janadhvani

Kannada Online News Paper

ಕೊರೋನಾ ನಡುವಲ್ಲೇ ಹಕ್ಕಿಜ್ವರ ಭೀತಿ- ಕೇರಳ ಗಡಿಗಳಲ್ಲಿ ಕಟ್ಟೆಚ್ಚರ

ಬೆಂಗಳೂರು: ಕೊರೋನಾ, ರೂಪಾಂತರಿ ಕೊರೋನಾ ಆತಂಕದ ನಡುವಲ್ಲೇ ಇದೀಗ ಹಕ್ಕಿಜ್ವರ ಭೀತಿ ಶುರುವಾಗಿದೆ. ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದು ಖಚಿತಗೊಂಡ ಹಿನ್ನೆಲೆಯಲ್ಲಿ ಇದೀಗ ರಾಜ್ಯದ ಗಡಿ ಜಿಲ್ಲಗಳಲ್ಲಿ ಕಟ್ಟೆಚ್ಚರ ಘೋಷಣೆ ಮಾಡಲಾಗಿದೆ.

ಪಶುಸಂಗೋಪನಾ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸಹಭಾಗಿತ್ವದಲ್ಲಿ ದಕ್ಷಿಣ ಕನ್ನಡ, ಚಾಮರಾಜನಗರ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ಡಿಗಳಲ್ಲಿ ಚೆಕ್ ಪೋಸ್ಟ್’ಗಳನ್ನು ಪ್ರಾರಂಭಿಸಲಾಗಿದ್ದು, ಗಡಿ ದಾಟುವ ಎಲ್ಲಾ ವಾಹನಗಳ ಜಂಟಿ ತಪಾಸಣೆ ನಡೆಸಲಾಗುತ್ತಿದೆ.

ಕೋಳಿ ಮತ್ತು ಕೋಳಿ ಉತ್ಪನ್ನಗಳು ರಾಜ್ಯಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲಿ ಪರಿಶೀಲಿಸಲಾಗುತ್ತಿದೆ. ವಾಹನಗಳಿಗೆ ಸ್ಯಾನಿಟೈಸ್ ಮಾಡಿ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಪಕ್ಷಿಗಳ ಸಂತಾನೋತ್ಪತ್ತಿ ಸಮಯವಾಗಿದ್ದು, ವಿವಿಧ ದೇಶಗಳಿಂದ ಸಾವಿರಾರು ಹಕ್ಕಿಗಳು ರಾಜ್ಯಕ್ಕೆ ವಲಸೆ ಬರುತ್ತಿದೆ. ಇವುಗಳಿಂದ ಸೋಂಕು ಶೀಘ್ರದಲ್ಲಿ ಹರಡುವ ಸಾಧ್ಯತೆಯಿದೆ. ಆದ್ದರಿಂದ ಯಾವುದೇ ಜಿಲ್ಲೆಯಲ್ಲಿ ಪಕ್ಷಿಗಳು ಸಾವನ್ನಪ್ಪಿದ್ದರೆ, ಕೂಡಲೇ ಈ ಮಾಹಿತಿಯನ್ನು ಇಲಾಖೆಯ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿರುವುದಾಗಿ ಅವರು ಹೇಳಿದ್ದಾರೆ.

ವನ್ಯಜೀವಿ ವಿಭಾಗದ ಪಿಸಿಸಿಎಫ್ ಅಜಯ್ ಮಿಶ್ರಾ ಅವರು ಮಾತನಾಡಿ, ರಾಜ್ಯದಲ್ಲಿ ಈ ವರೆಗೂ ಇಂತಹ ಯಾವುದೇ ಪ್ರಕರಣಗಳೂ ವರದಿಯಾಗಿಲ್ಲ. ವಲಸೆ ಹಕ್ಕಿಗಳ ತಾಣಗಳ ಮೇಲೆ ಈಗಾಗಲೇ ಅಧಿಕಾರಿಗಳು ಕಣ್ಗಾವಲಿರಿಸಿದ್ದಾರೆ. ಹಕ್ಕಿ ಜ್ವರ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದಿಂದ ಮಾರ್ಗಸೂಚಿಗಳು ಬಂದಿದ್ದು, ಯಾವುದೇ ಘಟನೆ ಬೆಳಕಿಗೆ ಬಂದ ಕೂಡಲೇ ಕೇಂದ್ರಕ್ಕೆ ಮಾಹಿತಿ ನೀಡಲಾಗುತ್ತದ ಎಂದು ತಿಳಿಸಿದ್ದಾರೆ.

ಈಗಾಗಲೇ ಗದಗ, ಬೀದರ್, ಆಲಮಟ್ಟಿ, ರಂಗನತಿಟ್ಟು, ಕೊಕ್ಕರೆಬೆಳ್ಳೂರು, ಮಾಗಡಿ, ಬಳ್ಳಾರಿ ಸೇರಿದಂತೆ ಹಲವೆಡೆ ಪಕ್ಷಿಗಳು ವಲಸೆ ಬಂದಿರುವುದು ಕಂಡು ಬರುತ್ತಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಕೇಂದ್ರಕ್ಕೆ ಮಾಹಿತಿ ನೀಡಿ, ನಿಯಮಗಳಂತೆ ಪರಿಸ್ಥಿತಿ ನಿರ್ವಹಣೆ ಮಾಲಾಗುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕ ಫೌಲ್ಟ್ರಿ ಫಾರ್ಮರ್ಸ್‌‌ ಆ್ಯಂಡ್‌ ಬ್ರೀಡರ್ಸ್‌ ಅಸೋಸಿಯೇಶನ್ ಅಧ್ಯಕ್ಷ ಸುಶಾಂತ್ ರೈ ಬಿ ಅವರು, ಕೇರಳದ ಕೇರಳದ ಬಾತುಕೋಳಿಗಳು ಮತ್ತು ಮಹಾರಾಷ್ಟ್ರದ ಕಾಗೆಗಳ ಮೇಲೆ ಎಚ್ 5 ಎನ್ 1 ಗಂಭೀರ ಪರಿಣಾಮ ಬೀರಿದೆ. ಕರ್ನಾಟಕದಲ್ಲಿ ಈವರೆಗೂ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಈಗಾಗಲೇ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

error: Content is protected !! Not allowed copy content from janadhvani.com