ಕಾರಕಾಸ್: ವೆನೆಜುವೆಲಾದಲ್ಲಿ ಸಂಭವಿಸಿದ ಅವಳಿ ಭೂಕಂಪದ ಕಟ್ಟಡದ ಅವಶೇಷಗಳ ಅಡಿಯಿಂದ 18 ದಿನಗಳ ಹಸುಗೂಸು ಮತ್ತು ಆತನ ತಾಯಿಯನ್ನು ಪವಾಡಸದೃಶವಾಗಿ ರಕ್ಷಿಸಲಾಗಿದೆ. ವೆನೆಜುವೆಲಾದ ಇತಿಹಾಸದಲ್ಲೇ ಅತ್ಯಂತ ಭೀಕರ ನೈಸರ್ಗಿಕ ವಿಕೋಪ ಎಂದು ಬಣ್ಣಿಸಲಾಗುತ್ತಿರುವ ಈ ಘಟನೆಯಲ್ಲಿ, ಕುಸಿದು ಬಿದ್ದ ಮನೆಯ ಅವಶೇಷಗಳ ನಡುವೆ ಸಾವಿನೊಂದಿಗೆ ಹೋರಾಡಿ ಡಯಾನಾ ಪಟಿನೋ ನಡೆಸಿದ ಬದುಕುಳಿಯುವಿಕೆಯ ಹೋರಾಟ ಎಲ್ಲರನ್ನೂ ಬೆರಗುಗೊಳಿಸುವಂತಿದೆ.
ಲಾ ಗ್ವಾಯರಾದಲ್ಲಿನ 8ನೇ ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದ ಡಯಾನಾಗೆ ಭೂಕಂಪವು ಮೊದಲು ಸಣ್ಣ ನಡುಕದಂತೆ ಅನಿಸಿತು. ದೊಡ್ಡ ಅಪಾಯವೇನೂ ಆಗಲಿಕ್ಕಿಲ್ಲ ಎಂದು ಭಾವಿಸಿ ಅವರು ಸ್ವಲ್ಪ ಸಮಯ ಕಾಯ್ತು ನಿಂತರು. ಆದರೆ ನೋಡನೋಡುತ್ತಿದ್ದಂತೆಯೇ ಕಟ್ಟಡವು ಜೋರಾಗಿ ನಡುಗಲು ಪ್ರಾರಂಭಿಸಿದಾಗ, ಡಯಾನಾ ತಮ್ಮ ಮಗು ಜುವಾನ್ ಡೇವಿಡ್ ಮಲಗಿದ್ದ ಕೋಣೆಯತ್ತ ಓಡಿದರು. ಮಗನನ್ನು ಎತ್ತಿಕೊಂಡು ಗಟ್ಟಿಯಾಗಿ ಅಪ್ಪಿಕೊಳ್ಳುವುದೊಂದೇ ಆ ಸಮಯದಲ್ಲಿ ಅವರ ಗುರಿಯಾಗಿತ್ತು.
“ನಾನು ಅವ್ನನ್ನು ಎದೆಗೆ ಅಪ್ಪಿಕೊಂಡ ಮರುಕ್ಷಣವೇ ಕಟ್ಟಡವು ಸಂಪೂರ್ಣವಾಗಿ ಕುಸಿಯಲು ಪ್ರಾರಂಭಿಸಿತು. ನಾನು ಆಕಾಶದಿಂದ ಕೆಳಗೆ ಹಾರಿ ಬೀಳುತ್ತಿರುವಂತೆ ನನಗನಿಸಿತು. ಆಮೇಲೆ ನೀರು ಮತ್ತು ಮಣ್ಣಿನ ರಾಶಿಯೊಳಗೆ ಬಿದ್ದೆ. ಮಂಚ ಹಾಗೂ ಪೀಠೋಪಕರಣಗಳ ನಡುವೆ ನಾನು ನಜ್ಜುಗುಜ್ಜಾಗಿ ಸಿಲುಕಿಕೊಂಡೆ. ಅಷ್ಟೊಂದು ಭೀಕರವಾದ ಪತನದಲ್ಲೂ ನಾನು ನನ್ನ ಮಗನನ್ನು ಕೈಬಿಡದೆ ಹೇಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದೆ ಎಂಬುದು ಇಂದಿಗೂ ನನಗೆ ಆಶ್ಚರ್ಯ ತರುತ್ತದೆ,” ಎಂದು ಡಯಾನಾ ಆ ಭೀಕರ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ಅವಶೇಷಗಳ ನಡುವೆ ಕತ್ತಲೆ ಮತ್ತು ಉಸಿರುಗಟ್ಟುವ ವಾತಾವರಣದಲ್ಲಿ ಸಿಲುಕಿದ್ದ ಡಯಾನಾ ಅವರ ಎಡಗಾಲು ಕಾಂಕ್ರೀಟ್ ಅಡಿಯಲ್ಲಿ ಸಿಲುಕಿಕೊಂಡಿದ್ದರಿಂದ ಅವರಿಗೆ ಕದಲಲು ಸಹ ಸಾಧ್ಯವಾಗುತ್ತಿರಲಿಲ್ಲ. ತಲೆ ಒಂದು ಕಲ್ಲಿಗೆ ತಾಗಿ ಒತ್ತುತಿತ್ತು. ಭಯ ಆವರಿಸುತ್ತಿದ್ದರೂ, ಮಗ ಜುವಾನ್ ಡೇವಿಡ್ ತನ್ನ ಪಕ್ಕದಲ್ಲೇ ಇದ್ದಾನೆ ಎಂಬ ಅರಿವು ಅವರಿಗೆ ದೊಡ್ಡ ಸಮಾಧಾನ ತಂದಿತ್ತು. “ಅವನು ಉಸಿರಾಡುತ್ತಿರುವ ತನಕ ನಾನು ಬದುಕಿರುತ್ತೇನೆ. ಅವನು ಉಸಿರಾಡುತ್ತಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳಲು ನಾನು ಆಗಾಗ ಅವನ ಮೂಗನ್ನು ಮುಟ್ಟಿ ನೋಡುತ್ತಿದ್ದೆ. ಆ ಉಸಿರಾಟವೇ ನನ್ನನ್ನು ಎಚ್ಚರದಿಂದಿರುವಂತೆ ಮತ್ತು ಧೈರ್ಯವಾಗಿ ಉಳಿಯುವಂತೆ ಪ್ರೇರೇಪಿಸಿತು,” ಎನ್ನುತ್ತಾರೆ ಡಯಾನಾ.
ಮೊದಲು ಸಹಾಯಕ್ಕಾಗಿ ಸಾಕಷ್ಟು ಕಿರುಚಾಡಿದರೂ ಯಾರೂ ತನ್ನ ಧ್ವನಿಯನ್ನು ಕೇಳುತ್ತಿಲ್ಲ ಎಂದು ಮನಗಂಡ ಡಯಾನಾ, ಅನಾವಶ್ಯಕವಾಗಿ ಶಕ್ತಿಯನ್ನು ವ್ಯರ್ಥ ಮಾಡಬಾರದೆಂದು ನಿರ್ಧರಿಸಿದರು. ಯಾರಾದರೂ ಬರುವ ಸದ್ದು ಅಥವಾ ಹೆಜ್ಜೆಯ ಸಪ್ಪಳ ಕೇಳಿದಾಗ ಮಾತ್ರ ಕಿರುಚಲು ನಿರ್ಧರಿಸಿದರು. ಕೊನೆಗೆ ಅವಶೇಷಗಳ ನಡುವೆ ತನ್ನ ಸಹೋದರ ತನ್ನ ಹೆಸರನ್ನು ಕೂಗುತ್ತಿರುವುದನ್ನು ಕೇಳಿದಾಗ, ಡಯಾನಾ ತನ್ನಲ್ಲಿದ್ದ ಇಡೀ ಶಕ್ತಿಯನ್ನು ಒಟ್ಟುಗೂಡಿಸಿ ಜೋರಾಗಿ ಕಿರುಚಿದರು. ನಂತರ, ರಕ್ಷಣಾ ಸಿಬ್ಬಂದಿ ಗಂಟೆಗಳ ಕಾಲ ಸುದೀರ್ಘ ಕಾರ್ಯಾಚರಣೆ ನಡೆಸಿ ರಾತ್ರಿ ವೇಳೆಗೆ ಇಬ್ಬರನ್ನೂ ಸುರಕ್ಷಿತವಾಗಿ ಹೊರಗೆ ತೆಗೆದರು.
ಭೂಕಂಪ ಸಂಭವಿಸಿದ ಸಮಯದಲ್ಲಿ ಕಾರು ಪಾರ್ಕ್ ಮಾಡಿ ಮನೆಗೆ ಮರಳುತ್ತಿದ್ದ ಪತಿ ಗೆರ್ಸನ್, ತನ್ನ ಮನೆ ಸಂಪೂರ್ಣವಾಗಿ ಧ್ವಂಸಗೊಂಡಿರುವುದನ್ನು ನೋಡಿ ದಿಗ್ಭ್ರಮೆಗೊಂಡಿದ್ದರು. ಪತ್ನಿ ಮತ್ತು ಮಗು ಇಬ್ಬರೂ ತೀರಿಕೊಂಡಿದ್ದಾರೆ ಎಂದುಕೊಂಡಿದ್ದ ಅವರಿಗೆ, ಅವರಿಬ್ಬರೂ ಜೀವಂತವಾಗಿ ಸಿಕ್ಕಿರುವುದು ಒಂದು ದೊಡ್ಡ ಪವಾಡದಂತೆ ಭಾಸವಾಗಿದೆ. “ನನ್ನ ಮಗನನ್ನು ನೋಡಿದ ಕ್ಷಣ ನನಗೆ ಮರುಜನ್ಮ ಸಿಕ್ಕಂತಾಯಿತು. ನನಗೆ ಅದನ್ನು ನಂಬಲು ಸಾಧ್ಯವಾಗುತ್ತಿರಲಿಲ್ಲ…” ಎಂದು ಗೆರ್ಸನ್ ಭಾವುಕರಾಗಿ ನುಡಿದರು.
ರಿಕ್ಟರ್ ಮಾಪಕದಲ್ಲಿ 7.2 ಮತ್ತು 7.5 ರಷ್ಟು ತೀವ್ರತೆ ದಾಖಲಾದ ಈ ಭೀಕರ ಭೂಕಂಪದಲ್ಲಿ ಕನಿಷ್ಠ 1,450 ಜನರು ಸಾವನ್ನಪ್ಪಿದ್ದಾರೆ ಮತ್ತು ಹತ್ತಾರು ಸಾವಿರ ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಮನೆ ಹಾಗೂ ತಮ್ಮ ಸಂಪಾದನೆಯನ್ನೆಲ್ಲಾ ಕಳೆದುಕೊಂಡಿದ್ದರೂ, ಪ್ರಾಣದೊಂದಿಗೆ ಮರಳಿ ಸಿಕ್ಕ ಕುಟುಂಬದ ಸಂತೋಷದಲ್ಲಿ ಈ ದಂಪತಿಗಳಿದ್ದಾರೆ. “ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ, ಆದರೆ ನಾವಿಂದು ಒಟ್ಟಿಗೆ ಇಲ್ಲೇ ಇದ್ದೇವೆ.” ಕಳೆದುಕೊಂಡಿದ್ದನ್ನೆಲ್ಲಾ ಮತ್ತೆ ಕಟ್ಟಿ ಬೆಳೆಸುತ್ತೇವೆ ಎಂಬ ದೃಢ ಸಂಕಲ್ಪದಲ್ಲಿದ್ದಾರೆ ಡಯಾನಾ ಮತ್ತು ಗೆರ್ಸನ್. ಡಯಾನಾ ಅವರ ಕಾಲಿಗೆ ಗಾಯಗಳಾಗಿದ್ದರೂ, ಮಗು ಜುವಾನ್ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶವಾಗಿ ಪಾರಾಗಿದ್ದಾನೆ.
















ಇನ್ನಷ್ಟು ಸುದ್ದಿಗಳು
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ಒಪ್ಪಂದವನ್ನು ಗಾಳಿಗೆ ತೂರಿ ಇರಾನ್ ಮೇಲೆ ಯುಎಸ್ ದಾಳಿ- ಗಲ್ಫ್ ವಲಯದಲ್ಲಿ ಮತ್ತೆ ಆತಂಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ: ನಾಳೆ (ಜುಲೈ 8) ಶಾಲಾ-ಕಾಲೇಜುಗಳಿಗೆ ರಜೆ
ಅಜ್ಜಿನಡ್ಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ