janadhvani

Kannada Online News Paper

ಕರ್ನಾಟಕದಿಂದ ಟನ್ ಗಟ್ಟಲೆ ಗೋ ಮಾಂಸ ಗೋವಾಕ್ಕೆ ರವಾನೆ- ಗೋವಾ ಸಿಎಂ

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದನಗಳಿಗಾಗಿ ಸಾಕಷ್ಟು ಜನರನ್ನು ಕೊಲ್ಲಲಾಗಿದೆ

ಗೋವಾ: ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತವಿರುವ ಅನೇಕ ರಾಜ್ಯಗಳಲ್ಲಿ ಗೋ ಹತ್ಯೆಯನ್ನು ನಿಷೇಧಿಸಲಾಗಿದೆ.ಆದರೆ, ನೆರೆಯ ಗೋವಾದಲ್ಲೂ ಬಿಜೆಪಿ ಸರ್ಕಾರವೇ ಆಳ್ವಿಕೆಯಲ್ಲಿದ್ದರೂ ಸಹ ಅಲ್ಲಿ ಗೋಹತ್ಯೆ ನಿಷೇಧವನ್ನು ಈವರೆಗೆ ಜಾರಿ ಮಾಡಲಾಗಿಲ್ಲ. ಅಲ್ಲದೆ, ಪ್ರತಿದಿನ ಕರ್ನಾಟಕ ಸುಮಾರು 2,000 ಕೆಜಿ ಗೋ ಮಾಂಸವನ್ನು ಗೋವಾಕ್ಕೆ ಪೂರೈಕೆ ಮಾಡುತ್ತದೆ ಎಂದು ಸ್ವತಃ ಅಲ್ಲಿನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಹಿತಿ ನೀಡಿದ್ದು ಸಾರ್ವಜನಿಕವಾಗಿ ಸಾಕಷ್ಟು ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ.

ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರವಾಗಿ ಗೋವಾ ವಿಧಾನಸಭೆಗೆ ಮಂಗಳವಾರ ಲಿಖಿತ ರೂಪದಲ್ಲಿ ಸಿಎಂ ಪ್ರಮೋದ್ ಸಾವಂತ್ ಉತ್ತರ ನೀಡಿದ್ದಾರೆ. ಈ ಉತ್ತರದಲ್ಲಿ, “ಕಳೆದ 6 ತಿಂಗಳಿನಲ್ಲಿ ಕರ್ನಾಟಕದಿಂದ ಗೋವಾಕ್ಕೆ 388 ಟನ್ ಗಳಷ್ಟು ದನದ ಮತ್ತು ಎಮ್ಮೆಯ ಮಾಂಸವನ್ನು ತರಿಸಿಕೊಳ್ಳಲಾಗಿದೆ. ಕರ್ನಾಟಕದ ವ್ಯಾಪಾರಿಗಳು ಪ್ರತಿದಿನ ಗೋವಾಕ್ಕೆ ದನದ ಮಾಂಸವನ್ನು ರಫ್ತು ಮಾಡುತ್ತಿದ್ದು, ಈ ಉದ್ಯಮ ಪ್ರಬಲವಾಗಿ ಬೆಳೆಯುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಗೋವಾ ಮತ್ತು ಕರ್ನಾಟಕ ಗಡಿಯಲ್ಲಿ ಸಂಬಂಧಿತ ಅಧಿಕಾರಿಗಳು ಕರ್ನಾಟಕದ ದನದ ಮಾಂಸ ವ್ಯಾಪಾರಿಗಳಿಂದ ಸಂಗ್ರಹಿಸುವ ತೆರಿಗೆಯ ಮೊತ್ತದಿಂದ ಈ ಪ್ರಮಾಣವನ್ನು ಲೆಕ್ಕಹಾಕಲಾಗಿದೆ. ಪ್ರತಿದಿನ ಕರ್ನಾಟಕದಿಂದ ಸರಾಸರಿ 2,120 ಕೆ.ಜಿಯಷ್ಟು ದನ ಮತ್ತು ಎಮ್ಮೆಯ ಮಾಂಸ ಗೋವಾಗೆ ಬರುತ್ತದೆ ಎಂದು ತೆರಿಗೆ ದಾಖಲೆಗಳು ಹೇಳುತ್ತವೆ ಎಂದು ಮುಖ್ಯಮಂತ್ರಿ ಸಾವಂತ್ ಲಿಖಿತ ಉತ್ತರದಲ್ಲಿ ವಿವರಿಸಿದ್ದಾರೆ.

ಕರ್ನಾಟಕ ವಿಧಾನಸಭೆಯ ಗೋಹತ್ಯೆ ತಡೆ ಕಾಯ್ದೆಯನ್ನು ಜಾರಿಗೆ ತಂದ ನಂತರ ಗೋವಾಗೆ ಪೂರೈಕೆಯಾಗುವ ದನದ ಮಾಂಸದಲ್ಲಿ ಭಾರಿ ವ್ಯತ್ಯಯವಾಗಿದೆ ಎಂದು ಅವರು ಹೇಳಿದ್ದಾರೆ. ಗೋವಾದ ಒಟ್ಟು ಜನಸಂಖ್ಯೆಯಲ್ಲಿ ಶೇ 30 ರಷ್ಟು ಜನರು ದನ ಮತ್ತು ಎಮ್ಮೆಯ ಮಾಂಸವನ್ನು ತಿನ್ನುತ್ತಾರೆ. ಈ ಮಾಂಸಕ್ಕಾಗಿ ಗೋವಾ ರಾಜ್ಯವು ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಅವಲಂಬಿಸಿವೆ ಎಂದು ಅವರು ತಿಳಿಸಿದ್ದಾರೆ.
ತಿನ್ನಲು ವಿಧಿಸುವ ನಿಷೇಧ ರಫ್ತಿಗಿಲ್ಲವೆ?

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ದನದ ಮಾಂಸ ತಿಂದ ಕಾರಣಕ್ಕೆ ಅಥವಾ ದನದ ಮಾಂಸ ಎಂಬ ಸಂಶಯಕ್ಕೆ ಅನೇಕರ ಮೇಲೆ ಹಲ್ಲೆ ನಡೆಸಿ ಕೊಲ್ಲಲಾಗಿರುವ ಸಾಕಷ್ಟು ಘಟನೆಗಳು ನಡೆದಿವೆ. ದನಗಳಿಗಾಗಿ ಸಾಕಷ್ಟು ಜನರನ್ನು ಕೊಲ್ಲಲಾಗಿದೆ. ಇನ್ನೂ ಉತ್ತರಪ್ರದೇಶ ರಾಜ್ಯ ದನಗಳ ರಕ್ಷಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ.

ಆದರೆ, ಮತ್ತೊಂದೆಡೆ ದನದ ಮಾಂಸ ರಫ್ತಿನಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ. ಪ್ರತಿ ವರ್ಷ ಸಾವಿರಾರು ಕೋಟಿ ಮೌಲ್ಯದ ದನದ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಇದೀಗ ಕರ್ನಾಟಕದಿಂದ ರಫ್ತು ಮಾಡಲಾಗುವ ಮಾಂಸದ ಪ್ರಮಾಣವನ್ನು ಸ್ವತಃ ಗೋವಾ ಸಿಎಂ ಪ್ರಮೋದ್ ಸಾವಂತ್ ಸ್ಪಷ್ಟಪಡಿಸಿದ್ದಾರೆ. ಆದರೆ, ದನದ ಮಾಂಸ ತಿನ್ನಲು ನಿಷೇಧ ಹೇರಿರುವ ಬಿಜೆಪಿ ಸರ್ಕಾರಗಳು ದನದ ಮಾಂಸದ ರಫ್ತಿಗೆ ನಿಷೇಧ ಏಕೆ ಹೇರಿಲ್ಲ? ಬಿಜೆಪಿಯೇ ಅಧಿಕಾರದಲ್ಲಿರುವ ಗೋವಾದಲ್ಲಿ ಏಕೆ ದನದ ಮಾಂಸಕ್ಕೆ ನಿಷೇಧ ಇಲ್ಲ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

error: Content is protected !! Not allowed copy content from janadhvani.com