janadhvani

Kannada Online News Paper

ಬೀದಿ ನಾಯಿಗಳ ಹಾವಳಿ ಹೆಚ್ಚಳ: ಅರ್ಧಗಂಟೆಯಲ್ಲಿ 15 ಜನರನ್ನು ಕಚ್ಚಿದ ಹುಚ್ಚು ನಾಯಿ

ಮನೆಯ ಮುಂದೆ ನಿಂತಿದ್ದ ಮೂರು ವರ್ಷದ ಪುಟ್ಟ ಮಗುವಿನ ಮೇಲೆ ಎರಗಿದ ಹುಚ್ಚುನಾಯಿ ನಾಲ್ಕು ಹಲ್ಲುಗಳನ್ನು ಕಚ್ಚಿ ಕಿತ್ತುಹಾಕಿದೆ

ಹಾಸನ: ನಗರದಲ್ಲಿ ಬೀದಿನಾಯಿಗಳ ಹಾವಳಿಗೆ ಸಾರ್ವಜನಿಕರು ಹೈರಾಣಾಗಿದ್ದು, ಅರ್ಧಗಂಟೆಯಲ್ಲಿ 15 ಜನರಿಗೆ ಕಚ್ಚಿ ಗಾಯಗೊಳಿಸಿವೆ. ಇಂದು ಹುಚ್ಚುನಾಯಿಯೊಂದು ದಾರಿಹೋಕರ ಮೇಲೆ ದಾಳಿ ನಡೆಸಿ, ಸಿಕ್ಕಸಿಕ್ಕವರನ್ನು ಮನಬಂದಂತೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ.

ಮನೆಯ ಮುಂದೆ ನಿಂತಿದ್ದ ಮೂರು ವರ್ಷದ ಪುಟ್ಟ ಮಗುವಿನ ಮೇಲೆ ಎರಗಿದ ಹುಚ್ಚುನಾಯಿ ನಾಲ್ಕು ಹಲ್ಲುಗಳನ್ನು ಕಚ್ಚಿ ಕಿತ್ತುಹಾಕಿದೆ. ಇಷ್ಟಕ್ಕೆ ಸುಮ್ಮನಾಗದೆ ಗದ್ದವನ್ನು ಕಚ್ಚಿದೆ. ಮಗುವಿನ ಪೋಷಕರು ಓಡಿ ಬಂದಿದ್ದರಿಂದ ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ನಂತರ ವಾಕಿಂಗ್ ತೆರಳುತ್ತಿದ್ದ ತ್ರೀಪಾಠಿ ಎಂಬ ವೈದ್ಯರ ಮೇಲೂ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ. ಹೀಗೆ ಹದಿನೈದು ಮಂದಿ‌ ಮೇಲೆ ದಾಳಿ ಮಾಡಿರುವ ಹುಚ್ಚು ಶ್ವಾನ ಹಣೆ, ಮುಖ, ಬೆನ್ನು, ಅಂಗೈ, ಕಾಲು, ತೊಡೆ ಇತರ ಭಾಗಗಳಿಗೆ ಕಚ್ಚಿದ್ದು ತೀವ್ರ ಸ್ವರೂಪದ ಗಾಯಗಳಾಗಿವೆ. ನಾಯಿ ದಾಳಿಗೊಳಗಾದವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಬೀದಿನಾಯಿಗಳ‌ ಹಾವಳಿ ಇದೇ ಮೊದಲೇನಲ್ಲಾ. ಪದೇ ಪದೇ ಮನೆಯ ಮುಂದೆ ಆಟವಾಡುತ್ತಿರುವ ಮಕ್ಕಳು, ಮುಂಜಾನೆ, ಸಂಜೆ ವೇಳೆ ವಾಕಿಂಗ್ ಹೋಗುತ್ತಿರುವವರ‌ ಮೇಲೂ ದಾಳಿ ಮಾಡಿವೆ. ಬೀದಿನಾಯಿಗಳ‌ ಉಪಟಳಕ್ಕೆ ಕಡಿವಾಣ ಹಾಕಿ ಎಂದು ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ‌ ಗಮನಕ್ಕೂ ತಂದರೂ ಯಾರೂ ಕೂಡ ಇತ್ತ ಗಮನಹರಿಸಿಲ್ಲ. ಇವರ ಬೇಜವಾಬ್ದಾರಿಯಿಂದಲೇ ಇಂತಹ ಘಟನೆಗಳು ಮರುಕಳುಸುತ್ತಿವೆ ಎಂದು ಅಧಿಕಾರಿಗಳಿಗೆ ನಗರವಾಸಿಗಳು‌ ಹಿಡಿಶಾಪ ಹಾಕುತ್ತಿದ್ದಾರೆ.

ಹಾಸನ ನಗರವೊಂದರಲ್ಲೇ ಸುಮಾರು ಮೂರರಿಂದ ನಾಲ್ಕು ಸಾವಿರ ನಾಯಿಗಳಿವೆ. ಕೋಳಿ, ಮಾಂಸ, ನಾನ್ ವೆಜ್ ಹೋಟೆಲ್ ನವರು ಜನನಿಬಿಡ ಪ್ರದೇಶದಲ್ಲೇ ತ್ಯಾಜ್ಯವನ್ನು ಬಿಸಾಡುತ್ತಿದ್ದಾರೆ. ಇದರ‌ ಜೊತೆಗೆ ಜನರು ಕೂಡ ಕಸ ಇತ್ಯಾದಿ ಪದಾರ್ಥಗಳನ್ನು ರಸ್ತೆ ಬದಿಯಲ್ಲಿ ಎಸೆಯುತ್ತಿರುವುದರಿಂದ ನಾಯಿಗಳ ಉಪಟಳ‌ ಹೆಚ್ಚಾಗಿದೆ.

ಈ ಬಗ್ಗೆ ನಗರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಾಯಿಗಳ ಸಂಖ್ಯೆ ಪ್ರತಿ ವರ್ಷ ಏರಿಕೆಯಾಗುತ್ತಲೆ ಇದೆ.ನಾಯಿಗಳ ಸಂತಾನಹರಣ ಚಿಕಿತ್ಸೆಗೆ ಟೆಂಡರ್ ಕರೆದರೂ ಯಾರೂ ಬಂದಿಲ್ಲ. ಈಗ ತಮಿಳುನಾಡು ಮೂಲದವರು ಬಂದಿದ್ದು ಶೀಘ್ರದಲ್ಲಿಯೇ ನಾಯಿಗಳನ್ನೆಲ್ಲಾ ಹಿಡಿದು ಸಂತಾನಹರಣ ಚಿಕಿತ್ಸೆ ನೀಡಲಾಗುವುದು ಎಂದು ಸಬೂಬು ಹೇಳುತ್ತಿದ್ದಾರೆ.

error: Content is protected !! Not allowed copy content from janadhvani.com