janadhvani

Kannada Online News Paper

ಮಂಗಳೂರು: ಹಸುಗೂಸು ಮಾರಾಟದ ಜಾಲ ಪತ್ತೆ- ಓರ್ವನ ಬಂಧನ

ಮಂಗಳೂರು ,ಮಾ. 6: ಮಂಗಳೂರಿನಲ್ಲಿ ಹಸುಗೂಸು ಮಾರಾಟದ ಜಾಲ ಪತ್ತೆಯಾಗಿದೆ. ಮಕ್ಕಳಿಲ್ಲದವರಿಗೆ ಮಗುವನ್ನು ಮಾರಾಟ ಮಾಡುವ ಹೈಟೆಕ್ ದಂಧೆ ಇದಾಗಿದ್ದು, ಮಗುವನ್ನು ಮಾರಾಟ ಮಾಡುತ್ತಿದ್ದ ಪಾಪಿ, ಪೊಲೀಸ್ ಬಲೆಗೆ ಬಿದ್ದಿದ್ದಾನೆ.

ತಾಯಿಯ ಹಾಲಿಗಾಗಿ ಅಳುತ್ತಿರುವ ಹಾಲುಗೆನ್ನೆಯ ಪುಟ್ಟ ಕಂದಮ್ಮನನ್ನು ಒಮ್ಮೆ ನೋಡಿದರೆ ಕರುಳು ಕಿತ್ತು ಬಂದಂತಾಗುತ್ತದೆ. ಈ ಮುದ್ದಾದ ಮಗುವನ್ನು ಮಾರಾಟ ಮಾಡಲು ಯತ್ನಿಸಿದ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಮಂಗಳೂರಿನಲ್ಲಿ ಹಸುಗೂಸನ್ನು ಮಾರಾಟ ಮಾಡುತ್ತಿದ್ದ ಹೈಟೆಕ್ ದಂಧೆ ಬಯಲಾಗಿದೆ. ಮೈಸೂರು ಮೂಲದ ಒಡನಾಡಿ ಎಂಬ ಸಂಸ್ಥೆ ಈ ಭಯಾನಕ ಮಾಫಿಯಾದ ಬಗ್ಗೆ ಕಾರ್ಯಾಚರಣೆ ಮಾಡಿದ್ದು, ಮಂಗಳೂರು ಪೊಲೀಸರ ನೆರವಿನಿಂದ ಮಗು ಮಾರಾಟದ ಜಾಲ ಬೆಳಕಿಗೆ ಬಂದಿದೆ. ಸದ್ಯ ಈ 5 ತಿಂಗಳ ಹೆಣ್ಣು ಮಗುವನ್ನು ಮಂಗಳೂರು ಪೊಲೀಸರು ರಕ್ಷಣೆ ಮಾಡಿದ್ದು, ಶುಶ್ರೂಕರ ಆರೈಕೆಯಲ್ಲಿದೆ.

ಮೈಸೂರಿನ ಒಡನಾಡಿ ಎಂಬ ಸ್ವಯಂ ಸೇವಾ ಸಂಸ್ಥೆಗೆ ಹಸುಗೂಸು ಮಾರಾಟ ಜಾಲದ ಬಗ್ಗೆ ಸಣ್ಣ ಮಾಹಿತಿ ಸಿಕ್ಕಿತ್ತು. ಮಂಗಳೂರಿನಲ್ಲಿ ಮಗು ಮಾರಾಟ ಮಾಡುವ ಬಗ್ಗೆಯೂ ಮಾಹಿತಿ ದೊರಕಿತ್ತು. ಈ ಹಿನ್ನಲೆಯಲ್ಲಿ ಆರೋಪಿ ರಾಯನ್ ನ್ನು ಸಂಪರ್ಕಿಸಿದ ಸಂಸ್ಥೆಯ ಸಿಬ್ಬಂದಿ ಉಪಾಯದಿಂದ ರಾಯನ್ ಜೊತೆ ಮಗು ಮಾರಾಟದ ಡೀಲ್ ಬಗ್ಗೆ ಮಾತುಕತೆ ಮಾಡಿದ್ದಾರೆ. ಮಗುವಿನ ವಿವರ, ಹಣ, ಎಲ್ಲದರ ಬಗ್ಗೆಯೂ ವಿಚಾರಿಸಿದ್ದಾರೆ. ಆರೋಪಿ ರಾಯನ್ ಎಲ್ಲಾ ವಿಚಾರಗಳ ಬಗ್ಗೆ ಬಾಯಿಬಿಡುತ್ತಲೇ, ಮಂಗಳೂರು ಪೊಲೀಸರಿಗೆ ಈ ವಿಚಾರ ತಿಳಿಸಿದ್ದಾರೆ‌‌. ಪೊಲೀಸರು ಆರೋಪಿಯ ಬಗ್ಗೆ ತನಿಖೆ ಮಾಡಿ ಬಂಧನ ಮಾಡಿದ್ದಾರೆ. ಈ ವೇಳೆ ಆರೋಪಿ ತಾನು ಈ ಹಿಂದೆ ಎಸಗಿರುವ ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಈ ಹಿಂದೆಯೂ ಹಲವು ಮಕ್ಕಳನ್ನು ಇದೇ ರೀತಿಯಾಗಿ ಮಾರಾಟ ಮಾಡಿರೋದು ಬೆಳಕಿಗೆ ಬಂದಿದೆ. ಅಲ್ಲದೆ, ಮಗುವಿಗೆ ರೇಟ್ ಕೂಡ ಈ ಗ್ಯಾಂಗ್ ಫಿಕ್ಸ್ ಮಾಡಿದೆ. ಹೆಣ್ಣು ಮಗುವಿಗೆ 4 ಲಕ್ಷ, ಗಂಡು ಮಗುವಿಗೆ 6 ಲಕ್ಷ ರೂ. ದರವನ್ನು ಈ ತಂಡ ನಿಗದಿ ಮಾಡಿತ್ತು. ಮೊದಲು ಅಡ್ವಾನ್ಸ್ ಆಗಿ ಒಂದೂವರೆ ಲಕ್ಷ ರೂ. ನೀಡಬೇಕು. ನಂತರದ 15ರಿಂದ 20 ದಿನದೊಳಗೆ ಮಗುವನ್ನು ನೀಡುವ ಪ್ರಕ್ರಿಯೆ ನಡೆಯುತ್ತಿತ್ತು.

ಸದ್ಯ ಮಂಗಳೂರಿನಲ್ಲಿ ಜಾಲವನ್ನು ಭೇದಿಸಿರುವ ಪೊಲೀಸರು ಇದರ ಹಿಂದಿರುವ ಆರೋಪಿಗಳನ್ನು ಹೆಡೆಮುರಿ ಕಟ್ಟುತ್ತಿದ್ದಾರೆ. ಮಂಗಳೂರು ನಗರ ಹೊರವಲಯದ ಮುಲ್ಕಿಯಲ್ಲಿ ಉದ್ಯಮ ನಡೆಸುತ್ತಿರುವ ರಾಯನ್ ಎಂಬಾತ ಈ ದಂಧೆಯಲ್ಲಿ ಶಾಮೀಲಾಗಿದ್ದು, ಮಗು ಮಾರಾಟ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಎಂದು ಹೇಳಲಾಗಿದೆ. ಹಾಸನ ಮೂಲದ ಮಗುವನ್ನು ಕಾರ್ಕಳದ ಕವಿತಾ ಎಂಬುವವರಿಗೆ ಮಾರಾಟ ಮಾಡುತ್ತಿದ್ದಾಗ ಆರೋಪಿ ರಾಯನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕವಿತಾ ಎಂಬಾಕೆಗೆ ಈ ಹಿಂದೆಯೂ ಒಂದು ಮಗುವನ್ನು ನೀಡಿದ್ದು, ಇದು ಎರಡನೇ ಮಗುವಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಕವಿತಾಳನ್ನೂ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಪ್ರಕರಣದ ಬಗ್ಗೆ ಪೊಲೀಸರು ತೀವ್ರ ತನಿಖೆಯನ್ನು ಮುಂದುವರಿಸಿದ್ದು,ಇದರ ಹಿಂದೆ ಅತೀ ದೊಡ್ಡ ಜಾಲವಿರುವ ಶಂಕೆ ವ್ಯಕ್ತವಾಗಿದೆ. ಪ್ರಪಂಚವನ್ನರಿಯದ ಮಗುವನ್ನು ಮಾರಾಟ ಮಾಡಿ ದುಡ್ಡು ಮಾಡುವ ನೀಚ ಮನಸ್ಥಿತಿಯ ಪಾಪಿಗಳ ಬಗ್ಗೆ ಜನರೂ ಜಾಗೃತವಾಗಿರಬೇಕಾಗಿದೆ‌.

error: Content is protected !! Not allowed copy content from janadhvani.com