janadhvani

Kannada Online News Paper

ಕನ್ಹಯ್ಯ ಕುಮಾರ್ ಅವರ ಪೌರತ್ವ ರದ್ದುಗೊಳಿಸುವಂತೆ ಅರ್ಜಿ- 25 ಸಾವಿರ ದಂಡ ವಿಧಿಸಿದ ಕೋರ್ಟ್

ಅಲಹಾಬಾದ್‌: ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) 2016ರ ವೇಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಕನ್ಹಯ್ಯ ಕುಮಾರ್‌ ಮಾಡಿದ ಭಾಷಣ ಭಾರಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಭಾರತವನ್ನು ಟುಕಡೆ ಟುಕಡೆ (ತುಂಡು ತುಂಡು) ಮಾಡುವುದಾಗಿ ಕನ್ಹಯ್ಯ ಕುಮಾರ್‌ ದೇಶವಿರೋಧಿ ಘೋಷಣೆ ಕೂಗಿದ್ದಾರೆ ಎಂದು ವಿವಾದ ಸೃಷ್ಟಿಯಾಗಿತ್ತು.

ಇದನ್ನೇ ಮೂಲವಾಗಿಟ್ಟುಕೊಂಡು ಅಲಹಾಬಾದ್‌ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ದೇಶವಿರೋಧಿ ಘೋಷಣೆ ಕೂಗಿರುವ ಕನ್ಹಯ್ಯ ಕುಮಾರ್‌ ಅವರ ಪೌರತ್ವವನ್ನು ರದ್ದುಮಾಡಬೇಕು ಎನ್ನುವುದು ಈ ಅರ್ಜಿಯ ಉದ್ದೇಶವಾಗಿತ್ತು. ವಾರಣಾಸಿಯ ನಾಗೇಶ್ವರ ಮಿಶ್ರಾ ಎನ್ನುವವರು ಈ ಅರ್ಜಿ ಸಲ್ಲಿಸಿದ್ದರು.

ಕನ್ಹಯ್ಯ ಕುಮಾರ್ ಮತ್ತು ಅವರ ಬೆಂಬಲಿಗರು ಭಯೋತ್ಪಾದನಾ ಗುಂಪುಗಳನ್ನು ಬೆಂಬಲಿಸುತ್ತಿದ್ದಾರೆ. ದೇಶದ ಏಕತೆಯನ್ನು ಅಸ್ಥಿರಗೊಳಿಸಲು ಮತ್ತು ನಮ್ಮ ದೇಶದ ಶಾಂತಿಯನ್ನು ಭಂಗಗೊಳಿಸಲು ಪಾಕಿಸ್ತಾನದ ಪ್ರಚೋದನೆಯ ಮೇಲೆ ಕೆಲಸ ಮಾಡುತ್ತಿದ್ದಾರೆ” ಎಂದು ಅರ್ಜಿದಾರರು ಆರೋಪಿಸಿದ್ದರು. ಇಷ್ಟು ಗಂಭೀರ ಆರೋಪವಿದ್ದರೂ ಅವರ ವಿರುದ್ಧ ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ಆದರೆ ಈ ಅರ್ಜಿಗೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿರುವ ಅಲಹಾಬಾದ್‌ ಹೈಕೋರ್ಟ್‌, ಅರ್ಜಿಯನ್ನು ವಜಾ ಮಾಡಿರುವುದೂ ಮಾತ್ರವಲ್ಲದೇ ಅರ್ಜಿದಾರರಿಗೆ 25 ಸಾವಿರ ರೂಪಾಯಿಗಳ ದಂಡ ಹಾಕಿದೆ.

‘ಪೌರತ್ವವನ್ನು ಕಳೆದುಕೊಳ್ಳುವುದು ಗಂಭೀರ ಅಂಶವಾಗಿದೆ, ಏಕೆಂದರೆ ಇದು ಭಾರತದಲ್ಲಿ ವಾಸಿಸುವ ವ್ಯಕ್ತಿಯ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೇ, ದೇಹದ್ರೋಹಿ ಘೋಷಣೆ ಕೂಗಿರುವ ಆರೋಪದ ಕುರಿತಂತೆ ದೆಹಲಿಯ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗಿ ಇಲ್ಲಿ ಮತ್ತೊಂದು ಅರ್ಜಿ ಸಲ್ಲಿಸುವುದರಲ್ಲಿ ಅರ್ಥವಿಲ್ಲ’ ಎಂದು ಕೋರ್ಟ್‌ ಹೇಳಿದೆ.

‘ಭಾರತೀಯ ಪೌರತ್ವ ಕಾಯ್ದೆ-1955ರ ಸೆಕ್ಷನ್ 10ರ ಅನ್ವಯ ಕನ್ಹಯ್ಯ ಕುಮಾರ್ ಪೌರತ್ವ ರದ್ದುಪಡಿಸುವಂತೆ ಕೋರಿದ್ದೀರಿ. ಆದರೆ ಈ ಸೆಕ್ಷನ್‌ ಅಡಿಯ ಕಾನೂನು ಭಾರತೀಯರಲ್ಲದವರಿಗೆ ನೀಡಿದ ಪೌರತ್ವಕ್ಕೆ ಅನ್ವಯಿಸುತ್ತದೆಯೇ ವಿನಾ ಭಾರತದಲ್ಲೇ ಹುಟ್ಟಿದವರಿಗೆ ಅನ್ವಯಿಸುವುದಿಲ್ಲ. ಕೋರ್ಟ್‌ನ ಸಮಯವನ್ನು ಈ ರೀತಿ ವ್ಯರ್ಥ ಮಾಡುವುದು ಸರಿಯಲ್ಲ’ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿತು.

ಕರೊನಾ ಬಿಕ್ಕಟ್ಟಿನ ಇಂಥ ಸಮಯದಲ್ಲಿ ಇಂಥದ್ದೊಂದು ಅರ್ಜಿ ಸಲ್ಲಿಸಿ ಕೋರ್ಟ್‌ನ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಎಸ್.ಕೆ.ಗುಪ್ತ ನೇತೃತ್ವದ ಪೀಠ ಅರ್ಜಿಯನ್ನು ವಜಾ ಮಾಡಿ ದಂಡ ಹಾಕಿದೆ.

ಇದನ್ನೂ ಓದಿರಿ...