janadhvani

Kannada Online News Paper

ರಾಜಸ್ಥಾನ ಸಿಎಂ ವಿರುದ್ಧ ಮಾಯಾವತಿ ಗರಂ- ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹ

ನವದೆಹಲಿ: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಆಡಳಿತದ ರಾಜಸ್ಥಾನದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಆಗ್ರಹಿಸಿದ್ಧಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಎಸ್ಪಿ ಮುಖ್ಯಸ್ಥೆ ಮತ್ತು ಮಾಜಿ ಸಿಎಂ ಮಾಯಾವತಿ, ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ. ‘ರಾಜಸ್ಥಾನ ಸಿಎಂ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಹಿಂದೆ ಕಾಂಗ್ರೆಸ್ ಮುಖಂಡರು ಬಿಎಸ್ಪಿ ಶಾಸಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡರು. ಆಗ ಕಾಂಗ್ರೆಸ್ ಮಾಡಿದ ಕೆಲಸವೇ ಬಿಜೆಪಿ ಮಾಡುತ್ತಿದೆ. ಇವರು ತಮ್ಮ ಶಾಸಕರನ್ನು ಕಾಪಾಡಿಕೊಳ್ಳಲು ಬಿಜೆಪಿ ನಾಯಕರ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಹೀಗಾಗಿ ರಾಜಸ್ಥಾನದಲ್ಲಿ ರಾಷ್ಟ್ರಪತಿಗಳ ಆಡಳಿತ ಹೇರಬೇಕು’ ಎಂದು ಮಾಯಾವತಿ ಒತ್ತಾಯಿಸಿದ್ಧಾರೆ.

ಮತ್ತೊಂದು ಟ್ವೀಟ್ ಮಾಡಿರುವ ಮಾಯಾವತಿ, ರಾಜಸ್ಥಾನದ ಸದ್ಯದ ರಾಜಕೀಯ ಬಿಕ್ಕಟ್ಟಿನ ಬಗ್ಗೆ ರಾಜ್ಯಪಾಲರು ಸಂಪೂರ್ಣ ಮಾಹಿತಿ ಸಂಗ್ರಹಿಸಬೇಕು. ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡುವ ಮೂಲಕ ಪ್ರಜಾಪ್ರಭುತ್ವ ಉಳಿಸಬೇಕು’ ಎಂದು ಬರೆದುಕೊಂಡಿದ್ದಾರೆ.

ರಾಜಸ್ಥಾನದಲ್ಲಿ ರಾಜಕಾರಣಿಗಳ ಫೋನ್‌ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಅಶೋಕ್‌ ಗೆಹ್ಲೋಟ್‌ ಸರ್ಕಾರದ ಮೇಲೆ ಕೇಳಿ ಬಂದಿದೆ. ಈ ಸಂಬಂಧ ಸಿಬಿಐ ತನಿಖೆ ನಡೆಯಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಇತ್ತೀಚೆಗೆ ಕಾಂಗ್ರೆಸ್‌ ಬಿಜೆಪಿ ನಾಯಕರ ಆಡಿಯೋ ಟೇಪ್‌ ಒಂದನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿ ಶಾಸಕರ ಕುದುರೆ ವ್ಯಾಪಾರದ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ಕಾಂಗ್ರೆಸ್ ಹೇಳಿತ್ತು.

ಇನ್ನು, ಈ ಫೋನ್ ಟ್ಯಾಪಿಂಗ್ ಆಧಾರದ ಮೇಲೆ ಕಾಂಗ್ರೆಸ್‌, ಬಿಜೆಪಿ ಮೇಲೆ ಪೊಲೀಸರಿಗೆ ದೂರು ಕೂಡ ನೀಡಿತ್ತು. ಆದರೆ ಬಿಜೆಪಿಯ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಇದು ನನ್ನ ಧ್ವನಿಯಲ್ಲ ಎಂದಿದ್ದರು. ಜತೆಗೆ ಇದು ನಕಲಿ ಆಡಿಯೋ ಎಂದು ಬಿಜೆಪಿ ಹೇಳಿತ್ತು.

error: Content is protected !! Not allowed copy content from janadhvani.com