janadhvani

Kannada Online News Paper

ಕೊರೋನಾ ನೆಗೆಟೀವ್ ವರದಿಗಳಿಲ್ಲದ ಕೇರಳಿಗರಿಗೆ ಪ್ರವೇಶವಿಲ್ಲ

ಬೆಂಗಳೂರು: ಕೊರೋನಾ ಪ್ರಕರಣಗಳು ಹೆಚ್ಚಳವಾಗದಂತೆ ಎಚ್ಚರಿಕೆ ವಹಿಸುತ್ತಿರುವ ಬಿಬಿಎಂಪಿ ಕೇರಳದಿಂದ ನಗರಕ್ಕೆ ಬರುವವರಿಗೆ ಕೋವಿಡ್-19 ನೆಗೆಟೀವ್ ವರದಿಯನ್ನು ಕಡ್ಡಾಯಗೊಳಿಸಿದೆ.

ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಈ ಬಗ್ಗೆ ಮಾಹಿತಿ ನೀಡಿದ್ದು ಕೋವಿಡ್-19 ನೆಗೆಟೀವ್ ವರದಿ ಇಲ್ಲದೇ ಬೆಂಗಳೂರಿಗೆ ಬರುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದೇ ವೇಳೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಬಿಬಿಎಂಪಿ ಮಾರ್ಷಲ್ ಗಳಿಗೆ ಸೂಚನೆ ನೀಡಲಾಗಿದ್ದು ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ ಗಳೊಂದಿಗೆ ನಿಕಟವಾಗಿ ಕೆಲಸ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇದೇ ವೇಳೆ ಕೋವಿಡ್-19 ಪ್ರಕರಣಗಳ ಮೇಲೆ ವಿಶೇಷವಾಗಿ ಗಮನ ಹರಿಸಿ, ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ತಿಳಿಸುವುದಕ್ಕೆ ಆರ್ ಡಬ್ಲ್ಯುಎ ಗಳಿಗೆ ಸೂಚನೆ ನೀಡಲಾಗಿದೆ.

ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಹಾಗೂ ವಿಶೇಷ ಆಯುಕ್ತರ ಜೊತೆ ಸಭೆ ಬಳಿಕ ಆಯುಕ್ತರು ಮಾಧ್ಯಮಗಳಿಗೆ ಈ ಮಾಹಿತಿ ನೀಡಿದ್ದಾರೆ. ಮಂಜುಶ್ರೀ ಕಾಲೇಜಿನ 40 ವಿದ್ಯಾರ್ಥಿಗಳು, ಬೊಮ್ಮನಹಳ್ಳಿ ಝೋನ್ ನ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ನಲ್ಲಿ 56 ಮಂದಿಗೆ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ.

error: Content is protected !! Not allowed copy content from janadhvani.com