janadhvani

Kannada Online News Paper

ಮಸೀದಿಯ ವ್ಯಾಪ್ತಿಯಲ್ಲಿ ಹನುಮಾನ್ ಚಾಲಿಸಾ, ಭಜನೆ ನಿಷೇಧ- ಮಹಾರಾಷ್ಟ್ರ ಸರ್ಕಾರ

ಅಝಾನ್‌ ಕೂಗುವ 15 ನಿಮಿಷದ ಮೊದಲು ಹಾಗೂ ನಂತರ ಮಸೀದಿಯ 100 ಮೀಟರ್ ವ್ಯಾಪ್ತಿಯಲ್ಲಿ ಧ್ವನಿವರ್ಧಕ ಬಳಸಿ ಹನುಮಾನ್ ಚಾಲಿಸಾ ಅಥವಾ ಭಜನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.

ನಾಸಿಕ್ : ಮಹಾರಾಷ್ಟ್ರದಲ್ಲೂ ಅಝಾನ್, ಹನುಮಾನ್ ಚಾಲೀಸಾ ವಿವಾದದ ಕಿಡಿ ಮುಂದುವರೆದಿದೆ. ಸದ್ಯ ಈ ಕಿಡಿಯನ್ನು ಆರಿಸಲು ಮಹಾರಾಷ್ಟ್ರದ ನಾಸಿಕ್ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಅಝಾನ್‌ ಕೂಗುವ 15 ನಿಮಿಷದ ಮೊದಲು ಹಾಗೂ ನಂತರ ಮಸೀದಿಯ 100 ಮೀಟರ್ ವ್ಯಾಪ್ತಿಯಲ್ಲಿ ಧ್ವನಿವರ್ಧಕ ಬಳಸಿ ಹನುಮಾನ್ ಚಾಲಿಸಾ ಅಥವಾ ಭಜನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಜೊತೆಗೆ ಧಾರ್ಮಿಕ ಸ್ಥಳಗಳಲ್ಲಿ ನಿಯಮಬಾಹಿರವಾಗಿ ಧ್ವನಿವರ್ಧಕ ಬಳಸುವಂತಿಲ್ಲ. ಅಲ್ಲದೆ ಮೇ 3ರ ಒಳಗೆ ಎಲ್ಲಾ ಧಾರ್ಮಿಕ ಸ್ಥಳದಲ್ಲೂ ಧ್ವನಿವರ್ಧಕ ಬಳಸಲು ಪರವಾನಿಗೆ ಪತ್ರ ಪಡೆಯಬೇಕೆಂದು ಸೂಚಿಸಿದೆ.

“ಮೇ 3ರ ಒಳಗೆ ಎಲ್ಲಾ ಧಾರ್ಮಿಕ ಸ್ಥಳದವರೂ ಧ್ವನಿವರ್ಧಕ ಬಳಸುವುದಕ್ಕೆ ಅನುಮತಿ ಪಡೆಯುವಂತೆ ಸೂಚಿಸಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಧ್ವನಿವರ್ಧಕ ಬಳಸಿರುವುದು ಕಂಡು ಬಂದರೆ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ ಹನುಮಾನ್ ಚಾಲೀಸಾ, ಭಜನೆ ಮಾಡಲು ಅನುಮತಿ ಪಡೆದುಕೊಂಡರೆ, ಮಸೀದಿಯಿಂದ 100 ಮೀಟರ್ ದೂರದಲ್ಲಿ ಮಾಡಬೇಕು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ,” ಅಂತ ನಾಸಿಕ್ ಪೊಲೀಸ್ ಕಮಿಷನರ್ ದೀಪಕ್ ಪಾಂಡೆ ತಿಳಿಸಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಅಧ್ಯಕ್ಷ ರಾಜ್ ಠಾಕ್ರೆ ಪುಣೆಯಲ್ಲಿರುವ ತಮ್ಮ ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ, “ಹಿಂದೂ ಅಣ್ಣ ತಮ್ಮಂದಿರೇ ಸಿದ್ದರಾಗಿರಿ, ಮಸಿದೀಗಳಲ್ಲಿರುವ ಧ್ವನಿವರ್ಧಕಗಳನ್ನ ಮೇ 3 ರ ಒಳಗೆ ತೆರವು ಮಾಡದಿದ್ದರೆ, ನಾವು ಮೇ 3 ಮತ್ತು ನಂತರದ ದಿನಗಳಲ್ಲಿ ಮಸೀದಿಯ ಮುಂದೆ ಧ್ವನಿವರ್ಧಕಗಳನ್ನು ಬಳಸಿ ಐದು ಬಾರಿ ಹನುಮಾನ್ ಚಾಲೀಸಾ, ಭಜನೆ ಮಾಡೋಣ. ಎಲ್ಲರೂ ಇದಕ್ಕೆ ಸಿದ್ದರಾಗಿರಿ,” ಎಂದಿದ್ದರು. ಇನ್ನು ಏಪ್ರಿಲ್ 2 ರಂದೇ ರಾಜ್ ಠಾಕ್ರೆ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಮಸೀದಿಗಳ ಮುಂದೆ ಇರುವ ಧ್ವನಿವರ್ಧಕಗಳನ್ನ ತೆರವು ಮಾಡುವಂತೆ ಮನವಿ ಮಾಡಿಕೊಂಡಿದ್ದರು.

ಮಹಾರಾಷ್ಟ್ರದ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಕೂಡ ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ್ದು, “ಧ್ವನಿವರ್ಧಕ ಬಳಕೆಯ ಬಗ್ಗೆ ಪೊಲೀಸ್‌ ಮಹಾನಿರ್ದೇಶಕರು ಹಾಗೂ ಮುಂಬೈ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ. ಜೊತೆಗೆ ಕೋರ್ಟ್‌ ಆದೇಶದ ಪ್ರಕಾರ ಕಡಿಮೆ ಡೆಸಿಬಲ್ ಇರುವ ಧ್ವನಿವರ್ಧಕಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಒಂದು ಡೆಸಿಬಲ್ ಜಾಸ್ತಿ ಇದ್ದರೆ ಅಂತಹ ಧ್ವನಿವರ್ಧಕಗಳನ್ನ ತೆರವು ಮಾಡಲಾಗುತ್ತದೆ ಹಾಗೂ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ,”ಅಂತ ತಿಳಿಸಿದ್ದಾರೆ.

ನಾಸಿಕ್‌ ನಗರದಲ್ಲಿರುವ ಮಸೀದಿ, ದೇವಸ್ಥಾನ, ಗುರುದ್ವಾರ, ಚರ್ಚ್ ಮತ್ತು ಇತರ ಧಾರ್ಮಿಕ ಸಂಸ್ಥೆಗಳು ಲಿಖಿತ ಅನುಮೋದನೆಯನ್ನು ಪಡೆದ ನಂತರವೇ ಧ್ವನಿವರ್ಧಕಗಳ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ಮುಂಚಿತವಾಗಿಯೇ ಅನುಮೋದನೆ ಪಡೆಯಲು ನಗರ ಪೊಲೀಸ್ ಆಯುಕ್ತರಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ. ಅಲ್ಲದೆ ಈ ಆದೇಶ ಈಗಿನಿಂದಲೇ ಜಾರಿಗೆ ಬರಲಿದ್ದು, ಮೇ 3ರ ಒಳಗೆ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೂ ಅಜಾನ್, ಹನುಮಾನ್ ಚಾಲಿಸ್ ನಡೆಸಲು ಅನುಮತಿ ಪಡೆಯಬೇಕು. ಬಳಿಕ ಎಲ್ಲಾ ಅಕ್ರಮ ಧ್ವನಿವರ್ಧಕಗಳನನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವೇಳೆ ಆದೇಶವನ್ನು ಅನುಸರಿಸದಿದ್ದರೆ ಅಂತಹವರಿಗೆ ನಾಲ್ಕು ತಿಂಗಳಿನಿಂದ 1 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ ದಂಡ ಕೂಡ ಹಾಕಲಾಗುತ್ತದೆ ಅಂತ ನಾಸಿಕ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

error: Content is protected !! Not allowed copy content from janadhvani.com