ಬೆಂಗಳೂರು,ಆ. 22: ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಾಳೆಯಿಂದ (ಆ.23) ಶಾಲೆ ಕಾಲೇಜು ಪುನರ್ ಆರಂಭಕ್ಕೆ ಈಗಾಗಲೇ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. 9 ಮತ್ತು 10ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ಆರಂಭಕ್ಕೆ ಸರ್ಕಾರ ಕೂಡ ಎಲ್ಲಾ ಸಿದ್ದತೆ ನಡೆಸಿದ್ದು, ಯಾವುದೇ ಆತಂಕವಿಲ್ಲದೇ ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ಬರುವಂತೆ ತಿಳಿಸಿದೆ.
ಕೊರೊನಾ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯಲು ಅನುಮತಿ ನೀಡಲಾಗಿದೆ. ಶೇ.2 ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವಿರುವ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಸದ್ಯಕ್ಕೆ ಶಾಲಾ ಆರಂಭವಿಲ್ಲ.
ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ತರಬೇಕಿರುವುದು ಕಡ್ಡಾಯವಾಗಿದೆ. ಶಾಲೆಗೆ ಆಗಮಿಸುವ ಶಿಕ್ಷಕರು ಮತ್ತು ಸಿಬ್ಬಂದಿಗಳು ಮೊದಲ ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ. ಭೌತಿಕ ತರಗತಿಗೆ ಹಾಜರಾಗುವುದು ಕಡ್ಡಾಯವಾಗಿಲ್ಲವಾದರೂ, ಎಲ್ಲಾ ವಿದ್ಯಾರ್ಥಿಗಳು ಹಾಜರಾಗುವಂತೆ ಮನವಿ ಮಾಡಲಾಗಿದೆ.
ಈ ಸಂಬಂಧ ಈಗಾಗಲೇ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದ್ದು, ಎಲ್ಲಾ ಮುಂಜಾಗ್ರತಾ ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ.ವಾರದ ಐದು ದಿನಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ತನಕ ಹಾಗೂ ಶನಿವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 12.50 ರ ವರೆಗೆ ತರಗತಿಗಳು ನಡೆಯಲಿದೆ.
ಶಾಲಾ-ಕಾಲೇಜು ಆರಂಭವಾಗುತ್ತಿರುವ ಹಿನ್ನಲೆ ವಿದ್ಯಾರ್ಥಿಗಳಿಗೆ ಸಂಚಾರ ವ್ಯವಸ್ಥೆಯಲ್ಲಿ ತೊಂದರೆಯಾಗದಂತೆ ಸಾರಿಗೆ ಇಲಾಖೆ ಕೂಡ ವ್ಯವಸ್ಥೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ಹಳೆಯ ಬಸ್ ಪಾಸ್ ಮೂಲಕವೇ ಸಂಚಾರಕ್ಕೆ ಬಿಎಂಟಿಸಿ ಅವಕಾಶ ಮಾಡಿಕೊಟ್ಟಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಬಿಎಂಟಿಸಿ ಇದೇ 23ರಿಂದ 9 ರಿಂದ 12ನೇ ತರಗತಿ ಶಾಲಾ-ಕಾಲೇಜು ಆರಂಭಗೊಳ್ಳುತ್ತಿದೆ. ಈ ಹಿನ್ನೆಲೆ ಹಳೆಯ ಸ್ಮಾರ್ಟ್ ಕಾರ್ಡ್ ಪಾಸ್ ನಲ್ಲೇ ವಿದ್ಯಾರ್ಥಿಗಳು ಸೇವೆ ಪಡೆದು ಕೊಳ್ಳುವಂತೆ ಸೂಚನೆ ನೀಡಿದೆ. ಜೊತೆಗೆ ಪಾಸ್ ಇಲ್ಲದಿದ್ದಲ್ಲಿ ಶಾಲೆ-ಕಾಲೇಜು ಸೇರಿರುವ ಶುಲ್ಕದ ರಸೀದಿ ಅಥವಾ ಸ್ಕೂಲ್-ಕಾಲೇಜ್ ಐಡಿ ಕಾರ್ಡ್ ತೋರಿಸಿ ಸಂಚಾರ ನಡೆಸಬಹುದು. ಮುಂದಿನ ಆದೇಶದ ವರೆಗೆ ಈ ವ್ಯವಸ್ಥೆ ಜಾರಿಯಲ್ಲಿರಲಿದೆ ಎಂದು ಬಿಎಂಟಿಸಿ ಸ್ಪಷ್ಟನೆ ನೀಡಿದೆ.
ಸೋಮವಾರದಿಂದ ಶಾಲೆ ಆರಂಭವಾಗುತ್ತಿರುವ ಕುರಿತು ಇಂದು ಮಾತನಾಡಿರುವ ಕಂದಾಯ ಸಚಿವ ಆರ್ ಅಶೋಕ್, ಬೆಂಗಳೂರಿನಲ್ಲಿ ಕಾರ್ಪೊರೇಷನ್ ಶಾಲೆ, ಸರ್ಕಾರಿಶಾಲೆ ಕೂಡ ತೆರೆಯಬೇಕು. ಎಷ್ಟು ಜನ ಇರಬೇಕು ಅಂತ ಈಗಾಗಲೇ ನಿರ್ಧಾರ ಆಗಿದೆ. ಶಾಲೆಗಳು ಶಿಕ್ಷಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶಾಲೆಯಿಂದ ಕೋವಿಡ್ ಹರಡಬಾರದು. ಈ ಸಂಬಂಧ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ತರಗತಿಯಲ್ಲಿ ಹೆಚ್ಚು ಮಕ್ಕಳು ಇರದಂತೆ, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಕಟ್ಟು ನಿಟ್ಟಿನ ಸೂಚನೆಯನ್ನು ಮತ್ತೊಮ್ಮೆ ನೀಡಿದ್ದಾರೆ.
9 ನೇ ತರಗತಿಗಳು ಹೇಗೆ ನಡೆಯಲಿದೆ ಎಂಬುದನ್ನು ಪರಿಗಣಿಸಿ 7 ಮತ್ತು 8ನೇ ತರಗತಿ ಕೂಡ ನೋಡಿಕೊಂಡು ತೆರೆಯಲಾಗುವುದು ಎಂದಿದ್ದಾರೆ.
ಶಾಲೆಗೆ ಭೇಟಿ ನೀಡುತ್ತೇನೆ- ಸಿಎಂ
ಇನ್ನು ಶಾಲೆ ಆರಂಭದ ಕುರಿತು ಇಂದು ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಲೆ ಆರಂಭಕ್ಕೆ ಸಕಲ ಸಿದ್ದತೆ ನಡೆಸಲಾಗಿದೆ. ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಾಗಬೇಕು ಎಂಬುದು ನಮ್ಮ ಅಪೇಕ್ಷೆ. ಶಾಲೆ ಆರಂಭವಾದ ಬಳಿಕ ನಾನು ಕೂಡ ಕೆಲ ಶಾಲೆಗಳಿಗೆ ಭೇಟಿ ನೀಢಿ ಪರಿಸ್ಥಿತಿ ಅವಲೋಕಿಸುತ್ತೇನೆ ಎಂದರು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ