janadhvani

Kannada Online News Paper

ಭವ್ಯ ಭಾರತ ಸ್ವತಂತ್ರವಾಗಲಿ

ಸರ್ವರಿಗೂ 74 ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು


ಪ್ರಸಕ್ತ ಸನ್ನಿವೇಶದಲ್ಲಿ ಭಾರತ ದೇಶ ಮತ್ತೊಮ್ಮೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಣಿಯಾಗಬೇಕಿತ್ತೇನೋ? ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆ ರೂಪುಗೊಂಡು ಜಾರಿಯಾದ ಆತುರವನ್ನು ನೋಡಿದರೆ, ಅಷ್ಟೇ ಆತುರದಲ್ಲಿ ಅದರ ಜಾರಿ ಕೂಡಾ ಆಗುತ್ತಿತ್ತು. ಭಾರತದ ಸ್ವಾತಂತ್ರ್ಯಕ್ಕಾಗಿ ಮುಂಚೂಣಿಯಲ್ಲಿದ್ದು ದುಡಿದು ಮಡಿದ ಸಾವಿರಾರು ಮುಸ್ಲಿಮರ ಹಿಂಬಾಲಕರಾಗಿದ್ದುಕೊಂಡು ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸನ್ನದ್ಧರಾಗಿ ಎಂದು ಮುಸ್ಲಿಮ್ ಮೇಧಾವಿಗಳು ಕರೆಯೂ ಕೊಟ್ಟಿದ್ದರು.

ಆದರೆ, ಸೃಷ್ಟಿಕರ್ತನ ಆತುರ ಬೇರೇಯೇ ಅಗಿತ್ತು. ಕೊರೋನಾ ಎಂಬ ಮಹಾಮಾರಿಯನ್ನು ಕಳುಹಿಸಿ ಜಗತ್ತಿನ ಮಲ್ಲರನ್ನೆಲ್ಲಾ ಮಂಡಿಯೂರುವಂತೆ ಮಾಡಿತು. ಸಮುದಾಯವೊಂದನ್ನು ಗುರಿಯಾಗಿಟ್ಟುಕೊಂಡು ಗೃಹಬಂಧನಕ್ಕೆ ತಳ್ಳಿ ತಾವು ಹಾಯಾಗಿರಬಹುದೆಂದು ಭಾವಿಸಿದ್ದ ಗೃಹ ಸಚಿವರಾದಿ ಎಲ್ಲರನ್ನೂ ಕೊರೋನಾ ಗೃಹ ಬಂಧನದಲ್ಲಿರುವಂತೆ ಮಾಡಿತು.

ಆದರೂ, ಕೊರೋನಾದಿಂದ ಈ ದೇಶದ ಪ್ರಜ್ಞಾವಂತರೆನಿಸಿಕೊಂಡ ಹಲವರು ಇನ್ನೂ ಪಾಠ ಕಲಿತಂತೆ ಕಾಣುತ್ತಿಲ್ಲ. ಇಸ್ಲಾಮ್ ಎಂಬ ಧರ್ಮವನ್ನೇ ಜಗತ್ತಿನಿಂದ ನಿರ್ಮೂಲನೆ ಮಾಡಬೇಕೆಂದು ಹೇಳಿಕೆಗಳನ್ನು ಎಂಪಿಯೊಬ್ಬ ಕೊಡುವಲ್ಲಿಂದ (ಆ ಎಂಪಿಯ ಹೇಳಿಕೆಗಳು ಈಗ ಜಗತ್ತಿನಿಂದ ಕಣ್ಮರೆಯಾಗಿದೆ) ಹಿಡಿದು ಪ್ರವಾದಿ ಶ್ರೇಷ್ಠರ ನಿಂದನೆಗಳಾದಿಯಾಗಿ ಇಸ್ಲಾಂ ಮತ್ತು ಮುಸ್ಲಿಮರ ವಿರುದ್ಧದ ಕುತಂತ್ರದಿಂದ ಭಾರತೀಯ ಮುಸ್ಲಿಮರನ್ನು ರೊಚ್ಚಿಗೆಬ್ಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾಡುತ್ತಿರುವ ರಾಜಕೀಯದ ಆಟ ಎಂದಷ್ಟೇ ಹೇಳೋಣ.

ಭಾರತದ ಇತಿಹಾಸ ಹಿಂದೂ ಮುಸ್ಲಿಂ ಸೌಹಾರ್ದತೆಯನ್ನು ಸಾರುತ್ತಿದೆ. ಮಸೀದಿ ಕೆಡವಿ ಮಂದಿರ ಕಟ್ಟಬೇಕಾದ ಇತಿಹಾಸ ಭಾರತಕ್ಕೆ ಬಂದಿರಲಿಲ್ಲ. ಅಂದು ಹಿಂದೂಗಳು ತಮ್ಮ ಜಾಗವನ್ನು ಮಸೀದಿ ಕಟ್ಟಲು ನೀಡಿದ್ದರು. ಇದೀಗ ಭಾರತೀಯ ಮುಸ್ಲಿಮರು ಮಸೀದಿಯೊಂದನ್ನು ಮಂದಿರ ನಿರ್ಮಿಸಲು ನೀಡಿದ್ದಾರೆ ಅನ್ನಬಹುದು.

“ಒಂದೋ ನನಗೆ ಸ್ವತಂತ್ರ ಭಾರತವನ್ನು ನೀಡಿ, ಇಲ್ಲವೇ ಮರಣಿಸಿ ಮಲಗಲು ಆರಡಿ ಸ್ವತಂತ್ರಗೊಂಡ ಭೂಮಿ ಕೊಡಿ” ಎಂದು ಲಂಡನ್ ದುಂಡು ಮೇಜಿನ ಸಮ್ಮೇಳನದಲ್ಲಿ ಘರ್ಜಿಸಿ ವೀರ ಮೃತ್ಯು ವಹಿಸಿದ ಮುಹಮ್ಮದಲಿ ಜೌಹರ್ ಎಂಬ ವೀರ ಸೇನಾನಿಯಂತೆ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಇನ್ನೂ ನೂರಾರು ವೀರ ಮುಸ್ಲಿಂ ಹೋರಾಟಗಾರರನ್ನು ಕಾಣಬಹುದು.

ರಾಜ್ಯದ ಗೃಹಸಚಿವರ ಹೇಳಿಕೆಗಳು ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ತಮ್ಮ ಪಕ್ಷ ಮತ್ತು ಸಂಘಟನೆಗಳು ತಯಾರಾಗಿದೆ ಅನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತಿದೆ. ಭಾರತದ ನ್ಯಾಯಾಂಗ ಮತ್ತು ಕಾರ್ಯಾಂಗ ರಾಜಕೀಯದ ಕೈಗೊಂಬೆಗಳಾಗಿ ಮಾರ್ಪಾಡು ಹೊಂದುತ್ತಿದೆ ಅನ್ನಲು ಸಾಕಾಗುವಷ್ಟು ಗುಮಾನಿಗಳು ಅವುಗಳ ಕಾರ್ಯ ವೈಖರಿ ಸೂಚಿಸುತ್ತಿದೆ.

#यह_मिट्टी_हमारी (ಈ ಮಣ್ಣು ನಮ್ಮದು) ಎಂಬ ಘೋಷ ವಾಕ್ಯದಲ್ಲಿ ಭಾರತದಾದ್ಯಂತ ಮುಸ್ಲಿಂ ಸಂಘಟನೆಯ ವತಿಯಿಂದ ಸ್ವಾತಂತ್ರ್ಯ ಅಭಿಯಾನ ನಡೆಯುತ್ತಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಮಹಾ ಪುರುಷರನ್ನೆಲ್ಲಾ ನೆನಪು ಮಾಡಿಕೊಂಡು, ಈ ಮಣ್ಣಿನ ಋಣ ತೀರಿಸಿಕೊಳ್ಳಬೇಕಿದೆ. ಈ ಮಣ್ಣು ಭಾರತೀಯನದ್ದು, ಮುಸಲ್ಮಾನನದ್ದೂ ಅಲ್ಲ, ಹಿಂದೂವಿನದ್ದೂ ಅಲ್ಲ, ಕ್ರೈಸ್ತನದ್ದೂ ಅಲ್ಲ, ಧರ್ಮಗಳಿಗೆ, ಜಾತಿಗಳಿಗೆ ಅತೀತವಾಗಿ ಭಾರತೀಯತೆ ಮೆರೆದಾಗಲೇ ಭಾರತ ಮಾತೆ ಸಂತೃಪ್ತಳಾಗುವಳು.

ಭಾರತ ತನ್ನ 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಕೊರೋನಾ ಕಾಲದಲ್ಲಿ ಬಂದದ್ದರಿಂದ ಆಚರಣೆಗಳಿಗೆಲ್ಲಾ ನಿರ್ಬಂಧವಿದೆ. ಆದರೂ, ನಮ್ಮ ಮಾತೃಭೂಮಿಯ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಮನಗಳಲ್ಲಿ ಆಚರಿಸೋಣ. ಭಾರತ ಜಾತಿ ಧರ್ಮಗಳಿಗೆ ಅತೀತವಾಗಿ ಜಾತ್ಯಾತೀತ ಭಾರತವಾಗೇ ಉಳಿಯಲಿ. ಈ ಆಶಯಕ್ಕೆ ವಿರುದ್ಧವಾಗಿರುವ ಎಲ್ಲರ ಷಡ್ಯಂತ್ರಗಳು ಫಲಪ್ರದವಾಗದಿರಲಿ ಎಂದು ಆಶಿಸೋಣ. ಸರ್ವರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.

error: Content is protected !! Not allowed copy content from janadhvani.com