janadhvani

Kannada Online News Paper

ರಷ್ಯನ್ ರೆಫರೆಂಡಂ- ಜನರು ‘ತ್ಯಾಗ’ಕ್ಕೆ ಬಲಿಯಾಗಿ ಸರ್ವಾಧಿಕಾರಿಗಳಿಗೆ ಆಸರೆ ನೀಡುತ್ತಾರೆ

ಎಲ್ಲವೂ ನಿರೀಕ್ಷಿಸಿದಂತೆಯೇ ಆಗಿವೆ. ವ್ಲಾದಿಮಿರ್ ಪುಟಿನ್ ನಿವೃತ್ತರಾಗೋದಿಲ್ಲ. 2036ರವರೆಗೆ ರಷ್ಯಾ ಅಧ್ಯಕ್ಷರಾಗುವ ಅವರ ಮಹತ್ವಾಕಾಂಕ್ಷೆಗೆ ರಷ್ಯನ್ನರು ಒಪ್ಪಿಗೆಯ ಮುದ್ರೆ ಒತ್ತಿದ್ದಾರೆ. ಐತಿಹಾಸಿಕ ರಷ್ಯನ್ ರೆಫರೆಂಡಂ ಪರವಾಗಿ ಅಲ್ಲಿನ ಜನರು ನಿನ್ನೆ ಅಂತ್ಯಗೊಂಡ ಜನಮತಗಣನೆಯಲ್ಲಿ ಬಲವಾಗಿ ನಿಂತಿದ್ದಾರೆ.‌ ಬಿಬಿಸಿ ವರದಿಯ ಪ್ರಕಾರ 87% ಮತ ಎಣಿಕೆಯಲ್ಲಿ ಶೇ.77ರಷ್ಟು ಮಂದಿ ಸಂವಿಧಾನ ತಿದ್ದುಪಡಿಯ ಪರವಾಗಿ ಮತ ಚಲಾಯಿಸಿದ್ದಾರೆ.

ಮಾಸ್ಕೋದ ಕ್ರೆಮ್ಲಿನ್ ಎಲ್ಲದಕ್ಕೂ ಸಾಕ್ಷಿಯಾಗಿ ನಿಂತಿದೆ. ಅದು ಕೇವಲ ಇಟ್ಟಿಗೆ, ಗೋಡೆ, ಕೋಟೆ, ಚರ್ಚು,‌ ಅರಮನೆಗಳ ಸಂಕೀರ್ಣವಲ್ಲ. 13ನೇ ಶತಮಾನದಿಂದಲೂ ರಷ್ಯಾದ ಮಹತ್ವಪೂರ್ಣ ರಾಜಕೀಯ ಬೆಳವಣಿಗೆಗಳಿಗೆ ಅದು ಸಾಕ್ಷಿ.‌ ಕ್ರಾಂತಿ, ಯುದ್ಧ, ಸೋವಿಯತ್ ಯೂನಿಯನ್ ಪತನ ಎಲ್ಲವನ್ನೂ ಅದು ಉಸಿರಾಡಿದೆ. 14ನೇ ಶತಮಾನದಿಂದ 17ನೇ ಶತಮಾನದವರೆಗೆ ರಷ್ಯಾದ ಜಗತ್ಪ್ರಸಿದ್ಧ ವಾಸ್ತುಶಿಲ್ಪಿಗಳು ಕ್ರೆಮ್ಲಿನ್ ಕಟ್ಟಿದರು. ಅರಮನೆ, ಚರ್ಚು ಎಲ್ಲವೂ ಇಲ್ಲಿವೆ.‌ ಹದಿನೈದು ಪಾರಂಪರಿಕ ಕಟ್ಟಡಗಳು, ಇಪ್ಪತ್ತು ಗೋಪುರಗಳು. ಇಪ್ಪತ್ತೊಂದು ಅಡಿ ದಪ್ಪನಾದ ಒಂದೂವರೆ ಕಿ.ಮೀ. ಉದ್ದದ ಇಟ್ಟಿಗೆಯ ಗೋಡೆಗಳು. ಕ್ರೆಮ್ಲಿನ್ ಅಂದರೆ ಅಮೆರಿಕದ ವೈಟ್ ಹೌಸ್ ಇದ್ದಂತೆ. ಪುಟಿನ್ ಇಲ್ಲಿ ವಾಸವಿಲ್ಲದಿದ್ದರೂ ಅಧಿಕೃತವಾಗಿ ಇದೇ ವಾಸಸ್ಥಾನ. ಅದಕ್ಕೆ ರಷ್ಯಾ‌ ಸರ್ಕಾರವನ್ನು ಕ್ರೆಮ್ಲಿನ್ ಸರ್ಕಾರವೆಂದೇ ಸಂಬೋಧಿಸಲಾಗುತ್ತದೆ.

ಕ್ರೆಮ್ಲಿನ್ ಇಪ್ಪತ್ತು ವರ್ಷಗಳ ಕಾಲ ಪುಟಿನ್ ಆಡಳಿತವನ್ನು‌ ಕಂಡಿದೆ. ಈ ಇಪ್ಪತ್ತು ವರ್ಷಗಳಲ್ಲಿ ಪುಟಿನ್ ಅಧ್ಯಕ್ಷರಾಗಿದ್ದರು ಅಥವಾ ಪ್ರಧಾನಿಯಾಗಿದ್ದರು. ಪ್ರಧಾನಿಯಾಗಿದ್ದಾಗಲೂ ಅವರು ತಮ್ಮ ಕೈಗೊಂಬೆಯಂಥ ಅಧ್ಯಕ್ಷರನ್ನು ಹೊಂದಿದ್ದರು. ಈಗ ಆ ಉಸಾಬರಿಯೇ ಬೇಕಿಲ್ಲ. 2024ಕ್ಕೆ ಪುಟಿನ್ ಅಧಿಕಾರಾವಧಿ ಮುಗಿಯುತ್ತದೆ. ಅದಾದ ನಂತರ ತಲಾ ಆರು ವರ್ಷಗಳ ಇನ್ನೆರಡು ಅವಧಿಗೂ ಅವರು ಅಧ್ಯಕ್ಷರಾಗಬಹುದು.‌ ರಷ್ಯಾದ ಸಂವಿಧಾನದ ಪ್ರಕಾರ ಪುಟಿನ್ ಗೆ ಆ ಅವಕಾಶ ಇರಲಿಲ್ಲ. ಅದಕ್ಕಾಗಿ ಅವರು ಸಂವಿಧಾನವನ್ನೇ ಬದಲಿಸಿದರು, ಇನ್ನೂರಕ್ಕೂ ಹೆಚ್ಚು ತಿದ್ದುಪಡಿಗಳ ಜತೆ! ಜನ ಇದನ್ನು‌ ಬೆಂಬಲಿಸಿರುವುದಾಗಿ ಫಲಿತಾಂಶಗಳು ಹೇಳುತ್ತಿವೆ.

ಈ ಜನಮತಗಣನೆ ಒಂದು ಬಗೆಯಲ್ಲಿ ಪುಟಿನ್ ನಡೆಸಿದ ದೊಡ್ಡ ಪ್ರಹಸ‌ನ. ಸಂವಿಧಾನ ತಿದ್ದುಪಡಿಗಳಿಗೆ ಸಂಸತ್ತು ಅಂಗೀಕಾರ ನೀಡಿ ಆಗಿತ್ತು. ಅದು ಆಗಲೇ ಜಾರಿಯಾಗಿತ್ತು. ತಿದ್ದುಪಡಿಯಾದ ಸಂವಿಧಾನದ ಹೊಸ ಪುಸ್ತಕಗಳು ಪುಸ್ತಕದಂಗಡಿಗಳಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಆದರೆ‌ ಪುಟಿನ್ ಗೆ ತಮ್ಮ ಈ ಮಹತ್ತ್ವಾಕಾಂಕ್ಷೆಗೆ ಜನರ ಒಪ್ಪಿಗೆಯೂ ಇದ್ದರೆ ಅಂತಾರಾಷ್ಟ್ರೀಯ ಸಮುದಾಯ ತೆಪ್ಪಗಿರುತ್ತದೆ ಎಂಬ ಭಾವನೆ. ಅದಕ್ಕಾಗಿ ಚುನಾವಣೆಯ ಪ್ರಹಸನ, ಮತದಾರರಿಗೆ ಲಕ್ಕಿಡಿಪ್ ನಲ್ಲಿ ಅಪಾರ್ಟ್‌ಮೆಂಟ್, ಕಾರು ಗೆಲ್ಲುವ ಅವಕಾಶದ ಬಂಪರ್ ಆಫರ್! ಅಕ್ಷರಶಃ ಇದೊಂದು ಗೇಮ್ ಶೋ ಆಗಿಬಿಟ್ಟಿತು.

ಪುಟಿನ್ ಜೀವಿತಾವಧಿಯರೆಗೆ ಅಧ್ಯಕ್ಷರಾಗಿ ಮುಂದುವರೆಯಲು ಆಡಿದ ನಾಟಕ ಇದು ಎಂದು‌ ರಷ್ಯಾದ ವಿರೋಧಪಕ್ಷಗಳು ಟೀಕಿಸುತ್ತಿವೆ. ಆದರೆ ಈ ವಿರೋಧಪಕ್ಷಗಳು ಪುಟಿನ್ ಎದುರಲ್ಲಿ ಎಷ್ಟು ಶಕ್ತಿಹೀನವಾಗಿವೆ ಎಂದರೆ ರಷ್ಯನ್ನರು, ಏನು ಮಾಡೋದು ಹೇಳಿ, ಪುಟಿನ್ ಗೆ ಒಬ್ಬ ಪರ್ಯಾಯ ನಾಯಕನಾದರೂ ಎಲ್ಲಿದ್ದಾನೆ, ಪುಟಿನ್ ನಮಗೆ ಅನಿವಾರ್ಯ ಎನ್ನುತ್ತಿದ್ದಾರೆ. ಪುಟಿನ್ ವಿರೋಧ ಪಕ್ಷಗಳನ್ನು ಒಂದೇ ಕೊಂಡುಕೊಂಡರು ಅಥವಾ ನಿರ್ದಯವಾಗಿ ಹೊಸಕಿ ಹಾಕಿದರು. ಈಗ ಅವರಿಗೆ ಎದುರಾಗಿ ನಿಂತು ಸೆಣೆಸುವ ಶಕ್ತಿ ಯಾರಲ್ಲೂ ಇಲ್ಲ.

ಪುಟಿನ್ ಎಂಥ ಜಾಣನೆಂದರೆ ಸಂವಿಧಾನ ತಿದ್ದುಪಡಿಯಲ್ಲಿ ತನ್ನ ಅಧಿಕಾರಾವಧಿ ವಿಸ್ತರಿಸುವ ವಿಷಯವನ್ನು ಹೆಚ್ಚು ಮುನ್ನೆಲೆಗೆ ತರದೆ, ರಷ್ಯನ್ನರ ಸಾಂಪ್ರದಾಯಿಕ ಭಾವನೆಗಳು ಮತ್ತು ರಾಷ್ಟ್ರೀಯತೆಯನ್ನು ಬಡಿದೆಚ್ಚರಿಸುವ ಕೆಲಸ ಮಾಡಿಬಿಟ್ಟರು. ಸಂಪ್ರದಾಯವಾದಿಗಳ ಕೆಂಗೆಣ್ಣಿಗೆ ಗುರಿಯಾಗಿದ್ದ ಟ್ರಾನ್ಸ್ ಜೆಂಡರ್ ಗಳನ್ನು ಹಣಿದರು, ಅವರ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವ ಕಾನೂನು ಸೇರಿಸಿದರು. ರಷ್ಯಾದ ಭೂಪ್ರದೇಶದ ಮೇಲೆ ಅತಿಕ್ರಮಣ ಮಾಡುವ ಯಾವುದೇ ರೂಪದ ವಿದೇಶಿ ಶಕ್ತಿಗಳನ್ನು ಹತ್ತಿಕ್ಕುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವ ತಿದ್ದುಪಡಿ ತಂದರು. 1941ರಿಂದ 1947ರವರೆಗೆ ನಡೆದ ಮಹಾದೇಶಭಕ್ತಿಯ ರಷ್ಯನ್ ಯುದ್ಧ (ಎರಡನೇ ವಿಶ್ವ ಮಹಾಯುದ್ಧ)ದ ಐತಿಹಾಸಿಕ ಸತ್ಯಗಳನ್ನು ರಕ್ಷಿಸುವುದು ಮತ್ತು ಈ ಯುದ್ಧದಲ್ಲಿ ಹೋರಾಡಿದ ಸೈನಿಕರ ಯಶೋಗಾಥೆಯನ್ನು ಉಳಿಸಿಕೊಳ್ಳುವುದು ಕೂಡ ಸಂವಿಧಾನ ತಿದ್ದುಪಡಿಯ ಅಂಶಗಳಲ್ಲಿ ಒಂದಾಗಿತ್ತು. ರಷ್ಯನ್ನರು ತಮ್ಮ ಪೂರ್ವಜರಿಂದ ತಲತಲಾಂತರವಾಗಿ ಸ್ವೀಕರಿಸಿದ ‘ದೇವರ ಮೇಲಿನ ನಂಬಿಕೆ’ ಯನ್ನು ಈ ತಿದ್ದುಪಡಿಗಳು ಗೌರವಿಸುತ್ತವೆ ಮತ್ತು ಅಧಿಕೃತಗೊಳಿಸುತ್ತದೆ. ಜನರ ಭಾವನೆಗಳನ್ನು ಬಡಿದೆಬ್ಬಿಸಲು ಇನ್ನೇನು ಬೇಕು ಹೇಳಿ? ಚುನಾವಣೆಯ ದಿನ ಸೇನಾ ಸ್ಮಾರಕವೊ‌ಂದನ್ನು ಪುಟಿನ್ ಉದ್ಘಾಟಿಸಿ ಜನರಿಗೆ ಯಾವ ಸಂದೇಶ ತಲುಪಿಸಬೇಕೋ ಅದನ್ನು ತಲುಪಿಸಿದರು. ಎಲ್ಲ ಪೋಲಿಂಗ್ ಸ್ಟೇಷನ್ ಗಳಲ್ಲೂ ಪುಟಿನ್ ಫೊಟೋಗಳ‌ನ್ನು ಗೋಡೆಗಳಿಗೆ ತೂಗು ಹಾಕಲಾಗಿತ್ತು. ಫಲಿತಾಂಶ ಇನ್ನು ಹೇಗೆ ಬರಲು ಸಾಧ್ಯ ಹೇಳಿ?

ಇದು ಚುನಾವಣೆಯೇ ಅಲ್ಲ, ಚುನಾವಣೆಯ ಪ್ರಾಥಮಿಕ ನಿಯಮಗಳನ್ನೂ ಪಾಲಿಸಲಾಗಿದೆ. ಬೋಗಸ್ ವೋಟಿಂಗ್ ಮಾಡಲಾಗಿದೆ. ಪುಟಿನ್ ವಿರೋಧಿಗಳು ಇರುವ ಪ್ರಾಂತ್ಯಗಳಲ್ಲಿ ಬೇಗ ವೋಟಿಂಗ್ ನಿಲ್ಲಿಸಲಾಗಿದೆ… ಇತ್ಯಾದಿ ಇತ್ಯಾದಿ ಕೂಗು ಅಲ್ಲಿ ಇಲ್ಲಿ ಕೇಳಿಬರುತ್ತಿದೆ. ಇದು ದೇಶದ ಪಾಲಿನ ಕರಾಳ ದಿನ. ಉದಾರವಾದಿ ಚಿಂತನೆಗಳಿಗೆ ದೊಡ್ಡ ಹೊಡೆತ ಎಂದು ಹಲವರು ಹೇಳುತ್ತಿದ್ದಾರೆ. ಅದೆಲ್ಲ ಈಗ ಅಪ್ರಸ್ತುತ. ಇಡೀ ರಷ್ಯಾಗೆ, ಜಗತ್ತಿಗೆ ಪುಟಿನ್ ಏನನ್ನು ಹೇಳಬೇಕಿತ್ತೋ ಅದನ್ನು ಹೇಳಿದ್ದಾರೆ.

ಈ ಐತಿಹಾಸಿಕ ಜನಮತಗಣನೆಯನ್ನು ಜಗತ್ತಿನಾದ್ಯಂತ ನೂರಾರು ರಾಜಕೀಯ ನಾಯಕರು ಕುತೂಹಲದಿಂದ ಗಮನಿಸುತ್ತಿದ್ದರು. ಪುಟಿನ್ ರೂಪಿಸಿದ ಈ ಮಾದರಿ ಪ್ರಜಾಪ್ರಭುತ್ವದ ಮರೆಯಲ್ಲಿ ಸರ್ವಾಧಿಕಾರದ ಆಟವಾಡುತ್ತಿರುವ ಎಲ್ಲ ನಾಯಕರಿಗೆ ಹೊಸ ಆದರ್ಶ. ಸರ್ವಾಧಿಕಾರಿಗಳು ಈಗ ಹೊಸಹೊಸ ರೂಪದಲ್ಲಿ ಅವತರಿಸುತ್ತಿದ್ದಾರೆ. ಹಿಂದೆಲ್ಲ ಸರ್ವಾಧಿಕಾರಿಗಳು ಮಿಲಿಟರಿ ಕ್ಷಿಪ್ರ ಕ್ರಾಂತಿಯ ಮೂಲಕ ಅಧಿಕಾರದ ಗದ್ದುಗೆ ಹಿಡಿಯುತ್ತಿದ್ದರು. ಈಗ ಅಷ್ಟೆಲ್ಲ ತ್ರಾಸ ಪಡಬೇಕಾಗಿಲ್ಲ. ತಮ್ಮ ಸರ್ವಾಧಿಕಾರತ್ವಕ್ಕೆ ಜನರಿಂದಲೇ ಒಪ್ಪಿಗೆಯ ಮುದ್ರೆ ಪಡೆದುಬಿಟ್ಟರೆ ಸಾಕಲ್ಲವೇ? ಅದಕ್ಕಾಗಿ ಜನರಲ್ಲಿ ಅಲ್ಟ್ರಾ ನ್ಯಾಷನಲಿಸಂ, ಸಾಂಪ್ರದಾಯಿಕ ಭಾವನೆಗಳನ್ನು ಕೆರಳಿಸಿದರೆ ಸಾಕು, ಐದಾರು ಅಲ್ಲ ಐವತ್ತು ವರ್ಷಕ್ಕೂ ಅವರನ್ನೇ ಆಯ್ಕೆ ಮಾಡುತ್ತಾರೆ. ಅದು ತಮ್ಮದೇ ಸಮಾಧಿಗಳ ಮೇಲಿನ ಸೌಧವಾದರೂ ಸರಿ, ಜನರು ‘ತ್ಯಾಗ’ಕ್ಕೆ ಬಲಿಯಾಗಿ ಸರ್ವಾಧಿಕಾರಿಗಳಿಗೆ ಆಸರೆ ನೀಡುತ್ತಾರೆ.

ಕ್ರೆಮ್ಲಿನ್ ಈಗ ಹೊಸ ಬಗೆಯ ಸರ್ವಾಧಿಕಾರಿಗೆ ಸಾಕ್ಷಿಯಾಗಿದೆ. ರಷ್ಯಾ ಇನ್ನುಮುಂದೆ ಅಪ್ಪಟ ಸಂಪ್ರದಾಯವಾದಿ ರಾಷ್ಟ್ರ. ಈ ಸಂಪ್ರದಾಯವಾದದ ನೆರಳಿ‌ನಲ್ಲೇ ಅಲ್ಲಿ ದೇಶಭಕ್ತಿಯ ಹೂವುಗಳು ಅರಳಿ ನಳನಳಿಸಲಿದೆ. ಪುಟಿನ್ ಬದುಕಿದ್ದರೆ ಇನ್ನೂ ಹದಿನಾರು ವರುಷ ಇದರ ಮಾಲೀಕರಾಗಿ ಇರಲಿದ್ದಾರೆ.

ದಿನೇಶ್ ಕುಮಾರ್ ಎಸ್ ಸಿ

error: Content is protected !! Not allowed copy content from janadhvani.com