janadhvani

Kannada Online News Paper

ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಬೆದರಿಕೆ- ಆಶ್ರಮದ ಮುಖ್ಯಸ್ಥ ಭಜರಂಗ ಮುನಿ ದಾಸ್ ಬಂಧನ

ಪೊಲೀಸರ ಸಮ್ಮುಖದಲ್ಲೇ ಧಾರ್ಮಿಕ ಮೆರವಣಿಗೆಯಲ್ಲಿ ಆಘಾತಕಾರಿ ಬೆದರಿಕೆ ಹಾಕಿದ 11 ದಿನಗಳ ನಂತರ ಭಜರಂಗ್ ಮುನಿ ದಾಸ್ ಬಂಧನವಾಗಿದೆ.

ಲಕ್ನೋ: ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಬೆದರಿಕೆ ಹಾಕಿದ್ದ ಉತ್ತರ ಪ್ರದೇಶದ ಭಜರಂಗ ಮುನಿ ದಾಸ್ ಅವರನ್ನು ಬಂಧಿಸಲಾಗಿದೆ. ಖೈರಾಬಾದ್‌ನಲ್ಲಿರುವ ಮಹರ್ಷಿ ಶ್ರೀ ಲಕ್ಷ್ಮಣ ದಾಸ್ ಉದಾಸಿನ್ ಆಶ್ರಮದ ಮುಖ್ಯಸ್ಥ ಭಜರಂಗ ಮುನಿ ದಾಸ್ ಅವರನ್ನು ಪೊಲೀಸರು ಸೀತಾಪುರದಿಂದ ಬಂಧಿಸಿ ಕರೆತಂದಿದ್ದಾರೆ.

ಪೊಲೀಸರ ಸಮ್ಮುಖದಲ್ಲೇ ಧಾರ್ಮಿಕ ಮೆರವಣಿಗೆಯಲ್ಲಿ ಆಘಾತಕಾರಿ ಬೆದರಿಕೆ ಹಾಕಿದ 11 ದಿನಗಳ ನಂತರ ಭಜರಂಗ್ ಮುನಿ ದಾಸ್ ಬಂಧನವಾಗಿದೆ.

ಎಪ್ರಿಲ್ 2 ರಂದು ಭಾಷಣದ ವೇಳೆ ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ವಿಡಿಯೋ ವೈರಲ್ ಆಗ್ತಿದ್ದಂತೆ ರಾಷ್ಟ್ರೀಯ ಮಹಿಳಾ ಆಯೋಗ ತೀಕ್ಷ್ಣವಾಗಿ ವಿರೋಧಿಸಿತ್ತು. ಇಂತಹ ಹೇಳಿಕೆ ನೀಡುವಾಗ ಸ್ಥಳದಲ್ಲೇ ಇದ್ದ ಪೊಲೀಸರು ಮೂಕಪ್ರೇಕ್ಷಕರಂತೆ ಇದ್ದುದ್ದನ್ನ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿ ಭಜರಂಗ್ ಮುನಿ ದಾಸ್ ಅವರನ್ನು ಬಂಧಿಸುವಂತೆ ಆಯೋಗ ಕೋರಿತ್ತು.

ಭಜರಂಗ್ ಮುನಿ ದಾಸ್ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ದ್ವೇಷದ ಭಾಷಣ ಮತ್ತು ಅವಹೇಳನಕಾರಿ ಹೇಳಿಕೆಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ.

ಒಂದು ಧರ್ಮದ ಪ್ರಚಾರಕರಾದ ಸ್ವಾಮೀಜಿಗಳ ಬಾಯಿಂದ ಇಂತಹಾ ನೀಚ ಮಾತುಗಳು ಹೊರಬರುವುದು, ಆ ಧರ್ಮವನ್ನು ಧಿಕ್ಕರಿಸುವುದಕ್ಕೆ ಸಮಾನವಾಗಿದೆ. ಯಾವುದೇ ಒಂದು ಧಾರ್ಮಿಕ ಪಂಡಿತ ಆಯಾ ಧರ್ಮದ ಆಚಾರ ವಿಚಾರಗಳ ಬಗ್ಗೆ ವಿವರಿಸುತ್ತಾರೆಯೇ ಹೊರತು ಅಸಭ್ಯ, ನೀಚ, ಕೊಳಕು ಪದಗಳನ್ನು ಬಳಸುವುದಿಲ್ಲ , ಅದು ಅವರ ವರ್ಚಸ್ಸಿಗೆ ಶೋಭೆಯಲ್ಲ , ಇಂತಹಾ ನೀಚ ಪದಗಳನ್ನು ಬಳಸುತ್ತಿರುವ ಧಾರ್ಮಿಕ ಮುಖಂಡರನ್ನು ಧರ್ಮದ ಅನುಯಾಯಿಗಳು ಸರಿದಾರಿಗೆ ತರಲು ಪ್ರಯತ್ನಿಸಬೇಕೇ ಹೊರತು ಅದನ್ನು ಬೆಂಬಲಿಸಿ ಕೇಕೆ ಹೊಡೆಯುವುದಲ್ಲ. ಹಿಂದೂ ಧರ್ಮವೆಂದರೆ ಅದು ಕೇವಲ ಆರ್ ಎಸ್ ಎಸ್ ನವರಿಗೆ ಮಾತ್ರ ಇರುವುದಲ್ಲ, ದೇಶದಲ್ಲಿರುವ ಬಹುಸಂಖ್ಯಾತ ಹಿಂದೂಗಳು ಶಾಂತಿ ಪ್ರಿಯರಾಗಿದ್ದು, ಅವರು ಯಾವತ್ತೂ ಇಂತಹಾ ನೀಚ ಕೃತ್ಯಕ್ಕೆ ಮುಂದಾಗುವುದಿಲ್ಲ.

error: Content is protected !! Not allowed copy content from janadhvani.com