janadhvani

Kannada Online News Paper

ಸರ್ಕಾರ ಅಝಾನ್ ನಿಷೇಧಿಸಿಲ್ಲ, ಯಾವುದೇ ಸಂಘಟನೆ ಶಾಂತಿ ಸುವ್ಯವಸ್ಥೆ ಹದಗೆಡಿಸಿದರೆ ಸೂಕ್ತ ಕ್ರಮ- ಸಿಎಂ

ಮಸೀದಿಗಳಲ್ಲಿ ಆಜಾನ್ ಕೂಗುವಾಗ ಮೈಕ್‍ಗಳಿಗೆ ಎಷ್ಟು ಡಿಸಿಬಲ್ ಅಳವಡಿಸಬೇಕೆಂದು ಹೈಕೋರ್ಟ್ ಆದೇಶ ನೀಡಿದೆ.

ಬೆಂಗಳೂರು,ಏ.5: ರಾಜ್ಯದಲ್ಲಿ ತೀವ್ರ ವಿವಾದ ಸೃಷ್ಟಿಸಿರುವ ಮಸೀದಿಗಳಲ್ಲಿನ ಆಜಾನ್(ಮೈಕ್) ನಿಷೇಧ ಕುರಿತಂತೆ ಸರ್ಕಾರ ಯಾವುದೇ ಹೊಸ ಕಾನೂನುಗಳನ್ನು ಮಾಡಿಲ್ಲ. ಈ ವಿಚಾರದಲ್ಲಿ ಯಾವುದೇ ಸಂಘಟನೆಯಾಗಲಿ ಶಾಂತಿ-ಸುವ್ಯವಸ್ಥೆ ಹದಗೆಡಿಸಿದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಸರ್ಕಾರದ ದೃಷ್ಟಿಯಲ್ಲಿ ಎಲ್ಲಾ ಜಾತಿ-ಧರ್ಮದವರು ಸಮಾನರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾವು ಯಾವುದೇ ಹೊಸ ಕಾನೂನುಗಳನ್ನು ಈಗ ಜಾರಿಗೆ ತರುತ್ತಿಲ್ಲ. 2001, 2002 ಹಾಗೂ ಹೈಕೋರ್ಟ್‍ನ ಆದೇಶಗಳ ಅನುಸಾರ ಜಾರಿಗೆಯಾಗುತ್ತದೆ. ಹಿಂದಿನ ಸರ್ಕಾರಗಳೇ ಈ ನಿಯಮಗಳನ್ನು ಜಾರಿ ಮಾಡಿದ್ದು ಎಂದು ಸಮರ್ಥಿಸಿಕೊಂಡರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಸರ್ಕಾರ ಮೊದಲ ಆದ್ಯತೆ ಕೊಟ್ಟಿದೆ. ಎಲ್ಲಿಯೂ ಕೂಡ ಯಾರೊಬ್ಬರೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡಿಲ್ಲ. ಸಂಘಟನೆಗಳೇ ಇರಲಿ, ಯಾರೇ ಇರಲಿ ಸರ್ಕಾರದ ದೃಷ್ಟಿಯಲ್ಲಿ ಒಂದೇ ಎಂದರು. ಮಸೀದಿಗಳಲ್ಲಿ ಆಜಾನ್ ಕೂಗುವಾಗ ಮೈಕ್‍ಗಳಿಗೆ ಎಷ್ಟು ಡಿಸಿಬಲ್ ಅಳವಡಿಸಬೇಕೆಂದು ಹೈಕೋರ್ಟ್ ಆದೇಶ ನೀಡಿದೆ. ಈಗಾಗಲೇ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಧಾರ್ಮಿಕ ಮುಖಂಡರು ಸಂಘಟನೆಗಳ ಜೊತೆ ಪೊಲೀಸರು ಮಾತುಕತೆ ನಡೆಸಿದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಧರ್ಮವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಸಮಾಜವಾಗಲಿ, ಯಾವುದೇ ಸಂಘಟನೆಯಾಗಲಿ ಕಾನೂನು ಕೈಗೆತ್ತಿಕೊಳ್ಳದೆ ಕಾನೂನು ಸುವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇವೆ. ದೇವಸ್ಥಾನ,ಮಸೀದಿಗಳಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಹೈಕೋರ್ಟ್ ಆದೇಶವಿದೆ, ಎಷ್ಟು ಡೆಸಿಮಲ್ ವರೆಗೆ ಬಳಸಬೇಕು ಹಿಂದಿನ ಆದೇಶವಿದ್ದು, ಅದನ್ನು ಹಂತಹಂತವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೆ ತರುವ ಕೆಲಸ ನಡೆಯುತ್ತಿದೆ ಎಂದರು. ನಮ್ಮ ಸರ್ಕಾರ ಹೊಸದಾಗಿ ಯಾವ ಆದೇಶವನ್ನು ಮಾಡುತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇವುಗಳು ಜಾರಿಗೆ ಬಂದಿದ್ದಲ್ಲ. ಹಿಂದಿನ ಆದೇಶಗಳನ್ನೇ ನಾವು ಪಾಲನೆ ಮಾಡುತ್ತಿದ್ದೇವೆ ಅಷ್ಟೇ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

error: Content is protected !! Not allowed copy content from janadhvani.com