janadhvani

Kannada Online News Paper

ದೇಶಾದ್ಯಂತ ಕೋವಿಡ್ ಲಸಿಕೆ ವಿತರಣೆ: ಒಂದೇ ದಿನದಲ್ಲಿ 6 ಮಂದಿ ಸಾವು

ನವದೆಹಲಿ: ದೇಶಾದ್ಯಂತ ಕೋವಿಡ್ ಲಸಿಕಾ ವಿತರಣೆ ಮುಂದುವರೆದಿದ್ದು. ಕಳೆದ 24 ಗಂಟೆಗಳಲ್ಲಿ ಲಸಿಕೆ ಪಡೆದಿದ್ದ 6 ಮಂದಿ ಸಾವಿಗೀಡಾಗಿದ್ದು, ಸಾವಿಗೂ ಲಸಿಕೆಗೂ ಸಂಬಂಧವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನಾನಿ ಅವರು, ದೇಶಾದ್ಯಂತ ಕೋವಿಡ್ ಲಸಿಕೆ ವಿತರಣೆ ಮುಂದುವರೆದಿದೆ. ಜನವರಿ 23 ರ ಸಂಜೆ 6 ಗಂಟೆಯವರೆಗೂ ದೇಶಾದ್ಯಂತ 27,776 ಕೋವಿಡ್ ವಿತರಣಾ ಸೆಷನ್ ಗಳಲ್ಲಿ 15,37,190 ಮಂದಿಗೆ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ.

ಒಟ್ಟು 12 ರಾಜ್ಯಗಳಲ್ಲಿ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ 5 ಹೊಸ ರಾಜ್ಯಗಳಲ್ಲಿಯೂ ಕೋವ್ಯಾಕ್ಸಿನ್ ಲಸಿಕೆ ವಿತರಣೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಮೂಲಗಳ ಪ್ರಕಾರ ಛತ್ತೀಸ್‌ಗಢ, ಗುಜರಾತ್, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನು ಮುಂದಿನ ವಾರದಿಂದ ವಿತರಣೆ ಮಾಡುವುದಾಗಿ ಮನೋಹರ್ ಅಗ್ನಾನಿ ಮಾಹಿತಿ ನೀಡಿದ್ದಾರೆ.

ಇನ್ನು ದೇಶದಲ್ಲಿ ಕೋವಿಡ್ ಲಸಿಕೆ ಪಡೆದಿದ್ದವರ ಸಾವಿನ ಸರಣಿ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಲಸಿಕೆ ಪಡೆದಿದ್ದವರ ಪೈಕಿ 6 ಮಂದಿ ಸಾವನ್ನಪ್ಪಿದ್ದಾರೆ. ಗುರುಗ್ರಾಮದಲ್ಲಿ ಕೋವಿಡ್ ಲಸಿಕೆ ಪಡೆದಿದ್ದ 56 ವರ್ಷದ ಮಹಿಳೆ ಸಾವನ್ನಪ್ಪಿದ್ದರು. ಆದರೆ ಅವರ ಸಾವಿಗೂ ಲಸಿಕೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಅಂತೆಯೇ ಈ ವರೆಗೂ ಕೋವಿಡ್ ಲಸಿಕೆ ಪಡೆದವರ ಪೈಕಿ 11 ಮಂದಿ ವಿವಿಧ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ಕಳೆದ 24 ಗಂಟೆಗಳ ಅವಧಿಯಲ್ಲಿ ಓರ್ವ ಆರೋಗ್ಯ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಕೋವಿಡ್ ಲಸಿಕೆ ಪಡೆದಿದ್ದ ಆರೋಗ್ಯ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ.

error: Content is protected !! Not allowed copy content from janadhvani.com