janadhvani

Kannada Online News Paper

ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಇಲ್ಲ

ಕಳೆದ ಎರಡ್ಮೂರು ತಿಂಗಳಿನಿಂದ ನೈಟ್ ಕರ್ಫ್ಯೂ ತೆರವುಗೊಳಿಸಬೇಕೆಂದು ವ್ಯಾಪಾರಸ್ಥರು ಮನವಿ ಮಾಡಿಕೊಂಡಿದ್ದರು.

ಬೆಂಗಳೂರು,ನ.5 : ಕೋವಿಡ್ 19 ಸೋಂಕು ಹರಡುವುದನ್ನು ತಡೆಯಲು ರಾಜ್ಯದಾದ್ಯಂತ ರಾತ್ರಿ 10:00 ರಿಂದ ಬೆಳಿಗ್ಗೆ 5:00 ರವರೆಗೆ ಹೇರಲಾಗಿದ್ದ ಕರ್ಫ್ಯೂ ಅನ್ನುಇಂದಿನಿಂದ (ನವೆಂಬರ್ 5) ಹಿಂಪಡೆಯಲಾಗಿದೆ.

ಅಕ್ಟೋಬರ್ 25 ರಂದು ಹಿಂದಿನ ಆದೇಶದ ಅವಧಿ ಮುಗಿದ ನಂತರ ಕರ್ನಾಟಕದಾದ್ಯಂತ ರಾತ್ರಿ ಕರ್ಫ್ಯೂ ಕುರಿತಾಗಿ ಇದ್ದ ಊಹಾಪೋಹಗಳನ್ನು ಕೊನೆಗೊಳಿಸಿರುವ ರಾಜ್ಯ ಸರ್ಕಾರ ಶುಕ್ರವಾರ ಔಪಚಾರಿಕವಾಗಿ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದಿದೆ.ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಹೊರಡಿಸಿದ ಹೊಸ ಆದೇಶದಲ್ಲಿ,ರಾತ್ರಿ ಕರ್ಫ್ಯೂ ವಿಸ್ತರಿಸುವ ಹಿಂದಿನ ಆದೇಶವನ್ನು ರದ್ದುಗೊಳಿಸಲಾಗಿದೆ.

ನಗರದಲ್ಲಿ ಕುದುರೆ ಓಟಗಳನ್ನು ಸಹ ನಡೆಸಲು ಸರ್ಕಾರ ಷರತ್ತುಬದ್ಧ ಅನುಮತಿ ನೀಡಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ. ಸ್ಥಳಾವಕಾಶದ ಸಾಮರ್ಥ್ಯದಷ್ಟು ಮಾತ್ರ ಕುದುರೆ ಓಟದ ಪೋಷಕರು ಕುದುರೆ ಓಟಗಳಲ್ಲಿ ಭಾಗವಹಿಸತಕ್ಕದು. ಪೂರ್ಣವಾಗಿ ಕೋವಿಡ್ ಲಸಿಕೆ ಪಡೆದುಕೊಂಡವರು ಮಾತ್ರ ಭಾಗವಹಿಸಬಹುದಾಗಿದೆ.

ರಾಜ್ಯದಲ್ಲಿ ಕೊರೊನಾ ಪಸರಿಸುವ ಪ್ರಮಾಣ ಕಡಿಮೆ ಆಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಒಂದೊಂದೆ ವಲಯಗಳಿಗೆ ವಿನಾಯ್ತಿ ನೀಡುತ್ತಿದೆ, ಕಳೆದ ಎರಡ್ಮೂರು ತಿಂಗಳಿನಿಂದ ನೈಟ್ ಕರ್ಫ್ಯೂ ತೆರವುಗೊಳಿಸಬೇಕೆಂದು ವ್ಯಾಪಾರಸ್ಥರು ಮನವಿ ಮಾಡಿಕೊಂಡಿದ್ದರು. ಇದೀಗ ವ್ಯಾಪಾರಿಗಳ ಮನವಿಯನ್ನು ಸಮ್ಮತಿಸಿರುವ ಸರ್ಕಾರ , ರಾತ್ರಿ ಕರ್ಫ್ಯೂ ರದ್ದು ಮಾಡಿದೆ.

ಅಕ್ಟೋಬರ್ ನಲ್ಲಿ ಪ್ರಾಥಮಿಕ ಶಾಲೆ ಆರಂಭಕ್ಕೆ ಅನುಮತಿ ನೀಡಿದ್ದ ರಾಜ್ಯ ಸರ್ಕಾರ ನಿನ್ನೆ LKG ಮತ್ತು ಯುಕೆಜಿ ಭೌತಿಕ ತರಗತಿ ನಡೆಸಲು ಅನುಮತಿ ನೀಡಿದೆ. ಶಾಲೆ ಆರಂಭಕ್ಕೆ ಹಲವು ಮಾರ್ಗಸೂಚಿಗಳನ್ನು ಸರ್ಕಾರ ಪ್ರಕಟಿಸಿದೆ. ಜೊತೆಗೆ ಕಡ್ಡಾಯವಾಗಿ ಪೋಷಕರು ಮತ್ತು ಶಿಕ್ಷಕರು ಎರಡೂ ಡೋಸ್ ಕೊರೊನಾ ಲಸಿಕೆ ಪಡೆದಿರಬೇಕೆಂಬ ಷರತ್ತು ವಿಧಿಸಿದೆ.

ರಾಜ್ಯದಲ್ಲಿ ಗುರುವಾರ 261 ಹೊಸ ಕೋವಿಡ್ -19 ಪ್ರಕರಣಗಳು ಮತ್ತು ಐದು ಸಾವುಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

error: Content is protected !! Not allowed copy content from janadhvani.com