janadhvani

Kannada Online News Paper

ಬಾಬರೀ ಮಸ್ಜಿದ್ ಧ್ವಂಸ: ಆರೋಪಿಗಳು ನಿರ್ದೋಷಿಗಳು- ಭಾರತವನ್ನು ಬೆಚ್ಚಿಬೀಳಿಸಿದ ತೀರ್ಪು

ಬಾಬರಿ ಮಸೀದಿ ಕೆಡವಲು ಯಾವುದೇ ಸಂಚು ನಡೆದಿಲ್ಲ ಎಂದು ಹೇಳಿದರೆ ನಂಬಲು ಬಹಳ ಕಷ್ಟವಾಗುತ್ತದೆ. ನ್ಯಾಯಾಲಯ ಸುಮಾರು 500 ಸಾಕ್ಷಿಗಳನ್ನ ವಿಚಾರಣೆ ನಡೆಸಿದರೂ ಸಂಚು ನಡೆದಿದ್ದರ ಸುಳಿವು ಸಿಕ್ಕಿಲ್ಲವೆಂದಾಯಿತು. ಇದು ನಿಜಕ್ಕೂ ದೊಡ್ಡ ಅಚ್ಚರಿ. ಅಷ್ಟು ದೊಡ್ಡ ಗುಂಪು ತನ್ನಂತಾನೆ ಮಸೀದಿ ಸ್ಥಳಕ್ಕೆ ಬಂದು ಸೇರಲು ಅಸಾಧ್ಯ.

ಲಕ್ನೊ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕೇಸಿನಲ್ಲಿ ಆರೋಪಿಗಳಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಈ ಮೂಲಕ 28 ವರ್ಷಗಳ ದೀರ್ಘ ಕಾಲದ ಕಾನೂನು ಹೋರಾಟಕ್ಕೆ ಇಂದು ತಾತ್ವಿಕ ಅಂತ್ಯ ಸಿಕ್ಕಿದೆ.

ಭಾರತೀಯ ಇತಿಹಾಸದಲ್ಲೇ ಅತ್ಯಂತ ಕರಾಳ ಕೃತ್ಯವೆಸಗಿದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಸೇರಿದಂತೆ 32 ಮಂದಿ ಆರೋಪಿಗಳು ದೋಷ ಮುಕ್ತರು, ನಿರ್ದೋಷಿಗಳು ಎಂದು ಲಕ್ನೊ ಸಿಬಿಆ ವಿಶೇಷ ಕೋರ್ಟ್ ತೀರ್ಪು ನೀಡಿದೆ.

ಇದು ನಿಜಕ್ಕೂ ಭಾರತೀಯರನ್ನು ಅಕ್ಷರಶಃ ಬೆಚ್ಚಿ ಬೀಳುವಂತೆ ಮಾಡಿದೆ. ನ್ಯಾಯಾಂಗದ ಮೇಲಿನ ನಂಬಿಕೆ ನಷ್ಟ ಹೊಂದುವಂತೆ ಮಾಡಿರುವ ತೀರ್ಪೀನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಒಂದು ಆಕಸ್ಮಿಕ ಘಟನೆ, ಮಸೀದಿ ಧ್ವಂಸ ಒಂದು ಪೂರ್ವ ನಿಯೋಜಿತ ಕೃತ್ಯವಲ್ಲ, ಆರೋಪಿಗಳ ವಿರುದ್ಧ ಪೂರ್ವ ಪ್ರಬಲ ಸಾಕ್ಷಿಗಳಿಲ್ಲ ಎಂದು ನ್ಯಾಯಮೂರ್ತಿ ಯಾದವ್ ತೀರ್ಪು ಪ್ರಕಟಿಸಿದ್ದಾರೆ.

ಕ್ರಿಮಿನಲ್ ಕೃತ್ಯವೆಂದು ಸುಪ್ರೀಂ ಕೋರ್ಟ್: ಸಾಕ್ಷ್ಯ ಸಿಕ್ಕಿಲ್ಲ ಎಂದರೆ ನಂಬಲು ಅಸಾಧ್ಯ

1992ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಕರಸೇವಕರು ಕೆಡವಿದ ಆ ಸಂದರ್ಭದಲ್ಲಿ ಅಂದಿನ ಗೃಹ ಇಲಾಖೆ ಕಾರ್ಯದರ್ಶಿಯಾಗಿದ್ದ ಮಾಧವ್ ಗೋಡ್ಬೋಲೆ ಅವರು ಈ ತೀರ್ಪು ನಮ್ಮ ಅಪರಾಧ ನ್ಯಾಯಾಲಯ ವ್ಯವಸ್ಥೆಯ ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ತೀರ್ಪು ತಮಗೆ ಬಹಳ ದೊಡ್ಡ ಅಚ್ಚರಿ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪಿವಿ ನರಸಿಂಹರಾವ್ ಪ್ರಧಾನಿಯಾಗಿದ್ಧಾಗ ಗೃಹ ಇಲಾಖೆ ಕಾರ್ಯದರ್ಶಿಯಾಗಿದ್ದ ಮಾಧವ್ ಗೋಡ್ಬೊಲೆ ಅವರು ತಮ್ಮ ನಿವೃತ್ತಿಯ ನಂತರ ಬರೆದ ಪುಸ್ತಕದಲ್ಲಿ ಬಾಬ್ರಿ ಮಸೀದಿ ಕೆಡವಿದ ಸಂದರ್ಭಗಳನ್ನ ಮೆಲಕು ಹಾಕಿದ್ಧಾರೆ. 1992ರಲ್ಲಿ ಬಾಬ್ರಿ ಮಸೀದಿ ಕೆಡವುವ ಸಂಚು ರೂಪಿಸಿದ್ದು ಗೊತ್ತಾಗಿ ಅದನ್ನು ಉಳಿಸಲು ಮಾಧವ್ ಅವರು ಪ್ರಯತ್ನಿಸಿದ್ದರು.

ಮುನ್ನೆಚ್ಚರಿಕೆಯಾಗಿ ಸಂವಿಧಾನದ 356ನೇ ವಿಧಿಯನ್ನು ಬಳಕೆ ಮಾಡಿ ಬಾಬ್ರಿ ಕಟ್ಟಡವನ್ನು ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಎರಡು ದಿನಗಳ ಮುಂಚೆಯೇ ಗೃಹ ಸಚಿವಾಲಯವು ಆಗಿನ ಪ್ರಧಾನಿ ಪಿವಿ ನರಸಿಂಹ ರಾವ್ ಅವರನ್ನ ಕೇಳಿತು. ಆದರೆ, ಈ ಪಿವಿಎನ್ ರಾವ್ ತಮ್ಮದೇ ಕಾರಣವೊಡ್ಡಿ ಈ ಪ್ರಸ್ತಾವವನ್ನು ಒಪ್ಪಲಿಲ್ಲ ಎಂದು ಗೋಡ್ಬೋಲೆ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

“ಪ್ರಧಾನಿ ನರಸಿಂಹ ರಾವ್ ಅವರು ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವ ಸ್ಥಿತಿಯಲ್ಲಿದ್ದಂತೆ ತೋರಲಿಲ್ಲ. ಆರ್ಟಿಕಲ್ 356 ಅನ್ನು ಬಳಕೆ ಮಾಡಲು ರಾಜಕೀಯವಾಗಿ ಅವರಿಗೆ ಸಮ್ಮತವಾಗಿರಲಿಲ್ಲ. ಆ ವಿಚಾರದ ಬಗ್ಗೆ ಈಗ ಇಷ್ಟು ಮಾತ್ರ ಹೇಳಬಹುದು. ಅಂದಿನ ಸಂದರ್ಭದ ಬಗ್ಗೆ ಹೇಗಾದರೂ ಅರ್ಥೈಸಿಕೊಳ್ಳಬಹುದು” ಎಂದು ಹೇಳಿ ಕುತೂಹಲ ಮೂಡಿಸಿದ್ದಾರೆ.

ಬಾಬರಿ ಮಸೀದಿ ಕೆಡವಲು ಯಾವುದೇ ಸಂಚು ನಡೆದಿಲ್ಲ ಎಂದು ಹೇಳಿದರೆ ನಂಬಲು ಬಹಳ ಕಷ್ಟವಾಗುತ್ತದೆ. ನ್ಯಾಯಾಲಯ ಸುಮಾರು 500 ಸಾಕ್ಷಿಗಳನ್ನ ವಿಚಾರಣೆ ನಡೆಸಿದರೂ ಸಂಚು ನಡೆದಿದ್ದರ ಸುಳಿವು ಸಿಕ್ಕಿಲ್ಲವೆಂದಾಯಿತು. ಇದು ನಿಜಕ್ಕೂ ದೊಡ್ಡ ಅಚ್ಚರಿ. ಅಷ್ಟು ದೊಡ್ಡ ಗುಂಪು ತನ್ನಂತಾನೆ ಮಸೀದಿ ಸ್ಥಳಕ್ಕೆ ಬಂದು ಸೇರಲು ನನ್ನ ಪ್ರಕಾರ ಅಸಾಧ್ಯ.

ಆ ಘಟನೆಯಾಗಿ 28 ವರ್ಷಗಳ ನಂತರ ಈ ತೀರ್ಪು ಬಂದಿದೆ ಎಂದರೆ ಅದು ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಹಿಡಿದ ಕನ್ನಡಿ ಆಗಿದೆ. ಬಾಬ್ರಿ ಕಟ್ಟಡ ಕೆಡವಿದ್ದು ಕ್ರಿಮಿನಲ್ ಕೃತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿ ಆಗಿದೆ. ಆದರೆ, ಇದಕ್ಕೆ ಸಾಕ್ಷ್ಯ ಸಿಕ್ಕಿಲ್ಲ ಎಂದರೆ ನಂಬಲು ಕಷ್ಟ ಎಂದು ನಿವೃತ್ತ ಐಎಎಸ್ ಅಧಿಕಾರಿಯಾದ ಮಾಧವ್ ಗೋಡ್ಬೋಲೆ ಅಭಿಪ್ರಾಯಪಟ್ಟಿದ್ದಾರೆ

error: Content is protected !! Not allowed copy content from janadhvani.com