janadhvani

Kannada Online News Paper

ದೇಶದಲ್ಲಿ ಮತ್ತೆ ಕೊರೋನಾ ಏರಿಕೆ: ಒಂದೇ ದಿನದಲ್ಲಿ 214 ಮಂದಿ ಬಲಿ- ಮಾಸ್ಕ್ ಕಡ್ಡಾಯ

ಇಂದು ದೇಶದಲ್ಲಿ ಉದ್ಭವಿಸಿರುವ ಮತಾಂಧತೆ ಎಂಬ ಮಾರಕ ಸೋಂಕು ಕೊರೋನಾಕ್ಕಿಂತಲೂ ಅಪಾಯಕಾರಿ.

ನವದೆಹಲಿ: ದೇಶದಲ್ಲಿ ಮತ್ತೆ ಕೊರೊನಾ ತನ್ನ ಕಬಂಧ ಬಾಹು ಚಾಚುವ ಮುನ್ಸೂಚನೆ ನೀಡ್ತಿದೆ. ದೆಹಲಿ, ಕೇರಳ ಸೇರಿದಂತೆ ಹಲವೆಡೆ ನಿಧಾನವಾಗಿ ಕೊರೊನಾ ಕೇಸ್​ಗಳು ಏರಿಕೆಯಾಗೋಕೆ ಶುರುವಾಗಿದೆ. ಕೊರೊನಾ ಕಾಟ ಶುರುವಾಗ್ತಿದ್ದಂತೆ ಹಲವೆಡೆ ಮತ್ತೆ ಮಾಸ್ಕ್​ ಕಡ್ಡಾಯಗೊಳಿಸಲಾಗಿದೆ.

ಈಗಷ್ಟೇ ಭಾರತ ಕೊರೊನಾ 3ನೇ ಅಲೆಯಿಂದ ಹೊರ ಬಂದಿದೆ. ಮೊನ್ನೆಮೊನ್ನೆಯಷ್ಟೇ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಸೋಂಕಿಗೆ ಕಡಿವಾಣ ಹಾಕೋಕೆ ವಿಧಿಸಿದ್ದ ಕಠಿಣ ರೂಲ್ಸ್​ಗಳನ್ನ ಈಗಷ್ಟೇ ಸಡಿಲಗೊಳಿಸಲಾಗಿದೆ. ಇನ್ನೇನು ಎಲ್ಲಾ ಸರಿ ಹೋಯ್ತು ಅಂತಾ ನಿಟ್ಟುಸಿರು ಬಿಡುವಷ್ಟರಲ್ಲಿ, ದೇಶಾದ್ಯಂತ ಮತ್ತೆ ಕೊರೊನಾ ಆರ್ಭಟಿಸುವ ಮುನ್ಸೂಚನೆ ಕೊಟ್ಟಿದೆ.

ದೇಶಾದ್ಯಂತ ಕಳೆದ 24 ಗಂಟೆಯಲ್ಲಿ 2,183 ಕೊರೊನಾ ಕೇಸ್​ಗಳು ಪತ್ತೆಯಾಗಿದ್ರೆ, ಇದೇ ಅವಧಿಯಲ್ಲಿ 214 ಮಂದಿ ಸೋಂಕಿತರು ಕೊರೊನಾ ಉಪಟಳಕ್ಕೆ ಜೀವ ಬಿಟ್ಟಿದ್ದಾರೆ. ಇತ್ತ ದೇಶದಲ್ಲಿ ಪತ್ತೆಯಾದ ಕೊರೊನಾ ಕೇಸ್​ಗಳ ಪೈಕಿ ಅತೀ ಹೆಚ್ಚು ಕೇಸ್​ಗಳು ಕೇರಳದಲ್ಲೇ ವರದಿಯಾಗಿದೆ. ಕಳೆದ 24 ಗಂಟೆಯಲ್ಲಿ ಕೇರಳವೊಂದರಲ್ಲೇ 940 ಕೇಸ್​ ಪತ್ತೆಯಾಗಿದೆ. ಇನ್ನು ಇದೇ ಅವಧಿಯಲ್ಲಿ ಕೇರಳವೊಂದರಲ್ಲೇ 213 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಇತ್ತ ದೇಶಾದ್ಯಂತ ದಿಢೀರ್​ ಕೊರೊನಾ ಕೇಸ್​ಗಳು ಏರಿಕೆಯಾಗ್ತಿದ್ದಂತೆ ಹಲವೆಡೆ ಮತ್ತೆ ಮಾಸ್ಕ್​ ಕಡ್ಡಾಯಗೊಳಿಸಲಾಗಿದೆ. ಹಲವು ರಾಜ್ಯಗಳಲ್ಲಿ ಮಾಸ್ಕ್​ ​ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಉತ್ತರಪ್ರದೇಶದ 6 ಜಿಲ್ಲೆಗಳಲ್ಲಿ ಮಾಸ್ಕ್​ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಗೌತಮ ಬುದ್ದ ನಗರ, ಗಾಝಿಯಾಬಾದ್​, ಹಪುರ್, ಮೀರುತ್​ ಭಾಘಪತ್​​ ಹಾಗೂ ಲಕ್​​ನೌನಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್​ ಧರಿಸುವಂತೆ ತಿಳಿಸಲಾಗಿದೆ. ಅಲ್ಲದೆ ಲಸಿಕೆ ಪಡೆಯದವರನ್ನು ಹುಡುಕಿ ಕೂಡಲೇ ಎರಡೂ ಡೋಸ್​ ಲಸಿಕೆ ಪೂರ್ಣಗೊಳಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಇತ್ತ ಹರಿಯಾಣದ ನಾಲ್ಕು ಜಿಲ್ಲೆಗಳಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಲಾಗಿದೆ. ಇನ್ನು ದೆಹಲಿಯಲ್ಲಿ ಮಾಸ್ಕ್​​ ಕಡ್ಡಾಯದ ಬಗ್ಗೆ ಸಭೆ ನಡೆಸಿ ಕಡ್ಡಾಯಗೊಳಿಸುವ ಸಾಧ್ಯತೆಗಳಿವೆ.

ಸೋಂಕು​​ ಕಣ್ಮರೆಯಾಯ್ತು ಅಂತಾ, ಎಲ್ಲವನ್ನೂ ಮರೆತು, ಕುಣಿದು ಕುಪ್ಪಳಿಸುತ್ತಿರುವ ಜನೆತೆಗೆ ಮತ್ತೆ ಕೊರೊನಾ ಶಾಕ್​ ಕೊಟ್ಟಿದೆ. ದೇಶಾದ್ಯಂತ ನಿಧಾನವಾದರೂ ಮುಂದಿನ ದಿನಗಳಲ್ಲಿ ಮತ್ತೆ ಆರ್ಭಟಿಸುವ ಸೂಚನೆ ನೀಡಿದೆ. ಆದ್ರೆ ಜನರು ಈಗಿನಿಂದಲೇ ಎಚ್ಚರಿಕೆ ವಹಿಸಿದ್ರೆ ಮುಂಬರುವ ಕಠಿಣ ದಿನಗಳಿಂದ ಬಚಾವ್​ ಆಗಬಹುದು. ಕೊರೋನಾ ಕಾಲದಲ್ಲಿ ಅಲ್ಪ ಸಂಖ್ಯಾತ ಮುಸಲ್ಮಾನರು ನೀಡಿದ ಸಹಾಯ, ಸಹಕಾರವನ್ನು ಮರೆತು, ಪವಿತ್ರ ತಿಂಗಳಾದ ರಮಳಾನಿನಲ್ಲೇ ಅವರ ವಿರುದ್ಧ ಉಗ್ರ ಹಿಂದುತ್ವ ಸಂಘಟನೆಗಳು ಸರ್ಕಾರದ ಬೆಂಬಲದೊಂದಿಗೆ ನಡೆಸುತ್ತಿರುವ ಕ್ರೂರತೆಗೆ ಇಡೀ ಪ್ರಪಂಚವೇ ನಿಬ್ಬೆರಗಾಗಿದೆ. ಇಂದು ದೇಶದಲ್ಲಿ ಉದ್ಭವಿಸಿರುವ ಮತಾಂಧತೆ ಎಂಬ ಮಾರಕ ಸೋಂಕು ಕೊರೋನಾಕ್ಕಿಂತಲೂ ಅಪಾಯಕಾರಿಯಾಗಿದೆ.

error: Content is protected !! Not allowed copy content from janadhvani.com