ನವದೆಹಲಿ,ಏಪ್ರಿಲ್ 20: ರಾಷ್ಟ್ರ ರಾಜಧಾನಿಯಲ್ಲಿ ಎಎಪಿ ಸರ್ಕಾರ ವರ್ಸಸ್ ಉತ್ತರ ದೆಹಲಿ ಮುನ್ಸಿಪಲ್ ಎಂಬ ಬೆಳವಣಿಗೆಯಾಗ್ತಿದೆ. ಹನುಮಜಯಂತಿ ವೇಳೆ ಭಾರೀ ಹಿಂಸಾಚಾರದ ಬಳಿಕ ದೆಹಲಿಯ ಜಹಾಂಗೀರ್ ಪುರಿಯಲ್ಲಿ ಬುಲ್ಡೋಜರ್ ಗಳ ಸದ್ದು ಕೇಳಿಬಂದಿದ್ದು, ಸುಪ್ರೀಂಕೋರ್ಟ್ ಮಧ್ಯಂತರ ಆದೇಶದ ಬಳಿಕ ಬುಲ್ಡೋಜರ್ ಕಾರ್ಯಾಚರಣೆ ನಿಲ್ಲಿಸಲಾಗಿದೆ.
ಬುಧವಾರ ಬೆಳಗ್ಗೆ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಮಾಡಿತ್ತು. ದೆಹಲಿಯಲ್ಲಿ ಹನುಮಜಯಂತಿ ಹಿಂಸಾಚಾರದ ಬಳಿಕ ಜಹಾಂಗೀರ್ ಪುರಿಯಲ್ಲಿ ಈ ಬುಲ್ಡೋಜರ್ ಕಾರ್ಯಾಚರಣೆ ಆಗಿದ್ದು, ವಿಪಕ್ಷಗಳು ಬಿಜೆಪಿ ಆಡಳಿತವನ್ನ ಟೀಕಿಸಿದ್ವು. ಕೆಲವು ಸಮುದಾಯಗಳನ್ನ ಗುರಿಯಾಗಿಸಿಕೊಂಡು ಉತ್ತರಪ್ರದೇಶ, ಗುಜರಾತ್ ಮಧ್ಯಪ್ರದೇಶ ಮಾದರಿಯಲ್ಲಿ ಸಮುದಾಯವೊಂದನ್ನ ಗುರಿಯಾಗಿಸಿಕೊಂಡು ಕಟ್ಟಡ ತೆರವು ಕಾರ್ಯಾಚರಣೆ ಮಾಡ್ತಿದ್ದಾರೆಂದು ಆರೋಪಿಸಿ ಕಾರ್ಯಾಚರಣೆಗೆ ತಡೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗಿತ್ತು.
ತಕ್ಷಣ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಬೇಕೆಂದು ಕೋರ್ಟ್ ಸೂಚಿಸಿದ 2 ಗಂಟೆ ಬಳಿಕ ಜಹಾಂಗೀರ್ ಪುರಿನಲ್ಲಿ ಕಟ್ಟಡಗಳ ತೆರವು ಕಾರ್ಯಾಚರಣೆ ಸ್ಥಗಿತವಾಗಿದೆ. ಆದರೆ ಇದಕ್ಕೂ ಮುನ್ನ ಕೋರ್ಟ್ ಆದೇಶದ ಬಳಿಕವೂ ಜೆಸಿಬಿಗಳ ಸದ್ದು ಜೋರಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠವು ಮುಂದಿನ ವಿಚಾರಣೆಯವರೆಗೆ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿತು. ಆ ಬಳಿಕವೂ ಕಟ್ಟಡಗಳ ಧ್ವಂಸ ನಿಲ್ಲಲಿಲ್ಲ. ನ್ಯಾಯಾಲಯದ ಆದೇಶವು ಇನ್ನೂ ನಮ್ಮ ಕೈಗೆ ಬಂದಿಲ್ಲ. ಹೀಗಾಗಿ ನಾವು ಕಾರ್ಯಾಚರಣೆಯನ್ನು ಮುಂದುವರೆಸುವುದಾಗಿ ಅಧಿಕಾರಿಗಳು ಕಾರ್ಯ ಮುಂದುವರೆಸಿದ್ರು.
ಉದ್ವಿಗ್ನತೆಯ ನಡುವೆಯೂ ಮಸೀದಿಯ ಗೋಡೆ ಮತ್ತು ಗೇಟ್ ಅನ್ನು ನೆಲಸಮಗೊಳಿಸಲಾಯಿತು. ಕೆಲವು ಅಂಗಡಿಗಳನ್ನು ನೆಲಕ್ಕುರುಳಿಸಲಾಯ್ತು.
ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸಿಪಿಎಂ ನಾಯಕಿ ಬೃಂದಾ ಕಾರಟ್ ಕೋರ್ಟ್ ಆದೇಶದ ಪ್ರತಿಯೊಂದಿಗೆ ಸ್ಥಳಕ್ಕೆ ಆಗಮಿಸಿದರು. ತಕ್ಷಣವೇ ನೆಲಸಮವನ್ನು ನಿಲ್ಲಿಸುವಂತೆ ಪೊಲೀಸ್ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳನ್ನು ಒತ್ತಾಯಿಸಿದರು.
ಇದೇ ವೇಳೆ ಕೋರ್ಟ್ ನಲ್ಲೂ ಸಹ ಅರ್ಜಿದಾರರು ನ್ಯಾಯಾಲಯದ ಆದೇಶದ ಬಳಿಕವೂ ಕಟ್ಟಡಗಳ ತೆರವು ಕಾರ್ಯಾಚರಣೆ ನಿಂತಿಲ್ಲ. ಶೀಘ್ರವೇ ಕಾರ್ಯಾಚರಣೆ ನಿಲ್ಲಿಸುವಂತೆ ಮನವಿ ಮಾಡಿದರು.
ಕೊನೆಗೆ ಮಖ್ಯ ನ್ಯಾಯಮೂರ್ತಿಯ ಮೌಖಿಕ ಆದೇಶದ ಮೇಲೆ ಕೋರ್ಟ್ ಸಿಬ್ಬಂದಿಯಿಂದ ಎನ್‌ಡಿಎಂಸಿ ಮೇಯರ್, ಕಮಿಷನರ್ ಮತ್ತು ದೆಹಲಿ ಪೊಲೀಸ್ ಕಮಿಷನರ್ ಅವರ ಸಂಪರ್ಕ ಸಂಖ್ಯೆಗಳಿಗೆ ಕರೆ ಮಾಡಲಾಯಿತು. ಆ ಬಳಿಕ ಜಹಾಂಗೀರ್ ಪುರಿಯಲ್ಲಿ ಕಟ್ಟಡಗಳ ತೆರವು ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತವಾಯಿತು. ಕೋರ್ಟ್ ಆದೇಶದ 2 ಗಂಟೆ ಬಳಿಕ ಜೆಸಿಬಿಗಳ ಸದ್ದು ನಿಂತಿತು.

ಇಂದು ಬೆಳಗ್ಗೆ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಜಹಾಂಗೀರ್ ಪುರಿಯಲ್ಲಿನ ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕಲು ಒಂಬತ್ತು ಬುಲ್ಡೋರ್ಜರ್ ಗಳನ್ನು ಕಾರ್ಯಾಚರಣೆಗಿಳಿಸಿತ್ತು. ಹಿಂಸಾಚಾರದಿಂದ ಉದ್ವಿಗ್ನವಾಗಿರುವ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 400 ಪೊಲೀಸರನ್ನು ನಿಯೋಜಿಸುವಂತೆ ಮನವಿ ಮಾಡಿತ್ತು.