janadhvani

Kannada Online News Paper

ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿದ್ದ 187 ಕನ್ನಡಿಗರನ್ನು ಊರಿಗೆ ತಲುಪಿಸಿದ ಕೆಸಿಎಫ್

ರಿಯಾದ್: ಕೋವಿಡ್-19 ಕಾರಣದಿಂದ ವಿಮಾನಯಾನ ರದ್ದಾದ ಹಿನ್ನೆಲೆಯಲ್ಲಿ ಊರಿಗೆ ಹೋಗಲು ಆಗದೇ ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿ ಇದ್ದ 187 ಕನ್ನಡಿಗರನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯು ವಿಶೇಷ ಚಾರ್ಟೆಡ್ ವಿಮಾನಯಾನ ಮೂಲಕ ಊರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದೆ.

ಇದರಲ್ಲಿ 20 ಗರ್ಭಿಣಿಯರು, ಸಣ್ಣ ಮಕ್ಕಳು ಸಹಿತ 36 ಮಂದಿ ವಿಸಿಟಿಂಗ್ ವಿಸಾದಲ್ಲಿ ಸೌದಿಗೆ ಬಂದವರು, 73 ರೋಗಿಗಳು ಹಾಗೂ 58 ಮಂದಿ ಪ್ರಯಾಣಿಕರು ಕೆಲಸ ಕಳೆದುಕೊಂಡವರಾಗಿದ್ದರು.

ಜುಲೈ 9 ರಂದು 12.30ಕ್ಕೆ ದಮ್ಮಾಮ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ರಾತ್ರಿ 7.15ಕ್ಕೆ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ. ಯಾತ್ರೆಯ ಮೊದಲು ಪ್ರಯಾಣಿಕರಿಗೆ ಬೇಕಾದ ಸಂಪೂರ್ಣ ಮಾಹಿತಿಗಳನ್ನು ಕೆಸಿಎಫ್ ಕಾರ್ಯಕರ್ತರು ನೀಡುತ್ತಿದ್ದರು. ಕೋವಿಡ್-19 ಕಾರಣದಿಂದ ಪ್ರಯಾಣದ ಸಂದರ್ಭದಲ್ಲಿ ಧರಿಸಬೇಕಾದ PPE ಕಿಟ್, ದಮ್ಮಾಮಿನಲ್ಲಿ ಲಘು ಉಪಹಾರ, ಸಮಯ ವ್ಯರ್ಥವಾಗದಿರಲು ವಿಷೇಶ ಟಿಕೆಟಿಂಗ್ ವ್ಯವಸ್ಥೆ ಹೀಗೆ ಎಲ್ಲಾ ಕಾರ್ಯಗಳನ್ನು ಕೆಸಿಎಫ್ ಸೌದಿ ಅರೇಬಿಯಾ ಸಮಿತಿಯಿಂದ ಮಾಡಲಾಗಿತ್ತು.

ಊರಿನಲ್ಲಿರುವ ಕೆಸಿಎಫ್ ಕಾರ್ಯಕರ್ತರು ಹಾಗೂ SSF & SYS ನೇತಾರರು ಜವಾಬ್ದಾರಿ ವಹಿಸಿ ಕೋರೈಂಟನ್ ಗೆ ಬೇಕಾದ ಹೋಟೆಲ್ ಗಳ ವ್ಯವಸ್ಥೆಗಳನ್ನು ಮೊದಲೇ ಮಾಡಿಟ್ಟಿದ್ದರು. ಅದರಂತೆ ವಿಮಾನ ಮಂಗಳೂರಿಗೆ ತಲುಪಿದ ತಕ್ಷಣ ಎಮಿಗ್ರೇಷನ್ ವಿಧಾನಗಳನ್ನು ಆದಷ್ಟು ಬೇಗ ಪೂರ್ತಿಗೊಳಿಸಿ, ಲಘು ಉಪಹಾರ ಹಾಗೂ ಹೋಟಲಿಗೆ ಹೋಗಲು ಬಸ್ಸಿನ ವ್ಯವಸ್ಥೆಯನ್ನು ಜಿಲ್ಲಾಡಳಿತ ವತಿಯಿಂದ ಮಾಡಲಾಗಿತ್ತು. ಹೋಟೆಲಿಗೆ ತಲುಪಿದ ನಂತರದ ಊಟದ ವ್ಯವಸ್ಥೆಯನ್ನು ಕೆಸಿಎಫ್ ವತಿಯಿಂದ ಮಾಡಲಾಗಿತ್ತು.

ಪ್ರಯಾಣಿಕರಲ್ಲಿ ಒಬ್ಬರು ತೀರ ಅನಾರೋಗ್ಯದಿಂದಿದ್ದು ಅವರನ್ನು ಮಂಗಳೂರು ವಿಮಾನ ನಿಲ್ದಾಣದಿಂದ ಕೆಸಿಎಫ್ – ಆಂಬುಲನ್ಸ್ ಮೂಲಕ ನೇರವಾಗಿ ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಒಟ್ಟಿನಲ್ಲಿ ಯಾವುದೇ ತೊಂದರೆಗಳಿಲ್ಲದೆ ಎಲ್ಲರನ್ನೂ ಊರಿಗೆ ತಲುಪಿಸುವಲ್ಲಿ ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಯಶಸ್ವಿಯಾಗಿದೆ.

error: Content is protected !! Not allowed copy content from janadhvani.com