janadhvani

Kannada Online News Paper

ಜಮ್ಮು, ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲಾಗುವುದು- ಅಮಿತ್ ಶಾ

ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಶಾ ಭೇಟಿ ನೀಡಿದ್ದಾರೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಉನ್ನತ ಮಟ್ಟದ ಭದ್ರತಾ ಪರಾಮರ್ಶೆ ಸಭೆ ನಡೆಸಿದ್ದಾರೆ. ವಿಧಾನಸಭೆ ಚುನಾವಣೆಯ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ.

ಕಾಶ್ಮೀರದಲ್ಲಿ 15 ದಿನಗಳ ಅವಧಿಯಲ್ಲಿ 11 ಮಂದಿ ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ ಬೆನ್ನಲ್ಲೇ ಗೃಹ ಸಚಿವರು ಈ ಸಭೆ ನಡೆಸಿದ್ದಾರೆ. ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿದ ಬಳಿಕ ಮತ್ತು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ ನಂತರ ಇದೇ ಮೊದಲ ಬಾರಿಗೆ ಶಾ ರಾಜ್ಯಕ್ಕೆ ಮೂರು ದಿನಗಳ ಭೇಟಿ ನೀಡಿದ್ದಾರೆ.

ರಾಜ ಭವನದಲ್ಲಿ ಸಭೆ ನಡೆಸಿದ ಶಾ, ಅಲ್ಪಸಂಖ್ಯಾತರ ಮತ್ತು ಹೊರ ರಾಜ್ಯಗಳಿಂದ ಬಂದವರ ಸುರಕ್ಷತೆಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಸೇನೆ, ಅರೆಸೇನಾ ಪಡೆಗಳು, ಗುಪ್ತಚರ ಇಲಾಖೆ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳೂ ಸಭೆಯಲ್ಲಿ ಪಾಲ್ಗೊಂಡಿದ್ದರು.

ಭಯೋತ್ಪಾದನೆ ನಿಗ್ರಹಕ್ಕೆ ಭದ್ರತಾ ಪಡೆಗಳು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.ನಾಗರಿಕರ ಹತ್ಯೆ ಬೆನ್ನಲ್ಲೇ ಕೇಂದ್ರ ಸಶಸ್ತ್ರ ಪಡೆಗಳ ಹೆಚ್ಚುವರಿ 50 ತಂಡಗಳನ್ನು ಜಮ್ಮು–ಕಾಶ್ಮೀರದಲ್ಲಿ ನಿಯೋಜಿಸಲಾಗಿದೆ.

ಆದರೆ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸುವ ಯಾವುದೇ ಸೂಚನೆಗಳಿಲ್ಲ. ಅಕ್ಟೋಬರ್ 31, 2019 ರಂದು, ಜಮ್ಮು ಮತ್ತು ಕಾಶ್ಮೀರವು ಲಡಾಖ್ ಮತ್ತು ಜಮ್ಮುವಿನ ಕೇಂದ್ರಾಡಳಿತ ಪ್ರದೇಶಗಳಾಯಿತು.

error: Content is protected !! Not allowed copy content from janadhvani.com