲ. ಮಸೀದಿಯ ತಡೆಗೋಡೆ, ಗೇಟ್ ಸಹಿತ ಹೊರಗಿನ ಹಲವಾರು ಅಂಗಡಿಗಳು ಮತ್ತು ಮನೆಗಳನ್ನು ನೆಲಸಮಗೊಳಿಸಲಾಯಿತು.
ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸಿಪಿಎಂ ನಾಯಕಿ ಬೃಂದಾ ಕಾರಟ್ ಕೋರ್ಟ್ ಆದೇಶದ ಪ್ರತಿಯೊಂದಿಗೆ ಸ್ಥಳಕ್ಕೆ ಆಗಮಿಸಿದರು. ತಕ್ಷಣವೇ ನೆಲಸಮವನ್ನು ನಿಲ್ಲಿಸುವಂತೆ ಪೊಲೀಸ್ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳನ್ನು ಒತ್ತಾಯಿಸಿದರು. ಇದೇ ವೇಳೆ ಕೋರ್ಟ್ ನಲ್ಲೂ ಸಹ ಅರ್ಜಿದಾರರು ನ್ಯಾಯಾಲಯದ ಆದೇಶದ ಬಳಿಕವೂ ಕಟ್ಟಡಗಳ ತೆರವು ಕಾರ್ಯಾಚರಣೆ ನಿಂತಿಲ್ಲ. ಶೀಘ್ರವೇ ಕಾರ್ಯಾಚರಣೆ ನಿಲ್ಲಿಸುವಂತೆ ಮನವಿ ಮಾಡಿದರು. ಕೊನೆಗೆ ಮಖ್ಯ ನ್ಯಾಯಮೂರ್ತಿಯ ಮೌಖಿಕ ಆದೇಶದ ಮೇಲೆ ಕೋರ್ಟ್ ಸಿಬ್ಬಂದಿಯಿಂದ ಎನ್‌ಡಿಎಂಸಿ ಮೇಯರ್, ಕಮಿಷನರ್ ಮತ್ತು ದೆಹಲಿ ಪೊಲೀಸ್ ಕಮಿಷನರ್ ಅವರ ಸಂಪರ್ಕ ಸಂಖ್ಯೆಗಳಿಗೆ ಕರೆ ಮಾಡಲಾಯಿತು. ಆ ಬಳಿಕ ಜಹಾಂಗೀರ್ ಪುರಿಯಲ್ಲಿ ಕಟ್ಟಡಗಳ ತೆರವು ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು.
ಭಾರತದಾದ್ಯಂತ ಧ್ವಂಸಗಳು ನಡೆಯುತ್ತಿವೆ. ಮುಸ್ಲಿಮರನ್ನು ಗುರಿಯಾಗಿಸಲಾಗುತ್ತಿದೆ. ವಿಶೇಷವಾಗಿ ರಾಮನವಮಿ ದಿನಗಳಲ್ಲಿ ಈ ಸಂಗತಿಗಳು ನಡೆಯುತ್ತಿವೆ. ನಂತರ ಕೇವಲ ಒಂದು ಸಮುದಾಯದ ಮನೆಗಳನ್ನು ಕೆಡವಲಾಗುತ್ತದೆ ಎಂದು ಜಮಿಯತ್ ಉಲಾಮಾ-ಇ-ಹಿಂದ್ ಪ್ರತಿನಿಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದಾರೆ.

















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ