janadhvani

Kannada Online News Paper

ಕರ್ನಾಟಕ ಬಂದ್: ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ- ದ.ಕ.ಮಾಮೂಲಿ

ವಿಜಯಪುರ, ಕಲಬುರ್ಗಿ, ದಕ್ಷಿಣಕನ್ನಡ, ಮೈಸೂರು, ಹುಬ್ಬಳ್ಳಿ, ಬಾಗಲಕೋಟೆ ಮೊದಲಾದ ಜಿಲ್ಲೆಗಳಲ್ಲಿ ಇಂದು ಬೆಳಗ್ಗೆ ಬಂದ್ ಬಿಸಿ ಕಾಣಲಿಲ್ಲ. ಇಲ್ಲಿ ಮಾಮೂಲಿಯ ಜನಜೀವನ ಇದೆ

ಬೆಂಗಳೂರು,ಡಿ. 05: ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ (ಡಿಸೆಂಬರ್‌ 5)ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಕರ್ನಾಟಕ ಗಡಿ ಭಾಗದಲ್ಲಿ ಎಂಇಎಸ್‌ ಪುಂಡರು ಕನ್ನಡಿಗರನ್ನು ಪದೇ ಪದೇ ಕೆದಕುತ್ತಿರುವ ಬೆನ್ನಿನಲ್ಲೇ ಸರಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರೋದು ಕನ್ನಡಪರ ಸಂಘಟನೆಗಳಿಗೆ ಮತ್ತಷ್ಟು ಕೋಪ ನೆತ್ತಿಗೇರುವಂತೆ ಮಾಡಿದೆ.

ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಲೇಬೇಕು, ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಅನೇಕ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆನೀಡಿವೆ. ಅಲ್ಲದೇ ರಾಜ್ಯದ ವಿವಿಧೆಡೆ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಸಿದೆ.

ಕರ್ನಾಟಕ ಬಂದ್ಗೆ ಇಂದು ಬೆಳಗಿನ ಜಾವದ ಅವಧಿಯಲ್ಲಿ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗದಿದ್ದರೂ ಕನ್ನಡಪರ ಸಂಘಟನೆಗಳ ಪ್ರತಿಭಟನೆಗಳು ಬಹಳ ಕಡೆ ನಡೆದಿವೆ.

ಹಾಸನ, ಚಿಕ್ಕಮಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಾತ್ರ ಪ್ರತಿಭಟನಾಕಾರರು ಅಂಗಡಿ ಮುಂಗಟ್ಟುಗಳನ್ನ ಬಲವಂತವಾಗಿ ಮುಚ್ಚಿಸಿರುವುದು ಬಿಟ್ಟರೆ ಅನಿವಾರ್ಯತೆಗಳಾದ ಮಾರುಕಟ್ಟೆ ಇತ್ಯಾದಿಗಳು ಬಹುತೇಕ ಕಡೆ ತೆರೆದಿವೆ. ಅದು ಬಿಟ್ಟರೆ ಹಲವು ಜಿಲ್ಲೆಗಳಲ್ಲಿ ರಸ್ತೆಯಲ್ಲಿ ಜನ ಸಂಚಾರ ಕಡಿಮೆಯೇ ಇದೆ.

ಬಸ್ಸು, ಆಟೋಗಳು ಎಂದಿನಂತೆ ಸಂಚರಿಸುತ್ತಿದ್ದರೂ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇದೆ. ರಾಜ್ಯಾದ್ಯಂತ ಅಲ್ಲಲ್ಲಿ ಪ್ರತಿಭಟನಾಕಾರರು ಬೀದಿಗಿಳಿದು ಟೈರ್ಗೆ ಬೆಂಕಿ ಹಚ್ಚಿದ್ದಾರೆ. ಹೆದ್ದಾರಿ ತಡೆ ಮಾಡಿದ್ದಾರೆ. ಉರುಳು ಸೇವೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಗದಗ್ನಲ್ಲಂತೂ ಪ್ರತಿಭಟನಾಕಾರರು ಬಾಯಿ ಬಡಿದುಕೊಂಡು ಪ್ರತಿಭಟಿಸಿದ್ದಾರೆ. ಕೆಲವೆಡೆ ಸಿಎಂ, ಯತ್ನಾಳರ ಭಾವಚಿತ್ರಗಳಿಗೆ ಚಪ್ಪಲಿ ಏಟು ಕೊಟ್ಟಿದ್ದಾರೆ. ಒಟ್ಟಾರೆಯಾಗಿ ಕರ್ನಾಟಕ ಇಂದು ಬೆಳಗ್ಗೆ ಕರ್ನಾಟಕ ಬಂದ್ಗೆ ಓಗೊಟ್ಟು ಅರ್ಧಸ್ತಬ್ಧವಾಗಿದೆ.

ಚಿಕ್ಕಮಗಳೂರು, ಗದಗ, ಹಾವೇರಿ, ಕೊಪ್ಪಳ, ಆನೇಕಲ್, ಬೆಂಗಳೂರು ಗ್ರಾಮಾಂತರ ಮೊದಲಾದ ಕೆಲ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಬಂದ್ ವಾತಾವರಣ ನೆಲಸಿದೆ. ಇಲ್ಲಿ ಪ್ರತಿಭಟನೆಗಳ ಬಿಸಿ ತಾಕಿದೆ. ವಿಜಯಪುರ, ಕಲಬುರ್ಗಿ, ದಕ್ಷಿಣಕನ್ನಡ, ಮೈಸೂರು, ಹುಬ್ಬಳ್ಳಿ, ಬಾಗಲಕೋಟೆ ಮೊದಲಾದ ಜಿಲ್ಲೆಗಳಲ್ಲಿ ಇಂದು ಬೆಳಗ್ಗೆ ಬಂದ್ ಬಿಸಿ ಕಾಣಲಿಲ್ಲ. ಇಲ್ಲಿ ಮಾಮೂಲಿಯ ಜನಜೀವನ ಇದೆ.

ಯಾವಾಗಲೂ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ಮಂಡ್ಯ ಕೂಡ ಯಥಾಸ್ಥಿತಿಯಲ್ಲಿದೆ. ರಾಜ್ಯಾದ್ಯಂತ ಬಂದ್ನ ಬಿಸಿ ಬೆಳಗಿನ ಜಾವ ಹೆಚ್ಚು ಇಲ್ಲವಾದರೂ ಹತ್ತು ಗಂಟೆಯ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ರಸ್ತೆಗಿಳಿಯುವುದರಿಂದ ಮಧ್ಯಾಹ್ನದಷ್ಟರಲ್ಲಿ ಬಂದ್ ಬಿಸಿ ತಾಕುವ ನಿರೀಕ್ಷೆ ಇದೆ. ಕೆಲವೆಡೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಕನ್ನಡಪರ ಮುಖಂಡರನ್ನ ವಶಕ್ಕೆ ಪಡೆದಿದ್ದಾರಾದರೂ ಪ್ರತಿಭಟನೆಗಳನ್ನ ತಡೆಯಲು ಸಾಧ್ಯವಾಗುವಂತೆ ತೋರುತ್ತಿಲ್ಲ.

ಗದಗ್ನಲ್ಲಿ ಪ್ರತಿಭಟನೆ ಜೋರು:

ಗದಗ ಜಿಲ್ಲೆಯಲ್ಲಿ ಕರ್ನಾಟಕ ಬಂದ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿವಿಧ ಮಾದರಿಯಲ್ಲಿ ಇಲ್ಲಿ ಪ್ರತಿಭಟನೆಗಳಾಗಿವೆ. ಮುಳಗುಂದದಲ್ಲಿ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ತಮಟೆ ಭಾರಿಸಿ, ಬಾಯಿ ಬಡಿದುಕೊಂಡು ಆಕ್ರೋಶ ಹೊರಹಾಕಿದರು. ಗದಗ ನಗರದ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಬಳಿ ಕರವೇ ಕಾರ್ಯಕರ್ತರು ಬಸ್ ತಡೆದು ಬಸ್ ಮುಂದೆಯೇ ಕುಳಿತು ಪ್ರತಿಭಟಿಸಿದರು. ಮುಳಗುಂದ ನಾಕಾದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ಬಂದ್ ಮಾಡಲಾಯಿತು. ಇಲ್ಲಿ ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ವಿನೂತನ ರೀತಿಯಲ್ಲಿ ಪ್ರತಿಭಟನೆಯನ್ನೂ ಮಾಡಲಾಯಿತು.

ಆನೇಕಲ್ನ ಅತ್ತಿಬೆಲೆ ಗಡಿಯಲ್ಲಿ ಕನ್ನಡ ಪರ ಸಂಘಟನೆಗಳು ಹೆದ್ದಾರಿ ತಡೆದರು. ದಾವಣಗೆರೆಯಲ್ಲಿ ಕರವೇ ಕಾರ್ಯಕರ್ತರು ಉರುಳು ಸೇವೆ ಮಾಡಿದರು. ಚಾಮರಾಜನಗರದಲ್ಲಿ ಟೈರ್ಗೆ ಬೆಂಕಿ ಹಚ್ಚಲಾಯಿತು. ಆನೇಕಲ್ನಲ್ಲೂ ಟೈರ್ಗೆ ಬೆಂಕಿ ಹಚ್ಚಿದ ಘಟನೆಗಳು ನಡೆದಿವೆ. ಕೆಲ ಕಡೆ ಪೊಲೀಸರು ಮುಂಜಾಗ್ರತೆ ವಹಿಸಿ ಪ್ರತಿಭಟನಾಕಾರರಿಂದ ಟೈರ್ಗಳನ್ನ ಕಸಿದುಕೊಂಡ ಘಟನೆಗಳೂ ಆಗಿವೆ. ಕೊಪ್ಪಳದಲ್ಲಿ ಟೈರ್ಗೆ ಬೆಂಕಿ ಹಚ್ಚಲಾಯಿತು. ಕನ್ನಡ ಪರ ಸಂಘಟನೆಗಳನ್ನ ಲೇವಡಿ ಮಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ ಅವರ ಅಣಕು ಶವ ಯಾತ್ರೆ ಮಾಡಲಾಯಿತು.

error: Content is protected !! Not allowed copy content from janadhvani.com