janadhvani

Kannada Online News Paper

ಕಾರನ್ನು ಕದ್ದು ಮಾರಿದ ಪೋಲೀಸರು: ಮಂಗಳೂರು ಸಿಸಿಬಿ ಪೋಲಿಸರ ವಿರುದ್ಧ ಸಿಐಡಿ ತನಿಖೆ

ಮಂಗಳೂರು:ಸಿಸಿಬಿ ಪೊಲೀಸರ ವಿರುದ್ದವೇ ಸಿ.ಐ.ಡಿ ತನಿಖೆ ಶುರುವಾಗಿದೆ. ವಂಚನೆ ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ದುಬಾರಿ ಕಾರು ಮಾರಾಟ ಡೀಲ್‌ನಲ್ಲಿ ಸಿಸಿಬಿ ಪೊಲೀಸರು ಇರುವುದು ಗೊತ್ತಾಗಿದೆ. ಪ್ರಕರಣದ ಸತ್ಯಾಸತ್ಯತೆ ತಿಳಿಯುವುದಕ್ಕೆ ಸ್ವತ ಡಿ.ಜಿ.ಪಿಯೇ ತನಿಖೆಗೆ ಆದೇಶಿಸಿದ್ದಾರೆ. ಹೌದು ಮಂಗಳೂರು ಸಿಸಿಬಿ ಪೊಲೀಸರ ಮೇಲೆ ಇದೀಗ ಗಂಭೀರ ಆರೋಪವೊಂದು ಕೇಳಿಬಂದಿದೆ. ವಂಚನೆ ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ಮೂರು ಐಶರಾಮಿ ಕಾರುಗಳಲ್ಲಿ ಒಂದು ಕಾರನ್ನು ಸಿ.ಸಿ.ಬಿ ಪೊಲೀಸರೆ ಮಾರಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿಂದಿನ ಪೊಲೀಸ್ ಕಮೀಷನರ್ ಆಗಿದ್ದ ವಿಕಾಸ್ ಕುಮಾರ್ ಅವರ ಅವಧಿಯಲ್ಲಿ ಆ ಸಂದರ್ಭದ ಸಿಸಿಬಿ ಪೊಲೀಸರು ಈ ವಂಚನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಜನರಿಗೆ ಹಣ ದ್ವಿಗುಣ ಮಾಡಿಕೊಡುವ ಆಮಿಷ ಒಡ್ಡಿ 30 ಕೋಟಿ ರೂಪಾಯಿ ವಂಚಿಸಿದ್ದ ಎಲಿಯ ಕನ್ ಸ್ಟ್ರಕ್ಷನ್ ಆ್ಯಂಡ್ ಬಿಲ್ಡರ್ ಪ್ರೈ.ಲಿ ಸಂಸ್ಥೆ ವಿರುದ್ದ ಪಾಂಡೇಶ್ವರದಲ್ಲಿನ ಇಕೊನಾಮಿಕ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂದ ಕೇರಳ ಮೂಲದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅವರಲ್ಲಿದ್ದ ಮೂರು ಐಷರಾಮಿ ಕಾರುಗಳಾದ ಪೋರ್ಸೆ, ಬಿ.ಎಂ.ಡಬ್ಲ್ಯು, ಜ್ಯಾಗ್ವಾರ್ ಕಾರು ವಶಪಡಿಸಿಕೊಳ್ಳಲಾಗಿತ್ತು.

ಆದರೆ, ಇದರಲ್ಲಿ ಜಾಗ್ವಾರ್ ಕಾರನ್ನು ಪೊಲೀಸರೇ ಮಾರಾಟ ಮಾಡಿರುವ ಹಿನ್ನಲೆಯಲ್ಲಿ ಸ್ವತ ಡಿ.ಜಿ.ಪಿ ಪ್ರವೀಣ್ ಸೂದ್ ಅವರೇ ಸಿ.ಐ.ಡಿ ತನಿಖೆಗೆ ಆದೇಶಿಸಿದ್ದಾರೆ.ಮಂಗಳೂರು ಸಿಸಿಬಿ ವಿಭಾಗದಿಂದ ಈಗಾಗಲೇ ವರ್ಗಾವಣೆಗೊಂಡಿರುವ ಅಧಿಕಾರಿಗಳಿಂದ ಈ ವಂಚನೆ ನಡೆದಿದೆ ಎಂದು ಹೇಳಲಾಗಿದೆ. ಸಿಸಿಬಿ ಹಿಂದಿನ ಪಿಎಸ್ಐ ಕಬ್ಬಾಳ್ ರಾಜ್, ಇಕೊನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಇನ್ಸ್ಪೆಕ್ಟರ್ ರಾಮಕೃಷ್ಣ, ಸಿಸಿಬಿ ಸಿಬ್ಬಂದಿ ಆಶೀತ್ ಡಿಸೋಜಾ ಮತ್ತು ರಾಜಾ ವಿರುದ್ಧ ಮಂಗಳೂರು ನೂತನ ಕಮೀಷನರ್ ಶಶಿಕುಮಾರ್ ಆದೇಶದ ಮೇರೆಗೆ ಡಿ.ಸಿ.ಪಿ ವರದಿ ಸಲ್ಲಿಸಿದ್ದಾರೆ.

ಜಾಗ್ವಾರ್ ಕಾರನ್ನು ಪೊಲೀಸರೇ ಮಾರಾಟ ಮಾಡಿಸಿರೋದು ಕಂಡು ಬಂದಿದ್ದು, ಕಾರು ವಶಪಡಿಸಿಕೊಂಡ ದಿನಾಂಕ ಮತ್ತು ಹಾಜರುಪಡಿಸಿದ ದಿನಾಂಕದಲ್ಲಿ ವ್ಯಾತ್ಯಾಸವಿದೆ. ಕೇಂದ್ರ ಕಚೇರಿಯಿಂದ ಡೈರೆಕ್ಷನ್ಸ್ ಬಂದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಮೀಷನರ್ ಹೇಳಿದ್ದಾರೆ.ಸಿ.ಸಿ.ಬಿ ಪೊಲೀಸರ ಮೇಲೆ ಬಂದಿರುವ ಈ ಗಂಭೀರ ಆರೋಪವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಇದ್ದು, ಇದೇ ರೀತಿಯ ಹಲವು ಅಕ್ರಮ ಹಣದ ವ್ಯವಹಾರ ನಡೆದಿರುವ ಬಗ್ಗೆ ಅನುಮಾನವಿದೆ.

ಆರೋಪಿಯೊಂದಿಗೆ ಸಿಸಿಬಿ ಪೋಲೀಸರ ಬಾರ್ ಪಾರ್ಟಿ- ತನಿಖೆಗೆ ಆದೇಶ

ಪೊಲೀಸ್ ಪ್ರಮುಖರ ಹೆಸರೇ ಈ ಪ್ರಕರಣದಲ್ಲಿ ತಗಲ್ಲಾಕಿಕೊಂಡಿರೋದ್ರಿಂದ ಜನಸಾಮಾನ್ಯರು ವ್ಯವಸ್ಥೆ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಜನ ಸಾಮಾನ್ಯನ ಗತಿ ಏನು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಪೊಲೀಸರ ಡೀಲ್ ಗ್ಯಾಂಗ್ ಮತ್ತಷ್ಟು ಜನರನ್ನು ಬೆದರಿಸಿ ಹಣ ದೋಚಿರುವ ಬಗ್ಗೆಯೂ ಪೊಲೀಸ್ ಇಲಾಖೆಗೇ ಅನುಮಾನ ಇದೆ.ಈ ಹಿನ್ನಲೆಯಲ್ಲಿ ಸಾರ್ವಜನಿಕರ ದೂರು ಲಭಿಸಿದರೆ ತನಿಖೆಯನ್ನು ಮತ್ತಷ್ಟು ಬಿಗಿಗೊಳಿಸುವ ಸಾಧ್ಯತೆಗಳಿವೆ.

error: Content is protected !! Not allowed copy content from janadhvani.com