janadhvani

Kannada Online News Paper

ದೇಶದಲ್ಲಿ ಹರಡುತ್ತಿದೆ ಮತ್ತೊಂದು ಮಾರಣಾಂತಿಕ ಸೋಂಕು- 9 ಮಂದಿ ಮರಣ

ಈ ಕುರಿತು ಮಾತನಾಡಿರುವ ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಇಎನ್ಟಿ ಮುಖ್ಯಸ್ಥ ಡಾ. ಬೇಲಾ ಪ್ರಜಪ್ಕಿ, “ಈವರೆಗೆ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲೂ ರೋಗಿಗಳು 50 ವರ್ಷ ದಾಟಿದ ಮತ್ತು ಮಧುಮೇಹ ಖಾಯಿಲೆ ಹೊಂದಿದ್ದವರೇ ಆಗಿದ್ದಾರೆ. ಈ ಸೋಂಕು ತುಂಬಾ ಅಪಾಯಕಾರಿ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದೇ ಇದ್ದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ: ದೇಶದಲ್ಲಿ ಮತ್ತೊಂದು ಮಾರಣಾಂತಿಕ ಖಾಯಿಲೆ ಹರಡುತ್ತಿದ್ದು ಇದರ ತೀವ್ರತೆಗೆ ಸರ್ಕಾರ ಹಾಗೂ ಅಧಿಕಾರಿ ವರ್ಗ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮ್ಯೂಕಾರ್ಮೈಕೋಸಿಸ್ ಎಂಬ ಅಪರೂಪದ ಈ ಮಾರಕ ಶಿಲೀಂಧ್ರ ರೋಗವು ಭಾರತದಾದ್ಯಂತ ಜನರ ಮೆಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ದೆಹಲಿ ಮತ್ತು ಮುಂಬೈನ ಕೆಲವು ಆಸ್ಪತ್ರೆಗಳಲ್ಲಿ ಈ ಮಾದರಿಯ ಸೋಂಕು ತಗುಲಿದ ವ್ಯಕ್ತಿಗಳು ದಾಖಲಾಗಿರುವ ಕುರಿತು ಈಗಾಗಲೇ ವರದಿಯಾಗಿದೆ. ಇನ್ನೂ ಗುಜರಾತ್‌ ರಾಜ್ಯದ ಅಹಮದಾಬಾದ್‌ನಲ್ಲಿ ಕನಿಷ್ಠ 44 ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ದಾಖಲಾಗಿವೆ, ಅದರಲ್ಲಿ ಒಂಬತ್ತು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮ್ಯೂಕೋರ್ಮೈಕೋಸಿಸ್ ಎಂದರೇನು?

ಮ್ಯೂಕೋರ್ಮೈಕೋಸಿಸ್ (ಹಿಂದೆ ಸೈಗೋಮೈಕೋಸಿಸ್ ಎಂದು ಕರೆಯಲಾಗುತ್ತಿತ್ತು) ಎನ್ನುವುದು ಮ್ಯೂಕೋರ್ಮೈಸೆಟ್ಸ್ ಎಂಬ ಅಚ್ಚುಗಳ ಗುಂಪಿನಿಂದ ಉಂಟಾಗುವ ಗಂಭೀರ ಆದರೆ ಅಪರೂಪದ ಶಿಲೀಂಧ್ರ ಸೋಂಕು. ಈ ತೆರನಾದ ಶಿಲೀಂದ್ರಗಳು ಪರಿಸರದಲ್ಲೇ ಇರುತ್ತವೆ. ಈ ಸೋಂಕು ಸಾಮಾನ್ಯವಾಗಿ ಮೂಗಿನಿಂದ ಪ್ರಾರಂಭವಾಗಿ ಕಣ್ಣುಗಳಿಗೆ ಹರಡುತ್ತದೆ. ಈ ಸೋಂಕು ತಗುಲಿರುವುದು ಮೊದಲೇ ತಿಳಿದರೆ ರೋಗಿಯನ್ನು ಚಿಕಿತ್ಸೆ ನೀಡುವ ಮೂಲಕ ಕಾಪಾಡಬಹುದು. ಒಂದು ವೇಳೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಜೀವಕ್ಕೆ ಮಾರಕವಾಗಿ ಪರಿಣಮಿಸುತ್ತದೆ.

ಸೋಂಕಿಗೆ ಒಳಗಾದವರ ತಲೆಯ ಸ್ಕ್ಯಾನ್ ಚಿತ್ರ.

ಸೋಂಕು ಹರಡುತ್ತಿದ್ದಂತೆ ಕಣ್ಣಿನ ಭಾಗದ ಸ್ನಾಯುಗಳ ಸೆಳೆತ ಉಂಟಾಗುತ್ತದೆ. ಈ ವೇಳೆ ಸೋಂಕು ಪೀಡಿತ ವ್ಯಕ್ತಿ ಪಾರ್ಶ್ವವಾಯುವಿಗೂ ಒಳಗಾಗುವ ಸಾಧ್ಯತೆ ಇರುತ್ತದೆ. ನಂತರ ಇದು ಶಾಶ್ವತ ಕುರುಡುತನಕ್ಕೂ ಕಾರಣವಾಗಬಹುದು. ಅಕಸ್ಮಾತ್ ಈ ಶಿಲೀಂದ್ರಗಳ ಸೋಂಕು ಮೆದುಳಿಗೆ ಹರಡಿದರೆ ರೋಗಿಯು ಮೆನಿಂಜೈಟಿಸ್ ಹಂತಕ್ಕೆ ತಲುಪಬಹುದು.

ಯಾರಿಗೆ ಅಪಾಯಕಾರಿ?

ಮ್ಯೂಕಾರ್ಮೈಕೋಸಿಸ್ ಮುಖ್ಯವಾಗಿ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಅನಾರೋಗ್ಯ ಪೀಡಿತ ವ್ಯಕ್ತಿಗಳಲ್ಲಿ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮತ್ತು ಆರೋಗ್ಯ ಸಮಸ್ಯೆಯಿಂದಾಗಿ ನಿರಂತರ ಹೆಚ್ಚು ಔಷಧಿಗಳನ್ನು ಸೇವಿಸುವವರ ಮೇಲೆ ಪರಿಣಾಮ ಬೀರುತ್ತದೆ. ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಜನರನ್ನು ಹೆಚ್ಚಿನ ಅಪಾಯಕ್ಕೆ ದೂಡುತ್ತದೆ.

ಮಧುಮೇಹ ಸಂಬಂಧಿತ ಅನಾರೋಗ್ಯ ಸಮಸ್ಯೆಗಳಿರುವ ಜನರನ್ನೂ ಸಹ ಈ ಸೋಂಕು ಅಪಾಯಕ್ಕೆ ದೂಡುವ ಸಾಧ್ಯತೆ ಇದೆ. ಅಹಮದಾಬಾದ್‌ನಲ್ಲಿ ಮ್ಯೂಕೋರ್ಮೈಕೋಸಿಸ್ ಸೋಂಕಿಗೆ ತುತ್ತಾಗಿ ಸಿವಿಲ್ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಮಧುಮೇಹ ಇರುವುದು ಪತ್ತೆಯಾಗಿದೆ. ಒಂದು ವೇಳೆ ನಿಮ್ಮ ದೃಷ್ಟಿ ಮಂದವಾಗಿದ್ದರೆ, ಮೂಗು ಮತ್ತು ತಲೆ ನೋವು ಕಾಣಿಸಿಕೊಳ್ಳುತ್ತಿದ್ದರೆ, ನೀವು ತಕ್ಷಣ ವೈದ್ಯರ ಬಳಿ ತೆರಳುವುದು ಸೂಕ್ತ.

ಎಷ್ಟು ಪ್ರಕರಣಗಳು ವರದಿಯಾಗಿವೆ?

ಎರಡು ದಿನಗಳ ಹಿಂದೆ ದೆಹಲಿಯ ಸರ್ ಗಂಗಾರಾಂ ಆಸ್ಪತ್ರೆಯಲ್ಲಿ 12 ಪ್ರಕರಣಗಳು ವರದಿಯಾಗಿವೆ. ಮುಂಬಯಿಯಲ್ಲೂ ಪ್ರಕರಣಗಳು ವರದಿಯಾಗಿವೆ. ಮ್ಯೂಕೋರ್ಮೈಕೋಸಿಸ್ ಸೋಂಕಿನ ಕಾರಣದಿಂದಾಗಿ ಈವರೆಗೆ ಒಟ್ಟು ಒಂಬತ್ತು ಜನ ಮೃತಪಟ್ಟಿದ್ದಾರೆ, ಅಹಮದಾಬಾದ್ನ ಸಿವಿಲ್ ಆಸ್ಪತ್ರೆಯಲ್ಲಿ 44 ಪ್ರಕರಣಗಳು ಈವರೆಗೆ ದಾಖಲಾಗಿವೆ.

ಈ ಕುರಿತು ಮಾತನಾಡಿರುವ ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಇಎನ್ಟಿ ಮುಖ್ಯಸ್ಥ ಡಾ. ಬೇಲಾ ಪ್ರಜಪ್ಕಿ, “ಈವರೆಗೆ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲೂ ರೋಗಿಗಳು 50 ವರ್ಷ ದಾಟಿದ ಮತ್ತು ಮಧುಮೇಹ ಖಾಯಿಲೆ ಹೊಂದಿದ್ದವರೇ ಆಗಿದ್ದಾರೆ. ಈ ಸೋಂಕು ತುಂಬಾ ಅಪಾಯಕಾರಿ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದೇ ಇದ್ದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಕೂಡ ಇತ್ತೀಚೆಗೆ ಈ ರೋಗದ ಬಗ್ಗೆ ಟ್ವೀಟ್ ಮಾಡಿದ್ದು, ಜನರು ಎಚ್ಚರವಾಗಿರಲು ವಿನಂತಿಸಿದ್ದಾರೆ.

ಮುಂಜಾಗ್ರತೆ ಹೇಗೆ?

ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ಸಾರ್ವಜನಿಕ ಸ್ಥಳಗಳಲ್ಲಿ ಮರೆಯದೆ ನಿಮ್ಮ ಮುಖವಾಡವನ್ನು ಧರಿಸಿ ಮತ್ತು ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯಿರಿ. ನಿಮ್ಮ ಕಣ್ಣು ಮತ್ತು ಮೂಗು ಮುಟ್ಟುವುದನ್ನು ತಪ್ಪಿಸಿ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ.

ನಿಮ್ಮ ಮೂಗು, ಕಣ್ಣು ಅಥವಾ ಗಂಟಲಿನಲ್ಲಿನಲ್ಲಿ ನೋವು ಕಾಣಿಸಿಕೊಂಡರೆ ಕೂಡಲೇ ವೈದ್ಯರ ಸಲಹೆ ಪಡೆಯಿರಿ ಏಕೆಂದರೆ ಇದು ಮ್ಯೂಕೋರ್ಮೈಕೋಸಿಸ್ ಸೋಂಕು ಹರಡುವ ಆರಂಭಿಕ ಹಂತವಾಗಿರುವ ಸಾಧ್ಯತೆ ಇರುತ್ತದೆ

error: Content is protected !! Not allowed copy content from janadhvani.com