janadhvani

Kannada Online News Paper

ಕಾರು ಹರಿಸಿ ರೈತರ ಹತ್ಯೆ- ಆಶಿಶ್ ಮಿಶ್ರಾನಿಗೆ 14 ದಿನಗಳ ನ್ಯಾಯಾಂಗ ಬಂಧನ

ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದರು.

ಲಕ್ನೋ: ಲಿಖಿಂಪುರ್‌ ಖೇರಿ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾನನ್ನು ಶನಿವಾರ ಬಂಧಿಸಲಾಗಿತ್ತು. ಸುಮಾರು 12 ಗಂಟೆಗಳ ವಿಚಾರಣೆ ನಂತರ ಅವನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವೈದ್ಯಕೀಯ ತಂಡವು ಆರೋಪಿಯನ್ನು ಶನಿವಾರ ತಡರಾತ್ರಿ ಅಪರಾಧ ವಿಭಾಗದ ಕಚೇರಿಯಲ್ಲಿ ಪರೀಕ್ಷಿಸಿದ ನಂತರ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ನ್ಯಾಯಾಲಯಕ್ಕೆ ಕರೆದೊಯ್ದು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಆಶಿಶ್‌ನನ್ನು ಪೊಲೀಸ್ ರಿಮಾಂಡ್‌ ನೀಡುವ ಅರ್ಜಿಯನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟಿಗೆ ಸಲ್ಲಿಸಲಾಗಿದೆ ಎಂದು ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಎಸ್ ಪಿ ಯಾದವ್ ಹೇಳಿದ್ದಾರೆ. ಇದರ ವಿಚಾರಣೆಯನ್ನು ಸೋಮವಾರ ಬೆಳಿಗ್ಗೆ 11 ಗಂಟೆಗೆ ನಿಗದಿಪಡಿಸಲಾಗಿದೆ.

ಆರೋಪಿ ಆಶಿಶ್ ಮಿಶ್ರಾನನ್ನು ಲಖಿಂಪುರ್ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ಕೊರೊನಾ ಕ್ವಾರೈಂಟ್‌ನಲ್ಲಿ ಇರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

“ಆರಂಭದಲ್ಲಿ, ಕೈದಿಗಳನ್ನು ಮುಖ್ಯ ಬ್ಯಾರಕ್‌ನಿಂದ ದೂರವಿರಿಸಲಾಗುತ್ತದೆ. ಅವರಿಗೆ ಜೈಲಿನ ಆಹಾರವನ್ನು ನೀಡಲಾಗುತ್ತಿದೆ. ಕ್ವಾರಂಟೈನ್ ಅವಧಿ 14 ದಿನಗಳಾಗಿದ್ದು, ಅಲ್ಲಿ ಅವರ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು” ಎಂದು ಅಧಿಕಾರಿ ಹೇಳಿದ್ದಾರೆ.

ಉತ್ತರಪ್ರದೇಶದ ಲಿಖಿಂಪುರ್‌ ಖೇರಿಯಲ್ಲಿ ಪ್ರತಿಭಟನೆ ಮುಗಿಸಿ ವಾಪಾಸಾಗುತ್ತಿದ್ದ ರೈತರ ಮೇಲೆ ವಾಹನ ಹರಿಸಿ ಹತ್ಯೆ ಮಾಡಿರುವ ಆರೋಪದಲ್ಲಿ ಆಶಿಶ್ ಮಿಶ್ರಾನನ್ನು ಬಂಧಿಸಲಾಗಿದೆ. ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದರು.

error: Content is protected !! Not allowed copy content from janadhvani.com