janadhvani

Kannada Online News Paper

ಸೌದಿ ಜೈಲಿನಿಂದ ಬಿಡುಗಡೆ- ಕೃತಜ್ಞತೆ ಸಲ್ಲಿಸಲು ಎ. ಪಿ. ಉಸ್ತಾದರನ್ನು ಭೇಟಿಯಾದ ಸಿರಾಜ್

ವಾಹನ ಅಪಘಾತವೊಂದರಲ್ಲಿ ಮೃತರಾದ ಇಬ್ಬರ ಸಂಭಂಧಿಕರಿಗೆ 'ಬ್ಲಡ್‌ಮಣಿ' 75ಲಕ್ಷ ರೂಪಾಯಿ ನೀಡಲು ಸಾದ್ಯವಾಗದ ಹಿನ್ನೆಲೆಯಲ್ಲಿ ಜೈಲುವಾಸ ಅನುಭವಿಸುತ್ತಿದ್ದರು

ಕಲ್ಲಿಕೋಟೆ :ಕೋಝಿಕ್ಕೋಡ್, ಇಂಙಪುಝ ಎಲೋಕ್ಕರ ನಿವಾಸಿ ಸಿರಾಜ್ ಸೌದಿಯಿಂದ ನೇರವಾಗಿ, ಎಪಿ ಉಸ್ತಾದರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಲು ಕಾರಂದೂರು ಮರ್ಕಝ್ ಗೆ ಆಗಮಿಸಿದರು.

ಐದು ವರ್ಷಗಳ ಹಿಂದೆ ನಡೆದ ಕಾರು ಅಪಘಾತದಲ್ಲಿ ಸಿರಾಜ್ ಅವರ ಜೀವನವೇ ಬುಡಮೇಲಾಯಿತು. ಸೌದಿ ಅರೇಬಿಯಾದ ತಾಯಿಫ್ ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸಿರಾಜ್ ಅವರು ಓಡಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಇಬ್ಬರು ಸೌದಿ ಪ್ರಜೆಗಳು ಮರಣಹೊಂದಿದ್ದರು.ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಸಿರಾಜ್ ಅವರ ಬಿಡುಗಡೆಗೆ ಮೃತರ ಸಂಬಂಧಿಕರಿಗೆ 75 ಲಕ್ಷ ರೂಪಾಯಿ(ಬ್ಲಡ್ ಮನಿ) ನೀಡುವಂತೆ ಸೌದಿ ನ್ಯಾಯಾಲಯ ಆದೇಶಿಸಿದೆ.

ಕ್ಯಾನ್ಸರ್ ಪೀಡಿತ ತಂದೆ ಮತ್ತು ತಾಯಿ, ಪತ್ನಿ ಹಾಗೂ ಪುಟ್ಟ ಹೆಣ್ಣುಮಗುವನ್ನು ಹೊಂದಿರುವ ಕುಟುಂಬದ ಮನೆಯನ್ನು ಮಾರಾಟ ಮಾಡಿದರೂ ಈ ಬೃಹತ್ ಮೊತ್ತವನ್ನು ಕಂಡುಹಿಡಿಯುವುದು ಅಸಾಧ್ಯವಾಗಿತ್ತು. ಈ ನಿಟ್ಟಿನಲ್ಲಿ ಕುಟುಂಬವು ಕೇರಳ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರೊಂದಿಗೆ ತಿಳಿಸಿದ್ದು, ಅವರ ಸೂಚನೆಯಂತೆ ಐಸಿಎಫ್ ಸೌದಿ ಸಮಿತಿಯು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದೆ.

ಈ ಮೊತ್ತವನ್ನು ಕಡಿತಗೊಳಿಸುವಂತೆ ಸಮಿತಿಯು ನ್ಯಾಯಾಲಯಕ್ಕೆ ಮನವಿ ಮಾಡಿತು ಮತ್ತು ಮೃತರ ಸಂಬಂಧಿಕರನ್ನು ಸಂಪರ್ಕಿಸಿತು. ಇದರ ಪರಿಣಾಮ ಮೃತರ ವಾರಸುದಾರರು 33 ಲಕ್ಷ ರೂ. ಪಾವತಿಸುವಂತೆ ತಿಳಿಸಿದರು. ಸಿರಾಜ್ ಅವರ ಸಂಬಂಧಿಕರಿಗೆ ಈ ಮೊತ್ತವನ್ನೂ ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ,ಐಸಿಎಫ್ ಸೌದಿ ರಾಷ್ಟ್ರೀಯ ಸಮಿತಿಯು ಸಿರಾಜ್ ಬಿಡುಗಡೆಗಾಗಿ ಹಣವನ್ನು ಸಂಗ್ರಹಿಸಿತು.

ಕಳೆದ ದಿನ ಸಿರಾಜ್ ಬಿಡುಗಡೆಗೊಂಡಿದ್ದು, ಊರಿಗೆ ತೆರಳಿ ತನ್ನ ಮನೆಗೆ ತೆರಳುವ ಮುಂಚಿತವಾಗಿ ತನ್ನ ಬಿಡುಗಡೆಗೆ ಕಾರಣಕರ್ತರಾದ ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಎ. ಪಿ. ಉಸ್ತಾದರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಕೇರಳ ಮುಸ್ಲಿಂ ಜಮಾಅತ್ ಮತ್ತು ಐಸಿಎಫ್ ಸೌದಿ ರಾಷ್ಟ್ರೀಯ ಸಮಿತಿಗೆ ಧನ್ಯವಾದಗಳನ್ನು ಸಲ್ಲಿಸಿದರು.

error: Content is protected !! Not allowed copy content from janadhvani.com