ಕೊಲಂಬೊ, ಏ.4- ಒಂದು ಲೀಟರ್ ಪೆಟ್ರೋಲ್‍ಗಾಗಿ ಎರಡು ದಿನ ಪೆಟ್ರೋಲ್ ಬಂಕ್ ಮುಂದೆ ಸಾಲು ಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಉದ್ಭವಿಸಿರುವುದರಿಂದ ಸಿಟ್ಟಿಗೆದ್ದ ಸಾರ್ವಜನಿಕರು ದೇಶಾದ್ಯಂತ ಪ್ರತಿಭಟನೆಗೆ ಇಳಿದಿದ್ದು ಪರಿಸ್ಥಿತಿ ತಹಬದಿಗೆ ತರಲು ಶ್ರೀಲಂಕಾದ ರಾಷ್ಟ್ರಾಧ್ಯಕ್ಷರು ಸರ್ವಪಕ್ಷಗಳ ಸಭೆ ಕರೆದಿದ್ದಾರೆ.
ದ್ವೀಪ ರಾಷ್ಟ್ರದಲ್ಲಿ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದರಿಂದ ಸಾರ್ವಜನಿಕರು ಕೆರಳಿದ್ದಾರೆ. ಎಲ್ಲೆಡೆ ನಡೆಯುತ್ತಿರುವ ಪ್ರತಿಭಟನೆಯಿಂದ ಸರ್ಕಾರವೂ ಕಂಗಾಲಾಗಿದೆ. ಪರಿಸ್ಥಿತಿ ನಿಭಾಯಿಸಲು ತುರ್ತು ಪರಿಸ್ಥಿತಿ ಘೋಷಣೆ ಮಾಡಿ, ಕರ್ಫ್ಯೂ ಜಾರಿಗೊಳಿಸಿದರು ಪ್ರಯೋಜನವಾಗಿಲ್ಲ.
ಹೀಗಾಗಿ ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಏಕತೆ ಮೂಡಿಸಲು ಸರ್ವ ಪಕ್ಷ ಸಭೆ ನಡೆಸಿದ್ದಾರೆ. ಅಧಿಕೃತ ಹೇಳಿಕೆಯ ಪ್ರಕಾರ, ಉದ್ಭವಗೊಂಡ ರಾಷ್ಟ್ರೀಯ ಬಿಕ್ಕಟ್ಟಿಗೆ ಪರಿಹಾರಗಳನ್ನು ಹುಡುಕಲು ಅಧ್ಯಕ್ಷ ಗೋತಬಯ ರಾಜಪಕ್ಸೆ ಎಲ್ಲಾ ರಾಜಕೀಯ ಪಕ್ಷಗಳನ್ನು ಆಹ್ವಾನಿಸಿದ್ದಾರೆ. ಜನರ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಭಾನುವಾರ ರಾತ್ರಿ ಸರ್ಕಾರದ ಎಲ್ಲಾ 26 ಸಂಪುಟ ಸಚಿವರು ರಾಜೀನಾಮೆ ನೀಡಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಮತ್ತು ಸಭಾನಾಯಕ ದಿನೇಶ್ ಗುಣವರ್ಧನ, ಸಚಿವರು ತಮ್ಮ ರಾಜೀನಾಮೆಯನ್ನು ಪ್ರಧಾನಿ ಮಹಿಂದಾ ರಾಜಪಕ್ಸೆ ಅವರಿಗೆ ನೀಡಿದ್ದಾರೆ ಎಂದಿದ್ದಾರೆ. ಆದರೆ ಸಾಮೂಹಿಕ ರಾಜೀನಾಮೆಗೆ ಅವರು ಯಾವುದೇ ಕಾರಣವನ್ನು ನೀಡಿಲ್ಲ.
ವಿದೇಶಿ ವಿನಿಮಯ ಬಿಕ್ಕಟ್ಟು ಮತ್ತು ಸಾಲದ ಸಮಸ್ಯೆಗಳಿಂದ ಉಂಟಾದ ಆರ್ಥಿಕ ಪರಿಸ್ಥಿತಿಯನ್ನು ಆಡಳಿತಾರೂಢ ರಾಜಪಕ್ಸೆ ಕುಟುಂಬ ತಪ್ಪಾಗಿ ನಿರ್ವಹಿಸಿದೆ ಎಂದು ಸಾರ್ವಜನಿಕರು ಸಾಮೂಹಿಕ ಆಂದೋಲನ ನಡೆಸಿದ್ದಾರೆ.
ಈ ವೇಳೆ ಪರಿಸ್ಥಿತಿ ನಿಭಾಯಿಸಲು ಎಲ್ಲಾ ವಿರೋಧ ಪಕ್ಷಗಳ ಜೊತೆ ಸರ್ಕಾರ ಮಾತುಕತೆ ನಡೆಸಿದೆ. ಅಧ್ಯಕ್ಷರು ರಾಜೀನಾಮೆ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಪ್ರತಿಭಟನೆಗಳು ತೀವ್ರಗೊಂಡಾಗ ಸರ್ಕಾರವು ಭಾನುವಾರ 15 ಗಂಟೆಗಳ ಕಾಲ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿತ್ತು. ಇಂಧನ ಮತ್ತು ಅನಿಲಕ್ಕಾಗಿ ಉದ್ದನೆಯ ಸರತಿ ಸಾಲು ನಿಲ್ಲಬೇಕಾದ ಜನ ಕಫ್ರ್ಯೂವನ್ನು ಧಿಕ್ಕರಿಸಿದರು. ವಿದ್ಯುತ್ ಇಲ್ಲದೆ ದೀರ್ಘ ಗಂಟೆಗಳ ಕಾಲ ಜನ ಸಂಕಷ್ಟಕ್ಕೆ ಈಡಾಗಿದ್ದರು.
ಸೆಂಟ್ರಲ್ ಬ್ಯಾಂಕ್ ಗವರ್ನರ್ ಅಜಿತ್ ನಿವಾರ್ಡ್ ಕಬ್ರಾಲ್ ಕೂಡ ರಾಜೀನಾಮೆ ನೀಡಿದ್ದಾರೆ. ಎಲ್ಲಾ ಕ್ಯಾಬಿನೆಟ್ ಮಂತ್ರಿಗಳು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ನಾನು ಇಂದು ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಕಬ್ರಾಲ್ ಹೇಳಿದರು.
ಬ್ರಿಟನ್‍ನಿಂದ 1948ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಶ್ರೀಲಂಕ ಕೆಟ್ಟ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ವಿದೇಶಿ ಕರೆನ್ಸಿಯ ಕೊರತೆಯಿಂದ ದೇಶ ಸಂಕಷ್ಟಕ್ಕೀಡಾಗಿದೆ. ಇಂಧನ, ಅಡುಗೆ ಅನಿಲ, ಅಗತ್ಯ ವಸ್ತುಗಳ ಕೊರತೆ ತೀವ್ರವಾಗಿದ್ದು ಜೀವನಾವಶ್ಯಕ ವಸ್ತುಗಳಿಗೆ ಸಾರ್ವಜನಿಕರು ವಾರಗಟ್ಟಲೆ ಕಾಯಬೇಕಾಗಿದೆ.