janadhvani

Kannada Online News Paper

ಮಂಗಳೂರು: ವಿಷಾನಿಲ ಸೋರಿಕೆಗೆ ಮೂವರು ಬಲಿ- ಐವರ ಸ್ಥಿತಿ ಗಂಭೀರ

ಮೀನಿನ ತ್ಯಾಜ್ಯಕ್ಕೆ ಬಳಕೆ ಮಾಡುವ ವಿಷಾನಿಲ ಸೋರಿಕೆಯಾಗಿ ಈ ಘಟನೆ ನಡೆದಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಮಂಗಳೂರು: ಎಸ್‌ಇಝೆಡ್ (ವಿಶೇಷ ಆರ್ಥಿಕ ವಲಯ) ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೀನಿನ ಫ್ಯಾಕ್ಟರಿಯ ಟ್ಯಾಂಕೊಂದರಲ್ಲಿ ವಿಷಾನಿಲ ಸೋರಿಕೆಯಾಗಿ ಮೂವರು ಮೃತಪಟ್ಟಿದ್ದು, 5 ಮಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಮೃತಪಟ್ಟ ಕಾರ್ಮಿಕರೆಲ್ಲರೂ ಪಶ್ಚಿಮ ಬಂಗಾಳ ಮೂಲದವರು ಎನ್ನಲಾಗಿದ್ದು, ಸಮಿರುಲ್ ಇಸ್ಲಾಂ, ಉಮರ್ ಫಾರೂಕ್, ನಿಜಾಮುದ್ದೀನ್ ಸಾಜ್ ಎಂದು ಗುರುತಿಸಲಾಗಿದೆ. ಮಿರಾಜುಲ್ ಇಸ್ಲಾಂ, ಸರಾಫತ್ ಆಲಿ, ಅಜನ್ ಆಲಿ, ಕರೀಬುಲ್ಲ, ಅಫ್ತಲ್ ಮಲ್ಲಿಕ್ ಸೇರಿದಂತೆ ಹಲವರು ಗಂಭೀರ ಗಾಯಗೊಂಡಿದ್ದಾರೆ.

ಎಸ್‌ಇಝೆಡ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೀನಿನ ಫ್ಯಾಕ್ಟರಿಯಲ್ಲಿ ಭಾನುವಾರ ರಾತ್ರಿ ವೇಳೆ ಕಾರ್ಮಿಕನೊಬ್ಬ ಮೀನಿನ ತ್ಯಾಜ್ಯದ ಟ್ಯಾಂಕನ್ನು ಶುಚಿಗೊಳಿಸಲು ಕೆಳಗಿಳಿದಿದ್ದಾನೆ. ಈ ವೇಳೆ ಏಕಾಏಕಿ ಅಸ್ವಸ್ಥಗೊಂಡು ಬಿದ್ದಿದ್ದಾನೆ. ಕೂಡಲೇ ಆತನನ್ನು ರಕ್ಷಿಸಲು 8 ಮಂದಿ ಕಾರ್ಮಿಕರು ಹೋಗಿದ್ದಾರೆ. ಈ ವೇಳೆ ಅವರು ಕೂಡಾ ಅಸ್ವಸ್ಥಗೊಂಡು, ಉಸಿರಾಟದಲ್ಲಿ ಏರುಪೇರಾಗಿದೆ.

ಅಸ್ವಸ್ಥಗೊಂಡವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಮೂವರು ಮೃತಪಟ್ಟು 5 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.

ಪೊಲೀಸರ ದೌಡು:

ರಾಸಾಯನಿಕ ಸೋರಿಕೆಯಾದ ಮಾಹಿತಿ ಸಿಗುತ್ತಿದ್ದಂತೆ ನಗರ ಪೊಲೀಸರು ಆಸ್ಪತ್ರೆ, ಫ್ಯಾಕ್ಟರಿಗೆ ದೌಡಾಯಿಸಿದ್ದಾರೆ. ನಗರ ಕಾನೂನು ಸುವ್ಯವಸ್ಥಾ ವಿಭಾಗದ ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ಆಸ್ಪತ್ರೆಗೆ ಭೇಟಿ ಅನಾರೋಗ್ಯಕ್ಕೀಡಾದವರ ಯೋಗಕ್ಷೇಮ ವಿಚಾರಿಸಿದ್ದಾರೆ. ಡಿಸಿಪಿ ಹರಿರಾಂ ಶಂಕರ್, ಬಜಪೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ತ್ಯಾಜ್ಯದಿಂದ ವಿಷಾನಿಲ:

ಮೀನಿನ ತ್ಯಾಜ್ಯಕ್ಕೆ ಬಳಕೆ ಮಾಡುವ ವಿಷಾನಿಲ ಸೋರಿಕೆಯಾಗಿ ಈ ಘಟನೆ ನಡೆದಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಆದರೆ ಘಟನೆಯ ಸರಿಯಾದ ಕಾರಣ ತನಿಖೆಯಿಂದ ತಿಳಿದು ಬರಬೇಕಿದೆ. ಅವಘಡ ನಡೆದ ಹಿನ್ನಲೆಯಲ್ಲಿ ಫ್ಯಾಕ್ಟರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

error: Content is protected !! Not allowed copy content from janadhvani.com