janadhvani

Kannada Online News Paper

ರಹೀಂ ಉಚ್ಚಿಲ್: ಬ್ಯಾರಿ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ಕಿತ್ತುಕೊಂಡ ಸರ್ಕಾರ

ರಹೀಂ ಉಚ್ಚಿಲ್ ಬಿಜೆಪಿಯಲ್ಲಿದ್ದು, ಪ್ರತಿ ಬಾರಿಯೂ ಪಕ್ಷದ, ಸರಕಾರದ ನಿಲುವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದರು.

ಮಂಗಳೂರು, ಎ.6: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅವರನ್ನು ಪದಚ್ಯುತಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ರಹೀಂ ಉಚ್ಚಿಲ್ ಅವರ ಪದಚ್ಯುತಿಗೆ ಕಾರಣ ತಿಳಿಸಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.

“ಬಿಜೆಪಿ ನನಗೆ ಎರಡು ಬಾರಿ ಅಧ್ಯಕ್ಷ ಸ್ಥಾನ ನೀಡಿದೆ. ಇದೀಗ ಕಾರಣವಿಲ್ಲದೆ ಪದಚ್ಯುತಿ ಮಾಡಿರುವುದು ನೋವು ತಂದಿದೆ. ನಾನು ಪಕ್ಷ ಮತ್ತು ಸರಕಾರಕ್ಕೆ ವಿಧೇಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸರಕಾರ ಕಾರಣ ಹೇಳಿದ್ದರೆ, ಆತ್ಮವಿಮರ್ಶೆ ಮಾಡಿಕೊಳ್ಳಬಹುದಿತ್ತು. ಕಾರಣ ಗೊತ್ತಿಲ್ಲ ಎಂದು ಎಲ್ಲ ನಾಯಕರು ಹೇಳುತ್ತಿದ್ದಾರೆ. ಸರಕಾರ ಯಾವುದೇ ಕ್ರಮಕ್ಕೆ ಸ್ವತಂತ್ರ” ಎಂದು ರಹೀಂ ಉಚ್ಚಿಲ್ ಪ್ರತಿಕ್ರಿಯಿಸಿದ್ದಾರೆ.

ರಹೀಂ ಉಚ್ಚಿಲ್ ಬಿಜೆಪಿಯಲ್ಲಿದ್ದು, ಪ್ರತಿ ಬಾರಿಯೂ ಪಕ್ಷದ, ಸರಕಾರದ ನಿಲುವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ಧಾರ್ಮಿಕ ವಿಷಯ ಬಂದಾಗ ಧರ್ಮದ ವಿಷಯವನ್ನೂ ಸಮರ್ಥನೆ ಮಾಡುತ್ತಿದ್ದರು. ಈ ಹಿಂದೆ ಹಿಜಾಬ್ ವಿಚಾರವಾಗಿಯೂ ಬಿಜೆಪಿ ಪರವೇ ಮಾತನಾಡಿದ್ದರು.

ಅಲ್ಲದೇ ಹಲಾಲ್ ವಿಷಯ ಚರ್ಚೆಗೆ ಬಂದಾಗ, ಹಿಂದುಗಳಿಗೆ ಹಲಾಲ್ ಆಹಾರ ಕೊಡಬಾರದು, ಇದು ಧರ್ಮ ವಿರುದ್ಧ ಎಂದಿದ್ದರು. ಈ ಎಲ್ಲ ಹೇಳಿಕೆಗಳ ಜೊತೆಗೆ ಹಲಾಲ್ 1400 ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂಬ ಇಸ್ಲಾಮಿನ ನಿಲುವನ್ನೂ ಸಮರ್ಥನೆ ಮಾಡಿದ್ದರು. ಆದರೆ ಇದೀಗ ಯಾವ ಕಾರಣಕ್ಕೆ ಅವರನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಲಾಗಿದೆ ಎಂದು ತಿಳಿದುಬಂದಿಲ್ಲ.

error: Content is protected !! Not allowed copy content from janadhvani.com