janadhvani

Kannada Online News Paper

ಸಣ್ಣ ಮಾಸ್ಕ್ ಹಲವಾರು ವೈರಸ್‌ಗಳಿಂದ ರಕ್ಷಣೆ ನೀಡಲು ಸಾಧ್ಯ ಎಂದಾದರೆ, ಹಿಜಾಬ್‌ನಿಂದ ಅದಕ್ಕಿಂತಲೂ ಹೆಚ್ಚಿನ ವೈಜ್ಞಾನಿಕ ಲಾಭವನ್ನು ಪಡೆಯಲು ಸಾಧ್ಯ.

ಧರ್ಮ ಆಚರಣೆಗಾಗಿ ಎಂದಾದರೆ, ಎಲ್ಲಾ ಕಡೆ ಆ ಆಚರಣೆ ಸಾಧ್ಯವಾಗಬೇಕು. ಉದಾಹರಣೆಗೆ, ಸಿಖ್ಖರು ತಮ್ಮ ಧರ್ಮವನ್ನು ಎಲ್ಲಾ ಕಡೆಯಲ್ಲೂ ಆಚರಿಸುತ್ತಾರೆ. ಅವರು ಸರಕಾರೀ ಉದ್ಯೋಗದಲ್ಲಿದ್ದರೂ, ಮಿಲಿಟರಿಯಲ್ಲೇ ಇದ್ದರೂ ಅವರ ಧರ್ಮಾಚರಣೆಗೆ ಯಾವುದೇ ತೊಡಕಾಗುವುದಿಲ್ಲ.ಅದೇ ರೀತಿ ಕ್ರೈಸ್ತ ಸನ್ಯಾಸಿನಿಗಳ ದಿರಿಸು ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಯನ್ನುಂಟು ಮಾಡಿಲ್ಲ.

ಇಸ್ಲಾಮ್ ಹೆಣ್ಣಿಗೆ ಬಹಳಷ್ಟು ಮಹತ್ವ ಕಲ್ಪಿಸಿದೆ. ಆದ್ದರಿಂದಲ್ಲೇ ಬೇರಾವ ಧರ್ಮದಲ್ಲೂ ಕಾಣದ ಪೋಷಾಕು ಅವರಿಗೆ ವಿಧಿಸಿದೆ. ಸುರಕ್ಷಿತವಾದ ವಾತಾವರಣದಲ್ಲೇ ಅವಳನ್ನು ಬೆಳೆಸುವುದು ಹೆಣ್ಣು ಹೆತ್ತ ಪೋಷಕರ ಧಾರ್ಮಿಕ ಜವಾಬ್ದಾರಿಯೂ ಹೌದು. ಆದ್ದರಿಂದಲೇ, ಹಿಂದಿನ ಕಾಲದಲ್ಲಿ ಅಕ್ಷರ ಕಲಿಯಲು ಮಹಿಳೆ ಹೊರ ಹೋಗುವ ಪರಿಪಾಠ ಇರಲಿಲ್ಲ. ಧಾರ್ಮಿಕ ವಿದ್ಯಾರ್ಜನೆ ಮಾತ್ರ ಅವರಿಗೆ ಸಿಗುತ್ತಿತ್ತು. ಅದೂ ಕೂಡಾ ಪ್ರಾಥಮಿಕ ಹಂತಕ್ಕೆ ಸೀಮಿತವಾಗಿತ್ತು. ಅಂದ ಮಾತ್ರಕ್ಕೆ, ಮಹಿಳೆಗೆ ಶಿಕ್ಷಣ ನೀಡುವುದನ್ನು ಇಸ್ಲಾಮ್ ಎಂದೂ ವಿರೋಧಿಸಿಲ್ಲ. ಇಸ್ಲಾಮಿನ ಆದಿ ಕಾಲದಲ್ಲಿ ಅತ್ಯಂತ ಹೆಚ್ಚು ಹದೀಸ್ (ಪ್ರವಾದಿ ನುಡಿ) ವರದಿ ಮಾಡಿದ ಜನರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು.

ಆಧುನಿಕ ಜಗತ್ತಿನಲ್ಲಿ ಮುಸ್ಲಿಂ ವಿದ್ವಾಂಸರು, ಲೌಕಿಕ ಮತ್ತು ಧಾರ್ಮಿಕ ಎರಡೂ ವಿದ್ಯಾಭ್ಯಾಸ ಮಹಿಳೆ ಪಡಯಬೇಕೆಂಬ ನಿಟ್ಟಿನಲ್ಲಿ, ಹಲವಾರು ಮಹಿಳಾ ಕಾಲೇಜುಗಳನ್ನು ತೆರೆದು ಸಮಾಜದಲ್ಲಿ ಹೆಣ್ಣನ್ನು ಸಬಲರನ್ನಾಗಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಧಾರ್ಮಿಕ ಚೌಕಟ್ಟನ್ನು ಮೀರದೇ ಉನ್ನತಮಟ್ಟದ ವಿದ್ಯಾರ್ಜನೆ ಪಡೆಯುವಲ್ಲಿ ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಮಹಿಳೆ ಯಶಸ್ವಿ ಆಗಿದ್ದಾಳೆ ಕೂಡಾ.

ಈಗ ಉಂಟಾಗಿರುವ ವಿವಾದ ಹೊಸತೇನೂ ಅಲ್ಲ, ಹಲವಾರು ಖಾಸಗಿ ಕಾಲೇಜುಗಳು ಈ ನಿಯಮ ತಂದು ಕೈಸುಟ್ಟುಕೊಂಡ ಬಳಿಕ ಇದೀಗ ಸರಕಾರೀ ಶಾಲಾ ಕಾಲೇಜುಗಳ ಕ್ಯಾಂಪಸ್ಸಿಗೆ ಈ ವಿವಾದವನ್ನು ಸಂಘ ಪರಿವಾರ ಎಳೆದು ತಂದಿದೆ. ಇದರ ಪರಿಣಾಮ, ಬೆರಳೆಣಿಕೆಯ ವರ್ಷಗಳಲ್ಲೇ ಈ ಸರಕಾರಿ ಶಾಲೆಗಳು ಬಂದ್ ಆಗುವ ಸ್ಥಿತಿಗೆ ತಲುಪಲಿದೆ. ಕಾರಣ, ಸರಕಾರಿ ಶಾಲೆಗಳಲ್ಲಿ ಬಹುತೇಕವೂ ಮುಸ್ಲಿಮರ ಮಕ್ಕಳಿಂದ ತನ್ನ ಅಸ್ತಿತ್ವ ಪಡೆದುಕೊಂಡಿದೆ. ಬಹುತೇಕ ಶಾಲೆಗಳಲ್ಲಿ ಶೇಕಡಾ ನೂರರಷ್ಟು ದಾಖಲಾತಿ ಮುಸ್ಲಿಮರಿಂದಲೇ ಆಗುತ್ತಿದೆ. ಅದು ಬಿಟ್ಟರೆ, ಹಿಂದುಳಿದ ವರ್ಗಗಳ ಮಕ್ಕಳ ದಾಖಲಾತಿಯಿಂದ. ಮೇಲ್ವರ್ಗದ ಮಕ್ಕಳ ದಾಖಲಾತಿ ಸರಕಾರಿ ಶಾಲಾ ಕಾಲೇಜುಗಳಲ್ಲಿ ಎಷ್ಟು ಎಂಬ ಅಂಕಿ ಅಂಶವನ್ನು ಸರಕಾರ ಬಹಿರಂಗಪಡಿಸಲಿ.

ಬಿಜೆಪಿ ಸರಕಾರ ಮುಂದಿನ ಚುನಾವಣೆ ಎದುರಿಸಲು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಅನ್ನುವುದು ಅವರಿಗೂ ತಿಳಿದ ವಿಚಾರ. ಚುನಾವಣೆ ಎದುರಿಸಲು ಬಿಜೆಪಿ ಮುಂದಿರುವ ಏಕೈಕ ಆಯುಧ ಕೋಮು ಧ್ರುವೀಕರಣ. ಅಲ್ಲದೇ, ಲೈಂಗಿಕ ಹಗರಣಗಳಿಂದ, ಸಿಡಿ ಸ್ಪೋಟದಿಂದ ಉಂಟಾದ ಮಾನಹಾನಿಯನ್ನು ಸರಿಪಡಿಸಲು ಸಾಧ್ಯವಿಲ್ಲ. ಜತೆಗೆ ಕರ್ನಾಟಕದ ಜನತೆಗೆ ಬಿಜೆಪಿ ಸರಕಾರದಿಂದ ಉಂಟಾದ ನಷ್ಟ ಹೇಳತೀರದ್ದು. ಇವೆಲ್ಲವೂ ಚುನಾವಣೆ ಎದುರಿಸಲು ಕಗ್ಗಂಟಾಗಿರುವಾಗ, ಬಡ ವಿದ್ಯಾರ್ಥಿಗಳನ್ನು ಬಳಸಿ, ಕೇಸರಿ ಶಾಲು ಹೊದಿಸಿ ಹೊಸ ರಣರಂಗವನ್ನು ಸೃಷ್ಟಿಸಲು ಸಂಘ ಪರಿವಾರ ಹೊರಟಿದೆ. ಕೊರೋನಾ NRC ಮತ್ತು CAA ಸದ್ದಡಗಿಸಿದಂತೆ ಇದು ಕೂಡಾ ಕರ್ನಾಟಕದ ಮಹಾ ಜನತೆಯ ಬುದ್ಧಿಮತ್ತೆಯ ಮುಂದೆ ನಗಣ್ಯವಾಗಲಿದೆ.

ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಹಿಜಾಬ್ ವಿವಾದ ಮತ್ತು ಶುಕ್ರವಾರದ ಕೂಟ ಪ್ರಾರ್ಥನೆಗೆ ಹೋಗುವುದನ್ನು ನಿರ್ಬಂಧಿಸುವ ತೀರ್ಮಾನ ಕೈಗೊಂಡಿತ್ತು. ಅದರ ಪರಿಣಾಮ ಏನಾಯಿತು ಅಂದರೆ, ಮುಸ್ಲಿಮರು ಹೆಚ್ಚಿನ ಶಾಲೆಗಳನ್ನು ತೆರೆದು ಪೈಪೋಟಿ ಆದಾಗ, ದಾಖಲಾತಿಗೆ ಹೊಡೆತ ಬಿದ್ದಾಗ, ಆ ನಿಷೇಧವನ್ನು ಹಿಂಪಡೆಯುವ ಹಂತಕ್ಕೆ ತಲುಪಿದ ಉದಾಹರಣೆ ಮಾತ್ರವಲ್ಲ, ಎಲ್ಲಾ ದಿನ ಪ್ರಾರ್ಥನೆಗೆ ಸಮೀಪದ ಮಸೀದಿಗೆ ತೆರಳಲು ಅವಕಾಶ ಕೊಟ್ಟ ಉದಾಹರಣೆಗಳೂ ಇದೆ.

ಮುಂದೇನಾಗುತ್ತೆ ಅಂದರೆ, ಹಿಜಾಬ್ ಎಂಬ ಧಾರ್ಮಿಕ ಕಟ್ಟಳೆಯನ್ನು ಶಾಲೆಯಿಂದ ಹೊರಗಿಟ್ಟು ಶಾಲೆಯನ್ನು ಪ್ರವೇಶಿಸಬೇಕು ಅನ್ನುವವರು, ಧರ್ಮವನ್ನು ಕೆಲವು ಕಡೆ ಹೊರಗಿಡಬೇಕು, ಮತ್ತೆ ಅದನ್ನು ಮೇಲೆಳೆದುಕೊಳ್ಳಬೇಕು ಅಂದರೆ, ಅದು ಯಾವುದೇ ಧರ್ಮೀಯರಿಗೂ ಸಾಧ್ಯವಾಗದ ಮಾತು. ಧರ್ಮಾಚರಣೆ ಎಲ್ಲಾ ಕಡೆಯೂ ಮಾಡಲು ಸಾಧ್ಯವಾದರೆ ಮಾತ್ರ ನಿಜವಾದ ಧಾರ್ಮಿಕ ಸ್ವಾತಂತ್ರ್ಯದ ಸಂವಿಧಾನತ್ಮಾಕ ಹಕ್ಕು ಲಭಿಸಿದಂತೆ. ಶಾಲೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲವೆನ್ನುವವರು, ಸೂರ್ಯ ನಮಸ್ಕಾರ ಸೇರಿದಂತೆ, ಶಾರದಾ ಪೂಜೆ, ಸರಸ್ವತಿ ಪೂಜೆ ಮತ್ತಿತರ ಕಾರ್ಯಕ್ರಮಗಳು ಶಾಲೆಗಳಲ್ಲಿ ನಡೆಯುತ್ತದೆ. ಅದರ ಮಾನದಂಡವನ್ನು ಹೇಗೆಂದು ವಿವರಿಸುವಿರಾ?

ಸಮವಸ್ತ್ರದ ಉದ್ದೇಶ ಸಭ್ಯ ವಸ್ತಧಾರಣೆಯಾಗಿದೆ. ಹಿಜಾಬ್ ಧರಿಸುವುದರಿಂದ ಸಭ್ಯತೆ ಇನ್ನಷ್ಟು ಹೆಚ್ಚಾಗುತ್ತದೆ ಹೊರತು, ಎಂದಿಗೂ ಸಭ್ಯತೆ ಕಡಿಮೆಯಾಗಲ್ಲ. ತಲೆ ಮುಚ್ಚುವುದರಿಂದ ಉಂಟಾಗುವ ಲಾಭ ಅನೇಕ, ಸುಡು ಬಿಸಿಲಿನಿಂದ ಹಿಡಿದು ದೂಳಿನಿಂದ ಮುಖವನ್ನು ತಲೆಯನ್ನು ಅದು ರಕ್ಷಿಸುತ್ತದೆ. ಚಿಕ್ಕ ಮಾಸ್ಕ್ ಹಲವಾರು ವೈರಸ್‌ಗಳಿಂದ ರಕ್ಷಣೆ ನೀಡಲು ಸಾಧ್ಯ ಎಂದಾದರೆ, ಹಿಜಾಬ್‌ನಿಂದ ಅದಕ್ಕಿಂತಲೂ ಹೆಚ್ಚಿನ ವೈಜ್ಞಾನಿಕ ಲಾಭವನ್ನು ಪಡೆಯಲು ಸಾಧ್ಯ.

ಒಂದು ವೇಳೆ ಮುಸ್ಲಿಮರ ಹಿಜಾಬ್‌ಗೆ ವಿರುದ್ಧವಾಗಿ ನ್ಯಾಯಾಲಯದ ತೀರ್ಪು ಬಂದರೆ, ಆ ತೀರ್ಪನ್ನು ಗೌರವಿಸಿ ಮುಸ್ಲಿಮರೆಲ್ಲರೂ ಶಾಲಾ ಶಿಕ್ಷಣವನ್ನು ಮೊಟಕುಗೊಳಿಸಿ ಮನೆಯಲ್ಲಿ ಕೂತರೆ, ಅವರಿಗೆ ಶಿಕ್ಷಣದ ಜವಾಬ್ದಾರಿಯನ್ನು ಯಾರು ಹೊರುತ್ತಾರೆ. ಕಡ್ಡಾಯ ಶಿಕ್ಷಣದ ಮಾನದಂಡಗಳನ್ನು ಯಾರಲ್ಲಿ ಕೇಳಬೇಕು. ಶಿಕ್ಷಣ ಸಚಿವರ ನಡವಳಿಕೆ ಈ ರಾಜ್ಯದ ಜಾತ್ಯತೀತ ತತ್ವ ಮತ್ತು ಸಂವಿಧಾನಕ್ಕೆ ಪೂರಕವಾಗಿಲ್ಲ ಅನ್ನುವುದು ಅವರ ಹೇಳಿಕೆಗಳಿಂದ ತಿಳಿದು ಬರುತ್ತದೆ.

ಮುಸ್ಲಿಮರು ಇನ್ನಷ್ಟು ವಿದ್ಯಾಸಂಸ್ಥೆಗಳನ್ನು ಅವರ ಧಾರ್ಮಿಕ ಸ್ವಾತಂತ್ರ್ಯದ ಪಡೆಯುವಿಕೆಗಾಗಿ ಹುಟ್ಟು ಹಾಕಿದರೆ, ಬಡವಾಗುವುದು ಸರಕಾರದ ಶಾಲೆಗಳು ಮತ್ತು ಅಲ್ಲಿನ ಉದ್ಯೋಗಿಗಳು ಅನ್ನುವುದು ಮನದಟ್ಟು ಮಾಡಿಕೊಳ್ಳಬೇಕು.

ಹೀಗಿರುವಾಗ ಸರಕಾರದ ಶಿಕ್ಷಣ ಇಲಾಖೆ ಮತ್ತು ಮಾನ್ಯ ನ್ಯಾಯಾಲಯ ಒಂದು ವಿಷಯವನ್ನು ಗಮನದಲ್ಲಿಡಬೇಕು, ಕೊರೋನಾ ಲಾಕ್‌ಡೌನ್ ಹೆಸರಲ್ಲಿ ಎರಡುವರೆ ವರ್ಷಗಳ ಕಾಲ ಶಾಲಾ ಕಾಲೇಜನ್ನು ಬಂದ್ ಮಾಡಬೇಕಾದ ದುರ್ಗತಿ ಬಂತು. ಇನ್ನಾದರೂ ಶಾಲೆ ತೆರೆದು ವಿದ್ಯಾರ್ಜನೆಗೆ ಅವಕಾಶ ನೀಡುವ ಬದಲು ಸಂಘ ಪರಿವಾರದ ಅಜೆಂಡಾದ ಭಾಗವಾಗಿ ನೀವೇನಾದರೂ ಹಿಜಾಬ್ ಅನ್ನು ನಿಷೇಧಿಸಿದ್ದೇ ಆದರೇ, ಬರುವ ಶೈಕ್ಷಣಿಕ ವರ್ಷದಿಂದ ಅಥವಾ ಇದೇ ಅವಧಿಯಲ್ಲಿ ಹಲವಾರು ವಿದ್ಯಾರ್ಥಿನಿಗಳು ಶಿಕ್ಷಣ ಆ ಕಾರಣದಿಂದ ಮೊಟಕುಗೊಳಿಸುವ ಸಾಧ್ಯತೆ ಇದೆ. ಮತ್ತೊಂದು, ಮುಂದಿನ ಶೈಕ್ಷಣಿಕ ಅವಧಿಗೆ ಸರಕಾರಿ ಶಾಲಾ ಕಾಲೇಜುಗಳು ದಾಖಲಾತಿ ಕೊರತೆಯಿಂದ ಬಂದ್ ಮಾಡಬೇಕಾಗಿ ಬರಲೂಬಹುದು. ಗೇಟ್ ಬಂದ್ ಮಾಡುವ ಪ್ರಾಂಶುಪಾಲರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇಲ್ಲವೆಂದಿಲ್ಲ. ಸರಕಾರ ಮತ್ತು ನ್ಯಾಯಾಲಯ ಈ ನಿಟ್ಟಿನಲ್ಲಿ ಬಲು ಎಚ್ಚರಿಕೆಯಿಂದಲೇ ನಡೆದುಕೊಳ್ಳಬೇಕು.

ಈ ಮೊದಲಿನಂತೆ ಹಿಜಾಬ್ ಹಾಕಲು ಅನುಮತಿ ನೀಡುವುದಲ್ಲದೇ ಶಿಕ್ಷಣ ಇಲಾಖೆಗೆ ಅನ್ಯ ದಾರಿಯಿಲ್ಲ. ಸಂಘ ಪರಿವಾರವೇ ಈ ದೇಶಕ್ಕೆ ದೊಡ್ಡದು ಎಂದಾದರೆ, ಮಾತ್ರ ಹಿಜಾಬ್ ವಿರೋಧಿಸಿ ನಿಲುವು ಕೈಗೊಳ್ಳಲು ಸರಕಾರಕ್ಕೆ ಮತ್ತು ನ್ಯಾಯಾಲಯಕ್ಕೆ ಸಾಧ್ಯ.

ಕರ್ನಾಟಕದ ಜನತೆಗೆ ಒಳಿತಾಗಲಿ. ಕೋಮುವಾದ ಅಳಿಯಲಿ. ಜಾತ್ಯಾತೀತತೆ ಬೆಳಗಲಿ. ಎಲ್ಲರೂ ಪ್ರಾರ್ಥಿಸೋಣ, ಶ್ರಮಿಸೋಣ. ಮುಸ್ಲಿಮ್ ರಾಜಕಾರಣಿಗಳು, ಉಲಮಾ ಮತ್ತು ಉಮರಾ ರಾಜಕೀಯ ಉದ್ದೇಶಕ್ಕಾಗಿ ಈ ವಿವಾದವನ್ನು ಬಳಸಿಕೊಳ್ಳದಂತಾಗಲಿ. ಜೈ ಹಿಂದ್. ಜೈ ಕರ್ನಾಟಕ.

error: Content is protected !! Not allowed copy content from janadhvani.com