janadhvani

Kannada Online News Paper

ಕೈಪಾಳಯಕ್ಕೆ ಸಿ.ಎಂ. ಇಬ್ರಾಹಿಂ ಗುಡ್ ಬೈ..?- ಕುತೂಹಲ ಮೂಡಿಸಿದ ಡಿಕೆಶಿ ಭೇಟಿ

ಬೆಂಗಳೂರು,ಡಿ. 13: ಕಾಂಗ್ರೆಸ್ ಪಕ್ಷದಲ್ಲಿ ನೀರಿನಿಂದ ಹೊರಬಂದ ಮೀನಿನಂತೆ ಒದ್ದಾಡುತ್ತಿರುವ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಕೈಪಾಳಯ ತೊರೆಯುವ ಮನಸ್ಸಿನಲ್ಲಿದ್ದಾರೆ ಎಂಬ ಗುಸು ಗುಸು ಸುದ್ದಿ ಅವರ ಆಪ್ತ ವಲಯದಿಂದಲೇ ಕೇಳಿಬರುತ್ತಿದೆ. ಇದಕ್ಕೆ ಇಂಬುಕೊಡುವಂತೆ ಮೊನ್ನೆ ಹೆಚ್.ಡಿ. ಕುಮಾರಸ್ವಾಮಿ ಅವರು ಇಬ್ರಾಹಿಂ ನಿವಾಸಕ್ಕೆ ತೆರಳಿ ಭೇಟಿಯಾಗಿ ಬಂದಿದ್ದಾರೆ. ಈ ಬೆಳವಣಿಗೆ ನಂತರ ಇಬ್ರಾಹಿಂ ಅವರು ಜೆಡಿಎಸ್ ಸೇರುವ ಸಾಧ್ಯತೆ ಇದೆ ಎಂಬ ವದಂತಿಗಳು ಹಬ್ಬಿವೆ.

ಈ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಬ್ರಾಹಿಂ ಅವರನ್ನ ಇಂದು ಭೇಟಿಯಾದರು. ಮೂಲಗಳ ಪ್ರಕಾರ, ಇಬ್ರಾಹಿಂ ಅವರ ಅಸಮಾಧಾನ ಆಲಿಸಲು ಮತ್ತು ಕಾಂಗ್ರೆಸ್ ತೊರೆಯದಂತೆ ಮನವೊಲಿಸಲು ಡಿಕೆಶಿ ಪ್ರಯತ್ನಿಸಿದರೆನ್ನಲಾಗಿದೆ. ಆದರೆ, ಇಬ್ರಾಹಿಂ ಕಡೆಯಿಂದ ಯಾವುದೇ ನಿರ್ದಿಷ್ಟ ಮಾತುಗಳು ಬರಲಿಲ್ಲ.

ಸಿ.ಎಂ.ಇಬ್ರಾಹಿಂ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾಗಿದ್ದರು. ಆದರೆ, ಇತ್ತೀಚೆಗೆ ಕೆಲವು ಬೆಳವಣಿಗೆಗಳಿಂದ ಇಬ್ರಾಹಿಂ ಅಸಮಾಧಾನಗೊಂಡು ತಟಸ್ಥ ನಿಲುವು ಅನುಸರಿಸಲು ಮುಂದಾಗಿದ್ದರು.

ಬೆನ್ಸನ್ ಟೌನ್​ನಲ್ಲಿರುವ ನಿವಾಸಕ್ಕೆ ಬಂದು ಭೇಟಿಯಾದ ಕುಮಾರಸ್ವಾಮಿ ಅವರ ಬಳಿ ಸಿ.ಎಂ. ಇಬ್ರಾಹಿಂ ಅವರನ್ನು ತಮ್ಮ ಅಸಮಾಧಾನವನ್ನು ತೋಡಿಕೊಂಡರೆಂಬ ಸುದ್ದಿಗಳಿವೆ. ಸಿದ್ದರಾಮಯ್ಯ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರ ವರ್ತನೆ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸಿದ್ದರಾಮಯ್ಯ ಈ ಹಿಂದಿನಂತಿಲ್ಲ, ಬದಲಾಗಿದ್ದಾರೆ ಎಂದೂ ಅವರು ಹೇಳಿಕೊಂಡಿದ್ದಾರೆ. ಈ ವೇಳೆ ಕುಮಾರಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ಇಬ್ರಾಹಿಂಗೆ ಆಫರ್ ಮಾಡಿದರೆಂಬ ಮಾಹಿತಿ ಇದೆ. ಆದರೆ, ಇಬ್ರಾಹಿಂ ಎಲ್ಲಿಯೂ ಈ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಅಧಿಕೃತವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ.

ಕಾಂಗ್ರೆಸ್‍ನಲ್ಲಿ ವಿಧಾನಪರಿಷತ್ ಸದಸ್ಯರಾಗಿರುವ ಇಬ್ರಾಹಿಂ ತಾವು ಪಕ್ಷ ಬಿಡುವುದಿಲ್ಲ ಎಂದು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ. ಆದರೂ ಕುಮಾರಸ್ವಾಮಿ ಭೇಟಿಯ ಬಳಿಕ ಕೆಲ ಬೆಳವಣಿಗೆಗಳಾಗಿದ್ದವು, ಅವು ವ್ಯಾಪಕ ಚರ್ಚೆಗೂ ಕಾರಣವಾಗಿದ್ದವು.

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಇಬ್ರಾಹಿಂ ಅವರನ್ನು ಸಮಾಧಾನಪಡಿಸಲು ಮುಂದಾಗಿದೆ. ಇಂದು ಬೆಳಗ್ಗೆ ಡಿ.ಕೆ.ಶಿವಕುಮಾರ್ ಅವರು ಇಬ್ರಾಹಿಂ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದಾರೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ, ಗೌರವ ದೊರಕಿಸುವ ಭರವಸೆ ನೀಡಿದ್ದಾರೆ.

ನಿಮ್ಮಂತಹ ಹಿರಿಯರನ್ನು ಕಾಂಗ್ರೆಸ್ ಗೌರವದಿಂದ ನಡೆಸುಕೊಳ್ಳುತ್ತದೆ. ದುಡುಕಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ಈ ಭೇಟಿಯ ಬಗ್ಗೆ ಮಾಹಿತಿ ನೀಡಿರುವ ಅಧಿಕೃತ ಮೂಲಗಳು ಇದು ಸೌಜನ್ಯದ ಭೇಟಿಯಷ್ಟೇ. ಯಾವುದೇ ರಾಜಕೀಯ ಉದ್ದೇಶವಿಲ್ಲ. ಸಿ.ಎಂ.ಇಬ್ರಾಹಿಂ ಅವರು ಪಕ್ಷ ಬಿಡುವ ಆಲೋಚನೆ ಮಾಡಿಲ್ಲ ಎಂದು ಹೇಳಿದೆ.

error: Content is protected !! Not allowed copy content from janadhvani.com